Women in legal profession 
ಸುದ್ದಿಗಳು

ರಾಜ್ಯ ವಕೀಲರ ಪರಿಷತ್ತುಗಳಲ್ಲಿ ಮಹಿಳೆಯರಿಗೆ ಶೇ.30ರಷ್ಟು ಮೀಸಲಾತಿ: ಸುಪ್ರೀಂ ನಿರ್ದೇಶನ

ಪ್ರತಿಯೊಂದು ರಾಜ್ಯ ವಕೀಲರ ಪರಿಷತ್‌ನಲ್ಲಿ ಅಧಿಕಾರಿ, ಪದಾಧಿಕಾರಿ ಸ್ಥಾನಗಳಿಗೂ ಅನ್ವಯವಾಗುವಂತೆ ಕನಿಷ್ಠ ಶೇ 30ರಷ್ಟು ಮಹಿಳಾ ಮೀಸಲಾತಿ ಜಾರಿಗಾಗಿ ಬಿಸಿಐ ಅಸ್ತಿತ್ವದಲ್ಲಿರುವ ನಿಯಮಗಳನ್ನು ವ್ಯಾಖ್ಯಾನಿಸಬೇಕು ಎಂದ ನ್ಯಾಯಾಲಯ.

Bar & Bench

ದೇಶದ ಪ್ರತಿಯೊಂದು ರಾಜ್ಯ ವಕೀಲರ ಪರಿಷತ್‌ನಲ್ಲಿ ಮಹಿಳೆಯರಿಗೆ ಶೇ 30ರಷ್ಟು ಮೀಸಲಾತಿ ದೊರೆಯಬೇಕು ಎಂದು ಗುರುವಾರ ತಿಳಿಸಿರುವ ಸುಪ್ರೀಂ ಕೋರ್ಟ್‌ ಈ ನಿಟ್ಟಿನಲ್ಲಿ ಭಾರತೀಯ ವಕೀಲರ ಪರಿಷತ್‌ ಅಸ್ತಿತ್ವದಲ್ಲಿರುವ ನಿಯಮಗಳನ್ನು ಈ ಉದ್ದೇಶದಿಂದ ವ್ಯಾಖ್ಯಾನಿಸಿ ತಿದ್ದುಪಡಿ ಮಾಡಿರುವುದಾಗಿ ಅರ್ಥೈಸಿ ಜಾರಿಗೆ ತರಬೇಕು ಎಂದು ಸೂಚಿಸಿದೆ [ಯೋಗಮಯ ಎಂ ಜಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]

ಈ ಕ್ರಮ ಸಾಂವಿಧಾನಿಕ ಮೌಲ್ಯ ಹಾಗೂ ದೇಶದ ಇತ್ತೀಚಿನ ಲಿಂಗ ಸಮಾನತೆಗೆ ಸಂಬಂಧಿಸಿದ ಕಾನೂನು ಸುಧಾರಣೆಗೆ ಅನುಗುಣವಾದದ್ದು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೊಯಮಲ್ಯ ಬಾಗ್ಚಿ ಅವರಿದ್ದ ಪೀಠ ತಿಳಿಸಿದೆ.

ಬಿಸಿಐ ಮಹಿಳೆಯರಿಗೆ ಶೇ. 30 ರಷ್ಟು ಸ್ಥಾನಗಳನ್ನು ಮೀಸಲಿಡುವುದು ಮಾತ್ರವಲ್ಲದೆ ಪ್ರತಿ ರಾಜ್ಯ ವಕೀಲರ ಪರಿಷತ್‌ ಪದಾಧಿಕಾರಿ ಹುದ್ದೆಗಳಿಗೂ ಅನ್ವಯವಾಗುವಂತೆ ಮೀಸಲಾತಿ ಜಾರಿಗೆ ತರಬೇಕು ಎಂದು ಅದು ಹೇಳಿತು.

ಸಾಂವಿಧಾನಿಕ ಮೌಲ್ಯಗಳು, ಇತ್ತೀಚೆಗೆ ಶಾಸಕಾಂಗ ಇರಿಸಿದ ಹೆಜ್ಜೆ ಹಾಗೂ ಈ ನ್ಯಾಯಾಲಯ ಕಾಲಕಾಲಕ್ಕೆ ಹೊರಡಿಸಿದ ಆದೇಶಗಳನ್ನು ಪರಿಗಣಿಸಿ ಪ್ರತಿ ರಾಜ್ಯ ವಕೀಲರ ಪರಿಷತ್‌ನಲ್ಲಿ ಶೇ 30ರಷ್ಟು ಸ್ಥಾನ ಮಹಿಳೆಯರಿಗೆ ಮೀಸಲಿಡುವಂತೆ ಭಾರತೀಯ ವಕೀಲರ ಪರಿಷತ್‌ ನಿಯಮಾವಳಿ ರೂಪಿಸುತ್ತದೆ ಎಂಬುದು ನಮ್ಮ ನಿರೀಕ್ಷೆ. ಇದರೊಂದಿಗೆ, ಪದಾಧಿಕಾರಿ ಹುದ್ದೆಗಳ ಕೆಲವು ಸ್ಥಾನಗಳಿಗೂ ಮಹಿಳಾ ಮೀಸಲಾತಿ ಅನ್ವಯವಾಗಬೇಕು ಎಂದು ನ್ಯಾಯಾಲಯ ವಿವರಿಸಿತು.

ಇದಕ್ಕೆ ಸಂಬಂಧಿಸಿದಂತೆ ಭಾರತೀಯ ವಕೀಲರ ಪರಿಷತ್ ತನ್ನ ನಿಯಮಗಳನ್ನು ಈಗಾಗಲೇ ತಿದ್ದುಪಡಿ ಮಾಡಿರುವಂತೆ ಅರ್ಥೈಸಿ ಜಾರಿಗೆ ತರಬೇಕು. ಮೀಸಲಾತಿ ಜಾರಿಗೆ ತಂದ ಕುರಿತಂತೆ ಡಿಸೆಂಬರ್ 8ರೊಳಗೆ ಬಿಸಿಐ ಅನುಪಾಲನಾ ವರದಿ ಸಲ್ಲಿಸಬೇಕು ಎಂದಿತು.

ದೇಶದ ವಕೀಲರ ಪರಿಷತ್ತುಗಳಲ್ಲಿ ಮಹಿಳೆಯರು ಮತ್ತು ಸಮಾಜದಂಚಿನಲ್ಲಿರುವ ಗುಂಪುಗಳಿಗೆ ಸಂಪೂರ್ಣ ಕಡಿಮೆ ಪ್ರಾತಿನಿಧ್ಯ ದೊರೆತಿದೆ ಎಂದು ಸುಪ್ರೀಂ ಕೋರ್ಟ್ ವಕೀಲರಾದ ಯೋಗಮಾಯ ಎಂ ಜಿ ಮತ್ತು ಶೆಹ್ಲಾ ಚೌಧರಿ ಸಲ್ಲಿಸಿದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ವೇಳೆ ಈ ಆದೇಶ ನೀಡಲಾಗಿದೆ.

ಹಿರಿಯ ವಕೀಲೆ ಶೋಭಾ ಗುಪ್ತಾ , ವಕೀಲರಾದ ಶ್ರೀರಾಮ್ ಪರಾಕ್ಕಟ್‌ ಹಾಗೂ ದೀಪಕ್ ಪ್ರಕಾಶ್  ಅರ್ಜಿದಾರರಾದ ಯೋಗಮಾಯ ಪರವಾಗಿ ವಾದ ಮಂಡಿಸಿದರು.