ಸುದ್ದಿಗಳು

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಲೋಕಾಯುಕ್ತದಂಥ ಸಂಸ್ಥೆ ಬೆಂಬಲಿಸುವ ಇಚ್ಛೆ ಯಾವುದೇ ಪಕ್ಷಕ್ಕೆ ಇಲ್ಲ: ಹೈಕೋರ್ಟ್‌

Siddesh M S

“ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಲೋಕಾಯುಕ್ತದಂಥ ಸ್ವತಂತ್ರ ಸಂಸ್ಥೆಯು ಸಾರ್ವಜನಿಕ ಹಿತದೃಷ್ಟಿಯಿಂದ ಪಾರದರ್ಶಕವಾಗಿ ಕೆಲಸ ಮಾಡಲು ಅನುಮತಿಸುವ ಅಥವಾ ಬೆಂಬಲಿಸುವ ಇಚ್ಛೆಯನ್ನು ಯಾವುದೇ ರಾಜಕೀಯ ಪಕ್ಷ ಹೊಂದಿಲ್ಲದಿರುವುದು ದುರದೃಷ್ಟಕರ” ಎಂದು ಕರ್ನಾಟಕ ಹೈಕೋರ್ಟ್‌ ಬೇಸರ ವ್ಯಕ್ತಪಡಿಸಿದೆ.

ಎಸಿಬಿ ರಚಿಸುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಆಕ್ಷೇಪಾರ್ಹವಾದ ಆದೇಶಗಳನ್ನು ವಜಾ ಮಾಡಿರುವ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಗುರುವಾರ ಪ್ರಕಟಿಸಿರುವ 289 ಪುಟಗಳ ಐತಿಹಾಸಿಕ ತೀರ್ಪಿನಲ್ಲಿ ಹಲವು ಮಹತ್ವದ ಅಂಶಗಳನ್ನು ಉಲ್ಲೇಖಿಸಿದೆ.

  • ಭ್ರಷ್ಟಾಚಾರ ನಿಯಂತ್ರಣ, ಪಕ್ಷಪಾತ ಮತ್ತು ಆಡಳಿತದಲ್ಲಿ ಅಧಿಕಾರಿಗಳ ಅಶಿಸ್ತನ್ನು ತಡೆಯುವುದೇ ರಾಜ್ಯ ಸರ್ಕಾರದ ಉದ್ದೇಶವಾಗಿದ್ದರೆ ರಾಜ್ಯ ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವಂತೆ ಮುಖ್ಯಮಂತ್ರಿಗಳಿಗೆ ಬದಲಾಗಿ ಕರ್ನಾಟಕ ಲೋಕಾಯುಕ್ತ ಕಾಯಿದೆ ಸೆಕ್ಷನ್‌ 15(3)ರ ಅಡಿ ಎಸಿಬಿಯನ್ನು ಲೋಕಾಯುಕ್ತದ ಅಡಿ ಕೆಲಸ ಮಾಡಲು ಅನುಮತಿಸಬೇಕಿತ್ತು.

  • ಸರ್ಕಾರದ ಆದೇಶದಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಹೆಚ್ಚಿನ ಅವಕಾಶವಿದ್ದು, ಅಧಿಕಾರದಲ್ಲಿರುವ ಮುಖ್ಯಮಂತ್ರಿಯು ಪಕ್ಷದೊಳಗಿನ ಅಥವಾ ಪ್ರತಿಪಕ್ಷಗಳಲ್ಲಿನ ವಿರೋಧಿಗಳನ್ನು ನಿಯಂತ್ರಿಸಲು ಎಸಿಬಿ ದುರ್ಬಳಕೆ ಮಾಡಿಕೊಳ್ಳಬಹುದಾಗಿದೆ. ಅಧಿಕಾರಸ್ಥರು ಅಥವಾ ಅಧಿಕಾರ ಹೊಂದಿರುವ ಪಕ್ಷಕ್ಕೆ ಅನುಕೂಲವಾಗುವ ಸಾಧ್ಯತೆಯನ್ನು ಆದೇಶ ಸ್ಪಷ್ಟಪಡಿಸುತ್ತದೆ.

  • ಎಸಿಬಿ ಮತ್ತು ವಿಚಕ್ಷಣಾ ಸಲಹಾ ಮಂಡಳಿಯು ರಾಜ್ಯ ಸರ್ಕಾರದ ನೇರ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ ಅವುಗಳು ಸ್ವತಂತ್ರವಾಗಿ ಕೆಲಸ ಮಾಡಲಾಗದು. ಇವುಗಳು ಅಂತಿಮವಾಗಿ ಮುಖ್ಯಮಂತ್ರಿಯ ನಿಯಂತ್ರಣಕ್ಕೆ ಒಳಪಡುತ್ತವೆ.

  • ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನಿಖೆ ನಡೆಸಲು ಲೋಕಾಯುಕ್ತ ಪೊಲೀಸರಿಗೆ ಅಧಿಕಾರ ನೀಡಿದ್ದ ಮತ್ತು ಸಿಆರ್‌ಪಿಸಿ ಸೆಕ್ಷನ್‌ 2(ಎಸ್‌) ಅಡಿ ಕರ್ನಾಟಕ ಲೋಕಾಯುಕ್ತದ ಪೊಲೀಸ್‌ ಇನ್‌ಸ್ಪೆಕ್ಟರ್‌ ಕಚೇರಿಗಳನ್ನು ಪೊಲೀಸ್‌ ಠಾಣೆ ಎಂದು ಘೋಷಿಸಿದ್ದ 1991ರ ಫೆಬ್ರವರಿ 6, 2002ರ ಮೇ 8 ಮತ್ತು 2002ರ ಡಿಸೆಂಬರ್‌ 5ರ ಶಾಸನಬದ್ಧ ಅಧಿಸೂಚನೆಗಳನ್ನು ಹಿಂಪಡೆಯುವಾಗ ಸರ್ಕಾರವು ಲೋಕಾಯುಕ್ತರ ಜೊತೆ ಸಮಾಲೋಚನೆ ನಡೆಸಿಲ್ಲ. ಲೋಕಾಯುಕ್ತರ ಜೊತೆ ಸಮಾಲೋಚನೆ ನಡೆಸದೇ ಶಾಸನಬದ್ಧ ಅಧಿಸೂಚನೆಗಳನ್ನು ಸರ್ಕಾರವು ಆದೇಶ ಮಾಡುವ ಮೂಲಕ ಹಿಂಪಡೆಯಲಾಗದು.

  • ಲೋಕಾಯುಕ್ತಕ್ಕೆ ಪರ್ಯಾಯವಾಗಿ ಎಸಿಬಿ ರಚಿಸುವುದಕ್ಕೆ ಸಂಬಂಧಿಸಿದಂತೆ ನಿಸ್ಸಂಶಯವಾಗಿ ರಾಜ್ಯ ಸರ್ಕಾರ ಯಾವುದೇ ಕಾರಣ ನೀಡಿಲ್ಲ. ರಾಜ್ಯ ಪೊಲೀಸ್‌ ಮಹಾನಿರ್ದೇಶಕರ ಶಿಫಾರಸ್ಸು ಮತ್ತು ಸುಪ್ರೀಂ ಕೋರ್ಟ್‌ನ ಸಿ ರಂಗಸ್ವಾಮಯ್ಯ ಅವರ ಪ್ರಕರಣದ ತೀರ್ಪನ್ನು ಆಧರಿಸಿ 2016ರ ಮಾರ್ಚ್‌ 14ರಂದು ಎಸಿಬಿ ರಚನೆ ಆದೇಶ ಮತ್ತು ಕರ್ನಾಟಕ ಪೊಲೀಸ್‌ ದಳದ ಅಧಿಕಾರಿಗಳ ಕರ್ತವ್ಯ ವ್ಯಾಖ್ಯಾನಿಸಿದೆ. ಇಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ. ಸಿ ರಂಗಸ್ವಾಮಯ್ಯ ಪ್ರಕರಣದ ತೀರ್ಪನ್ನು 1998ರ ಜುಲೈ 21ರಂದು ಪ್ರಕಟಿಸಲಾಗಿದ್ದು, 2016ರ ಮಾರ್ಚ್‌ 14ರಲ್ಲಿ ಮೊದಲ ಬಾರಿಗೆ ಸರ್ಕಾರವು ಎಸಿಬಿ ರಚನೆ ಆದೇಶ ಮಾಡಿದೆ. ಅಂದರೆ ಸುಮಾರು 18 ವರ್ಷಗಳ ಬಳಿಕ ಎಸಿಬಿ ರಚಿಸಿದ್ದು, ಆಕ್ಷೇಪಾರ್ಹವಾದ ಆದೇಶದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ.

  • ನಿಯಮ ಒಳಗೊಳ್ಳದ ನಿರ್ವಾತವನ್ನು ಕಾರ್ಯಾದೇಶಗಳು ತುಂಬಬಹುದೇ ವಿನಾ ಶಾಸನಬದ್ಧ ನಿಯಮಗಳನ್ನು ಅಳಿಸಿ ಹಾಕಲಾಗದು. ಸರ್ಕಾರದ ಆದೇಶವು ಪರೋಕ್ಷವಾಗಿ ಲೋಕಾಯುಕ್ತದ ಅಧಿಕಾರಗಳಿಗೆ ಕತ್ತರಿ ಹಾಕಿದೆ. ಎಸಿಬಿಯು ಲೋಕಾಯುಕ್ತಕ್ಕೆ ಪರ್ಯಾಯ ಅಥವಾ ಪ್ರತ್ಯೇಕ ಸಂಸ್ಥೆಯಾಗಿ ಕೆಲಸ ಮಾಡಲಾಗದು. ಹೀಗಾಗಿ, ಲೋಕಾಯುಕ್ತಕ್ಕೆ ನೀಡಲಾಗಿರುವ ಕೆಲಸ ಮಾಡಲು ಎಸಿಬಿ ರಚನೆ ಆದೇಶಕ್ಕೆ ಕಾನೂನಿನ ಮಾನ್ಯತೆ ಇಲ್ಲ.

  • ಎಸಿಬಿ ರಚನೆಯಾದಾಗಿನಿಂದ ಯಾವುದೇ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿಲ್ಲ. ಕೆಲವು ಪ್ರಾಧಿಕಾರಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ದಾಳಿ ನಡೆಸಿದೆ. ಲೋಕಾಯುಕ್ತಕ್ಕಿಂತ ಎಸಿಬಿ ಪರಿಣಾಮಕಾರಿ ಎಂದು ಸಾಬೀತುಪಡಿಸಲು ಸರ್ಕಾರ ಅಥವಾ ಎಸಿಬಿ ಯಾವುದೇ ದಾಖಲೆಯನ್ನು ಸಲ್ಲಿಸಿಲ್ಲ. ಸ್ಥಾಪಿತ ಹಿತಾಸಕ್ತಿಗಳನ್ನು ರಕ್ಷಿಸಲು ಎಸಿಬಿ ರಚಿಸಲಾಗಿದೆಯೇ ವಿನಾ ವಿಸ್ತೃತ ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಅಲ್ಲ.

  • ಎಸಿಬಿ ರಚಿಸುವ ಮೂಲಕ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆಗಳನ್ನು ಹಲ್ಲಿಲ್ಲದ ಕಾಗದದ ಹುಲಿಗಳನ್ನಾಗಿಸಲಾಗಿದೆ. ಈ ನಿಟ್ಟಿಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆಗಳನ್ನು ಬಲಪಡಿಸಬೇಕಾಗಿದ್ದು, ಅವರ ನಿರ್ದೇಶನಗಳು ಕಾಗದಕ್ಕೆ ಸೀಮಿತವಾಗದಂತೆ ನೋಡಿಕೊಳ್ಳಬೇಕಿದೆ.

  • ಭ್ರಷ್ಟಾಚಾರವನ್ನು ನಿರ್ಮಾಲನೆ ಮಾಡಲು ಶಾಸಕಾಂಗ ಮತ್ತು ನ್ಯಾಯಾಂಗದ ದೃಷ್ಟಿಯಿಂದ ಇದು ಮಹತ್ವದ ಕಾಲಘಟ್ಟವಾಗಿದ್ದು, ಮುಂದಿನ ತಲೆಮಾರಿಗೆ ಭ್ರಷ್ಟಾಚಾರವು ಕ್ಯಾನ್ಸರ್‌ಗಿಂತ ಹೆಚ್ಚು ಮಾರಕ. ಇದು ದೇಶದ ಅಭಿವೃದ್ಧಿಗೆ ವಿಶೇಷವಾಗಿ ಕರ್ನಾಟಕದ ಅಭಿವೃದ್ಧಿಗೆ ಅಡ್ಡಿಯಾಗಿದೆ.

  • ಕರ್ನಾಟಕ ಲೋಕಾಯುಕ್ತ ಕಾಯಿದೆ ಅಸ್ತಿತ್ವದಲ್ಲಿರುವಾಗ ಸಂವಿಧಾನದ 162ನೇ ವಿಧಿಯ ಪ್ರಕಾರ ಕಾರ್ಯಾದೇಶ ಮಾಡಿ ಎಸಿಬಿ ರಚಿಸಿ, ಕಾಯಿದೆ ಅಡಿ ಲೋಕಾಯುಕ್ತ ಸಂಸ್ಥೆಗೆ ನೀಡಿರುವ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಕಸಿಯಲಾಗದು.

  • ಭ್ರಷ್ಟಾಚಾರ ತೊಡೆದು ಹಾಕುವ ನಿಟ್ಟಿನಲ್ಲಿ ಕಾಲಕ್ರಮೇಣ ಆಡಳಿತ ನಡೆಸಿದ ಸರ್ಕಾರಗಳು ಕಠಿಣವಾದ ಕ್ರಮಕೈಗೊಂಡಿಲ್ಲ. 1998ರ ಜನವರಿ 15ರಂದು ಕರ್ನಾಟಕ ಲೋಕಾಯುಕ್ತ ಜಾರಿಗೆ ಬಂದಿದ್ದು, ಸರ್ಕಾರ ಆದೇಶ ಮಾಡುವವರೆಗೂ ಸ್ವತಂತ್ರವಾಗಿ ಕೆಲಸ ಮಾಡಿದೆ.

  • ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತ ಮತ್ತು ಅದರ ಪೊಲೀಸ್‌ ದಳವು ತನಿಖೆ ನಡೆಸಿದ ರೀತಿಯಿಂದ ಸಾಮಾನ್ಯ ಜನರಲ್ಲಿ ಸಂಸ್ಥೆಯ ಮೇಲೆ ಅಪಾರ ನಂಬಿಕೆ ಸೃಷ್ಟಿಸಿದೆ. ಇಲ್ಲಿ ರಾಜಕೀಯ ಕ್ಷೇತ್ರದವರು ಮತ್ತು ಆಡಳಿತಶಾಹಿಯನ್ನು ರಕ್ಷಿಸಲು ಎಸಿಬಿ ಸೃಷ್ಟಿಸಲಾಗಿದ್ದು, ಈ ಮೂಲಕ ಪರೋಕ್ಷವಾಗಿ ಲೋಕಾಯುಕ್ತ ಕಾಯಿದೆಯ ಉದ್ದೇಶವನ್ನು ಸೋಲಿಸಲಾಗಿದೆ.

  • ಸಿಆರ್‌ಪಿಸಿ ಸೆಕ್ಷನ್‌ಗಳ ಪ್ರಕಾರ ದೂರುದಾರರು ತನಿಖಾಧಿಕಾರಿಯಾಗುವಂತಿಲ್ಲ. ಸರ್ಕಾರದ ಆಕ್ಷೇಪಾರ್ಹವಾದ ಆದೇಶದ ಪ್ರಕಾರ ಮುಖ್ಯಮಂತ್ರಿ ಅಥವಾ ಮಂತ್ರಿ ಮಂಡಲದ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿದರೆ ಮುಖ್ಯಮಂತ್ರಿ ಅವರೇ ತನಿಖೆಯ ಮೇಲೆ ನಿಗಾ ಇಡಬೇಕು ಮತ್ತು ತನಿಖೆಗೆ ಅನುಮತಿಸಬೇಕು. ಹೀಗಾಗಿ, ಆಕ್ಷೇಪಾರ್ಹ ಆದೇಶವು ಕಾನೂನು ಮತ್ತು ಸುಪ್ರೀಂ ಕೋರ್ಟ್‌ ಆದೇಶಕ್ಕೆ ವಿರುದ್ಧವಾಗಿದೆ.

  • ಕರ್ನಾಟಕ ಪೊಲೀಸ್‌ ಕಾಯಿದೆ 1963 ಈಗಾಗಲೇ ಇರುವಾಗ ಎಸಿಬಿಯು ಸ್ವತಂತ್ರ ಪೊಲೀಸ್‌ ಅಧಿಕಾರಿಗಳನ್ನು ಹೊಂದಲಾಗದು. ಗೃಹ ಇಲಾಖೆಯ ಅಧೀನಕ್ಕೆ ಒಳಪಟ್ಟು ಕೆಲಸ ಮಾಡುವ ಪೊಲೀಸ್‌ ಅಧಿಕಾರಿಯು ಎಸಿಬಿ ತನಿಖಾಧಿಕಾರಿಯಾಗಿ ಉನ್ನತ ಮಟ್ಟದ ಅಧಿಕಾರಿಗಳ ವಿರುದ್ಧ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಾರೆ ಎಂದು ನಿರೀಕ್ಷಿಸಲಾಗದು.

  • 2011ರಲ್ಲಿ ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ಅಧಿಕಾರ ಬಳಸಿ ಲೋಕಾಯುಕ್ತರು ಮುಖ್ಯಮಂತ್ರಿ, ಮಂತ್ರಿಗಳು ರಾಜೀನಾಮೆ ನೀಡುವಂತೆ ಮಾಡುವುದಲ್ಲದೇ ಅವರು ಜೈಲಿಗೆ ಹೋಗುವಂತೆ ಮಾಡುವ ಮೂಲಕ ರಾಜ್ಯದಲ್ಲಿ ಇತಿಹಾಸ ನಿರ್ಮಿಸಿದ್ದು, ಇದು ದೇಶಕ್ಕೆ ಮಾದರಿಯಾಗಿತ್ತು. ಲೋಕಾಯುಕ್ತರ ಪುತ್ರನ ವಿರುದ್ಧ ಭ್ರಷ್ಟಾಚಾರದ ಆರೋಪ ಬಂದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡುವಂತಾಗಿತ್ತು. ಇದೆಲ್ಲವೂ ಸಾಧ್ಯವಾಗಿದ್ದು, ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಗಳಿಂದ ಎಂಬುದು ಮುಖ್ಯ ಎಂದು ಪೀಠ ನೆನಪಿಸಿದೆ.