ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲದಲ್ಲಿ ಭ್ರಷ್ಟಾಚಾರ ಪ್ರಕರಣಗಳ ತನಿಖೆಗಾಗಿ ರಚಿಸಲಾಗಿದ್ದ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ಗುರುವಾರ ಕರ್ನಾಟಕ ಹೈಕೋರ್ಟ್ ರದ್ದುಪಡಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿದೆ. ಅಲ್ಲದೇ, ಎಸಿಬಿ ಮುಂದಿದ್ದ ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ ಎಂದು ಹೇಳಿದೆ.
ಬೆಂಗಳೂರು ವಕೀಲರ ಸಂಘ, ಸಮಾಜ ಪರಿವರ್ತನ ಸಮುದಾಯ ಮತ್ತು ವಕೀಲ ಚಿದಾನಂದ ಅರಸ್ ಬಿ ಜಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಎಚ್ ಎಸ್ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಎತ್ತಿ ಹಿಡಿದಿದೆ.
“2016ರ ಮಾರ್ಚ್ 14ರಂದು ಎಸಿಬಿ ರಚಿಸಲು ಮಾಡಿರುವ ಕಾರ್ಯಾದೇಶವನ್ನು ರಾಜ್ಯ ಸರ್ಕಾರವು ಸರಿಯಾಗಿ ಸಮರ್ಥಿಸಿಲ್ಲ. 2016ರ ಮಾರ್ಚ್ 19ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಇದ್ದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದಿರುವ ಅಧಿಸೂಚನೆಯನ್ನು ಸರ್ಕಾರವು ಸರಿಯಾಗಿ ಸಮರ್ಥಿಸಿ ಕೊಂಡಿಲ್ಲ. ಹಿಂದಿನ ಅಧಿಸೂಚನೆಗಳನ್ನು ಸೂಪರ್‌ಸೀಡ್ ಮಾಡಿ ಹೊರಡಿಸಿರುವ ಈ ಅಧಿಸೂಚನೆಯನ್ನು ವಜಾ ಮಾಡಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.
“ರಾಜ್ಯ ಸರ್ಕಾರದ ಆಕ್ಷೇಪಾರ್ಹ ಆದೇಶಗಳನ್ನು ವಜಾ ಮಾಡಿರುವ ಹಿನ್ನೆಲೆಯಲ್ಲಿ ಎಸಿಬಿ ರದ್ದಾಗಿದೆ. ಆದರೆ, ಎಸಿಬಿ ಮುಂದೆ ಬಾಕಿ ಇರುವ ತನಿಖೆ, ವಿಚಾರಣೆ, ಶಿಸ್ತುಕ್ರಮ ಪ್ರಕ್ರಿಯೆಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ. ಹೀಗಾಗಿ, ಎಸಿಬಿ ಮುಂದಿರುವ ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗವಣೆಯಾಗಿರುವುದರಿಂದ ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲಾಗದು” ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೇ, “1991ರ ಫೆಬ್ರವರಿ 6ರಂದು, 2002ರ ಫೆಬ್ರವರಿ 8, 2002ರ ಮೇ 8, 2002ರ ಡಿಸೆಂಬರ್ 5ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವ ಸಂಬಂಧ ಹೊರಡಿಸಿದ್ದ ಆದೇಶಗಳನ್ನು ಪುನರ್ ಸ್ಥಾಪಿಸಲಾಗಿದೆ” ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ.
ಭ್ರಷ್ಟಾಚಾರವನ್ನು ನಿರ್ಮೂಲನ ಮಾಡಲು ಮತ್ತು ಕರ್ನಾಟಕ ಲೋಕಾಯುಕ್ತ ಕಾಯಿದೆ ಹಾಗೂ ವಿಸ್ತೃತ ನೆಲೆಯಲ್ಲಿ ನ್ಯಾಯದಾನವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಲೋಕಾಯುಕ್ತ ಕಾಯಿದೆಯ ಸೆಕ್ಷನ್‌ಗಳಾದ 3(2)ಎ ಮತ್ತು 3(2)ಬಿ ಅಡಿ ಸಾರ್ವಜನಿಕ ಮತ್ತು ಖಾಸಗಿ ಬದುಕಿನಲ್ಲಿ ಅತ್ಯುತ್ತಮ ಹಿನ್ನೆಲೆ, ಪ್ರಾಮಾಣಿಕತೆ ಹೊಂದಿರುವ, ಸಮರ್ಥ, ನ್ಯಾಯಯುತವಾಗಿ ನಡೆದುಕೊಳ್ಳುವವರನ್ನು ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಹುದ್ದೆಗೆ ಶಿಫಾರಸ್ಸು ಮಾಡಬೇಕು ಎಂದು ಸಾಂವಿಧಾನಿಕ ಪ್ರಾಧಿಕಾರಗಳಿಗೆ ಮನವಿ ಮಾಡುತ್ತೇವೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ನೇಮಕಾತಿಯ ಸಂದರ್ಭದಲ್ಲಿ ಜಾತಿ-ಮತ ಇತ್ಯಾದಿಗಳಿಂದ ಪ್ರೇರಣೆಗೆ ಒಳಗಾಗಬಾರದು. ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಮತ್ತು ರಾಜಕೀಯದಿಂದ ಹೊರತಾಗಿರಬೇಕು. ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹುದ್ದೆಗಳು ಯಾರನ್ನೋ ಒಳಗೊಳ್ಳುವ ಕೇಂದ್ರಗಳಾಗಬಾರದು ಎಂದು ನ್ಯಾಯಾಲಯವು ಸರ್ಕಾರಕ್ಕೆ ಕಿವಿಮಾತು ಹೇಳಿದೆ.
ಕರ್ನಾಟಕ ಲೋಕಾಯುಕ್ತ ಕಾಯಿದೆ ಸೆಕ್ಷನ್ 12(4)ಕ್ಕೆ ತುರ್ತಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ.
ಉತ್ತಮ ಹಿನ್ನೆಲೆ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ದಳಕ್ಕೆ ನೇಮಕ ಮಾಡುವ ಮೂಲಕ ಅದನ್ನು ಸದೃಢಗೊಳಿಸಬೇಕು.
ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ನಿಯೋಜಿಸಿರುವ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ದಳಕ್ಕೆ ವರ್ಗಾಯಿಸಬೇಕು. ಎಸಿಬಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯು ಲೋಕಾಯುಕ್ತದ ಆಡಳಿತಕ್ಕೆ ಒಳಪಡಲಿದ್ದಾರೆ.
ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಅನುಮತಿ ಪಡೆಯದೇ ಕನಿಷ್ಠ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸದ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಲೋಕಾಯುಕ್ತದಿಂದ ವರ್ಗಾಯಿಸುವಂತಿಲ್ಲ.
ಒಂದು ಸಾರಿ ತನಿಖೆ ಆರಂಭಿಸಿದ ಬಳಿಕ ನಿರ್ದಿಷ್ಟ ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ನ್ಯಾಯಾಲಯದ ಮುಂದಿರುವ ಪ್ರಕರಣಗಳನ್ನು ತುರ್ತಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೇ, ಕೆ ಟಿ ನಾಗರಾಜ್, ಕಾಳೇಗೌಡ, ಬೆಳಗಾವಿಯ ಸಿದ್ಧಾರ್ಥ ಭೂಪಾಲ್ ಸಿಂಗಡಿ, ಬಸವರಾಜ್ ಮತ್ತು ಇತರರು, ದೀಪಕ್ ಕುಮಾರ್ ಎಚ್ ಆರ್ ವೈಯಕ್ತಿಕ ಹಿತಾಸಕ್ತಿಯಿಂದ ಅರ್ಜಿಗಳನ್ನು ಸಲ್ಲಿಸಿದ್ದು, ಅವುಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದೆ.