Arvind Kejriwal with Excise Policy Case  
ಸುದ್ದಿಗಳು

ದೆಹಲಿ ಅಬಕಾರಿ ನೀತಿ ಪ್ರಕರಣ: ಕೆಲ ಆರೋಪಿಗಳನ್ನು 'ಸೌತ್‌ ಗ್ರೂಪ್‌' ಎಂದ ಸಿಬಿಐಗೆ ದೆಹಲಿ ನ್ಯಾಯಾಲಯ ತೀವ್ರ ತರಾಟೆ

“ಆರೋಪಿಗಳ ವಿವರಣೆ ಕಟ್ಟುನಿಟ್ಟಾಗಿ ತಟಸ್ಥವಾಗಿರಬೇಕು, ಸಾಕ್ಷ್ಯಾಧಾರಿತವಾಗಿರಬೇಕು, ಅಪಕೀರ್ತಿ, ವಿಭಜನೆ ತರುವ ಇಲ್ಲವೇ ತಿರಸ್ಕಾರ ಪದಗಳಿಂದ ಮುಕ್ತವಾಗಿರಬೇಕು” ಎಂದು ನ್ಯಾಯಾಲಯ ಕಿವಿ ಹಿಂಡಿತು.

Bar & Bench

ದೆಹಲಿ ಮದ್ಯ ನೀತಿ ಪ್ರಕರಣದ ಕೆಲವು ಆರೋಪಿಗಳಿಗೆ 'ಸೌತ್ ಗ್ರೂಪ್ʼ ಎಂಬ ಪದ ಬಳಸಿದ ಹಿನ್ನೆಲೆಯಲ್ಲಿ ದೆಹಲಿ ನ್ಯಾಯಾಲಯ ಸಿಬಿಐಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಹಾಗೂ ತೆಲಂಗಾಣ ಜಾಗೃತಿ ಪಕ್ಷದ ಅಧ್ಯಕ್ಷೆ ಕೆ ಕವಿತಾ ಸೇರಿ ಎಲ್ಲಾ 23 ಆರೋಪಿಗಳನ್ನು ದೋಷಮುಕ್ತಗೊಳಿಸಿದ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಜಿತೇಂದ್ರ ಸಿಂಗ್‌ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಸೌತ್ ಗ್ರೂಪ್ ಎಂಬ ಪ್ರಾದೇಶಿಕ ಹಣೆಪಟ್ಟಿಗೆ ಕಾನೂನು ಆಧಾರವಿಲ್ಲ. ಇದು ಅಪರಾಧಿಕ ನ್ಯಾಯಶಾಸ್ತ್ರಕ್ಕೆ ಹೊಂದಿಕೆಯಾಗುವುದಿಲ್ಲ ಎಂದ ಪೀಠ ಉಳಿದ ಆರೋಪಿಗಳಿಗೆ ನಾರ್ತ್‌ ಗ್ರೂಪ್‌ ಪದ ಬಳಸದೆ ಆರೋಪಿಗಳನ್ನು ಆಯ್ದು ಪ್ರಾದೇಶಿಕ ವರ್ಗೀಕರಣ ಮಾಡಿರುವುದು ಮನಸೋಇಚ್ಛೆಯ ವರ್ತನೆಯಾಗಿದ್ದು ಇದು ಅನವಶ್ಯಕ ಎಂದು ಕಿಡಿಕಾರಿತು.

ಪ್ರದೇಶ ಅಥವಾ ಗುರುತು ಆಧಾರಿತ ಪದಪ್ರಯೋಗವು ಪೂರ್ವಾಗ್ರಹದ ಭಾವನೆ ಉಂಟುಮಾಡುವ ಅಪಾಯವಿದ್ದು, ಅಪರಾಧ ವಿಚಾರಣೆ ತಟಸ್ಥ ಹಾಗೂ ಸಾಕ್ಷ್ಯಾಧಾರಿತವಾಗಿರಬೇಕು ಎಂಬ ತತ್ವಕ್ಕೆ ವಿರುದ್ಧವಾಗಿದೆ ಎಂದು ಅದು ಹೇಳಿತು. 

ಇಂತಹ ಪದಪ್ರಯೋಗ ಸಂವಿಧಾನದ 21ನೇ ವಿಧಿಯಡಿ ಖಾತರಿಪಡಿಸಿರುವ ನ್ಯಾಯಯುತ, ಸಮಾನತೆಯ ಮತ್ತು ಸಮಂಜಸ ವಿಚಾರಣೆಯ ಭರವಸೆ ಮೇಲೆ ಪ್ರಭಾವ ಬೀರುತ್ತದೆ. ಪ್ರದೇಶ ಅಥವಾ ಗುರುತು ಆಧಾರಿತ ವ-ರ್ಣನೆಗಳು, ಆರೋಪಿತ ಅಪರಾಧದೊಂದಿಗೆ ತಾರ್ಕಿಕ ಸಂಪರ್ಕ ಹೊಂದಿಲ್ಲದಿದ್ದರೆ, ಸಂವಿಧಾನದ ಕಲಂ 15 ಅಡಿಯಲ್ಲಿ ನೀಡಿರುವ ಸಮಾನತೆ ಮತ್ತು ತಾರತಮ್ಯರಹಿತ ತತ್ವಕ್ಕೆ ವಿರುದ್ಧವಾಗಿರಲಿದೆ ಎಂದು ಅದು ಹೇಳಿತು.

ಕಾನೂನಾತ್ಮಕ ಆಧಾರವಿಲ್ಲದ ಇಂತಹ ಹಣೆಪಟ್ಟಿಗಳ ಬಳಕೆ ಮುಂದುವರೆದರೆ ಜನಮನದಲ್ಲಿ ತಪ್ಪು ಭಾವನೆ ಉಂಟಾಗಲಿದ್ದು ಸಾಕ್ಷ್ಯಾಧಾರಗಳಿಂದ ಗಮನ ಬೇರೆಡೆಗೆ ತಿರುಗಿಸುವ ಅಪಾಯ ಉಂಟುಮಾಡುತ್ತದೆ ಎಂದು ಅದು ಹೇಳಿತು.

ಅಮೆರಿಕದ ಯುನೈಟೆಡ್‌ ಸ್ಟೇಟ್ಸ್‌ ಮತ್ತು ಕ್ಯಾಬೆರಾ ನಡುವಣ ಪ್ರಕರಣದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಾಲಯ ಗುರುತು ಆಧಾರಿತ ಪದಪ್ರಯೋಗವು ನ್ಯಾಯಸಮ್ಮತ ವಿಚಾರಣೆಗೆ ಧಕ್ಕೆಯುಂಟುಮಾಡಬಹುದು ಎಂದಿತು.

ಆರೋಪಪತ್ರಗಳು ಮತ್ತು ತನಿಖಾ ವರದಿ ಬರೆಯುವಾಗ ಭಾಷೆಯ ಆಯ್ಕೆಯಲ್ಲಿ ಹೆಚ್ಚಿನ ಜಾಗರೂಕತೆ, ವಿವೇಕ ಮತ್ತು ನಿಯಂತ್ರಣ ಪಾಲಿಸಬೇಕು ಎಂದು ಸಿಬಿಐಗೆ ನ್ಯಾಯಾಲಯ ಎಚ್ಚರಿಕೆ ನೀಡಿತು.