Bajrang Punia, Delhi High Court 
ಸುದ್ದಿಗಳು

ತಾತ್ಕಾಲಿಕ ಅಮಾನತು: ಕುಸ್ತಿಪಟು ಬಜರಂಗ್ ಪುನಿಯಾಗೆ ಮಧ್ಯಂತರ ಪರಿಹಾರ ನೀಡದ ದೆಹಲಿ ಹೈಕೋರ್ಟ್

ಉದ್ದೀಪನ ಮದ್ದು ಪರೀಕ್ಷೆಗೆ ಮಾದರಿ ನೀಡದ ಆರೋಪಕ್ಕೆ ಸಂಬಂಧಿಸಿದಂತೆ ಬಜರಂಗ್ ಪುನಿಯಾ ಮೇಲೆ ಎನ್ಎಡಿಎ (ನಾಡಾ) ತಾತ್ಕಾಲಿಕ ಅಮಾನತು ಹೇರಿತ್ತು. ಆದರೆ ತನ್ನನ್ನು ಗುರಿಯಾಗಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪುನಿಯಾ ಆರೋಪಿಸಿದ್ದರು.

Bar & Bench

ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಒಪ್ಪದ ಕುಸ್ತಿಪಟು ಬಜರಂಗ್‌ ಪುನಿಯಾ ಅವರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ   ದೆಹಲಿ ಹೈಕೋರ್ಟ್ ಬುಧವಾರ ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ಸಂಸ್ಥೆಗೆ (ನಾಡಾ) ನೋಟಿಸ್ ಜಾರಿ ಮಾಡಿದೆ.

ಆದರೆ ಪುನಿಯಾ ಅವರಿಗೆ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ನ್ಯಾ. ಸಂಜೀವ್‌ ನರುಲಾ ಅವರು ಅಕ್ಟೋಬರ್‌ಗೆ ಪ್ರಕರಣ ಮುಂದೂಡಿದರು.

ಮಧ್ಯಂತರ ಪರಿಹಾರ ಕೋರಿ ಪುನಿಯಾ ಪರವಾಗಿ ಹಿರಿಯ ವಕೀಲ ರಾಜೀವ್ ದತ್ತಾ ವಾದ ಮಂಡಿಸಿದರೂ ಈ ಸಂಬಂಧ ನಿರ್ದೇಶನ ನೀಡಲು ನ್ಯಾಯಾಲಯ ನಿರಾಕರಿಸಿತು.

ಉದ್ದೀಪನ ಮದ್ದು ಪರೀಕ್ಷೆಗೆ ಮಾದರಿ ನೀಡದ ಆರೋಪಕ್ಕೆ ಸಂಬಂಧಿಸಿದಂತೆ ಬಜರಂಗ್ ಪುನಿಯಾ ಮೇಲೆ ಎನ್ಎಡಿಎ (ನಾಡಾ) ತಾತ್ಕಾಲಿಕ ಅಮಾನತು ಹೇರಿತ್ತು. ಆದರೆ ತನ್ನನ್ನು ಗುರಿಯಾಗಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪುನಿಯಾ ಆರೋಪಿಸಿದ್ದರು.

ಪುನಿಯಾ ಪರೀಕ್ಷೆಗೆ ಸಂಬಂಧಿಸಿದ ಮಾದರಿ ನೀಡಲು ಎಂದಿಗೂ ನಿರಾಕರಿಸಿರಲಿಲ್ಲ. ಆದರೆ ಪರೀಕ್ಷೆ ವೇಳೆ ಅವಧಿ ಮೀರಿದ ಕಿಟ್‌ ಬಳಸುತ್ತಿರುವ ಬಗ್ಗೆ ನೀಡಲಾದ ದೂರಿನ ಕುರಿತು ಕೈಗೊಳ್ಳಲಾದ ಕ್ರಮಗಳ ಬಗ್ಗೆ ನಾಡಾವನ್ನು ಕೇಳಿದ್ದರು ಎಂದು ದತ್ತಾ ಸಮರ್ಥಿಸಿಕೊಂಡರು.

ಪುನಿಯಾ ಈಗಲೂ ಪರೀಕ್ಷೆಗೆ ಮಾದರಿ ನೀಡಲು ಸಿದ್ಧರಿದ್ದು ಮುಂಬರುವ ಹಿರಿಯ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದರೆ, ಅದು ಅವರ ವೃತ್ತಿಜೀವನದ ಅಂತ್ಯವಾಗಲಿದೆ ಎಂದು ದತ್ತಾ ತಿಳಿಸಿದರು. ಆದರೆ, ಅರ್ಜಿಯಲ್ಲಿ ಮಧ್ಯಂತರ ಪರಿಹಾರಕ್ಕಾಗಿ ಯಾವುದೇ ಮನವಿ ಮಾಡಿಲ್ಲ ಎಂದು ಪೀಠ ಹೇಳಿತು.

ಈ ಮಧ್ಯೆ ನಾಡಾ ಪರ ವಕೀಲರು ಪ್ರಕರಣದಲ್ಲಿ ಅಂತಿಮ ವಿಚಾರಣೆ ನಡೆಸಲೆಂದು ಈಗಾಗಲೇ ಸಮಿತಿ ರಚಿಸಲಾಗಿದೆ ಎಂದರು.

ನಾಡಾ ಯಾವುದೇ ಅಥ್ಲಿಟ್‌ಗಳನ್ನು ಕೆಳನೂಕಲು ಬಯಸದು. ತಮ್ಮನ್ನು ಗುರಿಯಾಗಿಸಲಾಗುತ್ತಿದೆ ಎಂದು ಪುನಿಯಾ ಹೇಳುತ್ತಿದ್ದಾರೆ. ಆದರೆ  ಅದು ಸರಿಯಲ್ಲ. ನಾವು ಪ್ರಕರಣವನ್ನು ಪರಿಶೀಲಿಸಿದ್ದು ಸಮಿತಿ ಅಂತಿಮ ವಿಚಾರಣೆ ನಡೆಸಲಿದೆ. ಈ ರೀತಿಯ ದಾವೆ ವಿಚಾರಣೆಯ ದಿಕ್ಕುತಪ್ಪಿಸುತ್ತದೆ. ಅವರು ದೇಶಕ್ಕಾಗಿ ಆಡುವುದನ್ನು ನಾಡಾ ಬಯಸುತ್ತದೆ ಎಂದರು.

ಬಜರಂಗ್ ಪುನಿಯಾ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.