ಸುದ್ದಿಗಳು

ಪಿತೂರಿ ಕುರಿತಂತೆ ಆರ್ಯನ್ ಖಾನ್ ವಿರುದ್ಧ ಸೂಕ್ತ ಸಾಕ್ಷ್ಯಗಳಿಲ್ಲ: ಬಾಂಬೆ ಹೈಕೋರ್ಟ್

ಎನ್‌ಡಿಪಿಎಸ್‌ ಕಾಯಿದೆ ಅಡಿ ಪಿತೂರಿ ಮಾಡಿದ ಬಗ್ಗೆ ಆರ್ಯನ್ ಖಾನ್, ಸಹ ಆರೋಪಿಗಳಾದ ಅರ್ಬಾಜ್ ಮರ್ಚೆಂಟ್ ಮತ್ತು ಮೂನ್ಮೂನ್ ಧಮೇಚಾ ವಿರುದ್ಧ ಯಾವುದೇ ಮೇಲ್ನೋಟದ ಸಾಕ್ಷ್ಯಗಳು ಕಂಡುಬಂದಿಲ್ಲ ಎಂದು ಪೀಠ ತಿಳಿಸಿದೆ.

Bar & Bench

ವಿಲಾಸಿ ಹಡಗು ಮಾದಕವಸ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಅವರಿಗೆ ಜಾಮೀನು ನೀಡಿದ ಸಕಾರಣ ಆದೇಶವನ್ನು ಬಾಂಬೆ ಹೈಕೋರ್ಟ್‌ ಬಿಡುಗಡೆ ಮಾಡಿದ್ದು ಎನ್‌ಡಿಪಿಎಸ್‌ ಕಾಯಿದೆ ಅಡಿ ಪಿತೂರಿ ಮಾಡಿದ ಕುರಿತಂತೆ ಆರ್ಯನ್‌ ಖಾನ್‌ ಹಾಗೂ ಸಹ ಆರೋಪಿಗಳಾದ ಅರ್ಬಾಜ್‌ ಮರ್ಚೆಂಟ್‌ ಮತ್ತು ಮೂನ್‌ಮೂನ್‌ ಧಮೇಚಾ ವಿರುದ್ಧ ಯಾವುದೇ ಮೇಲ್ನೋಟದ ಸಾಕ್ಷ್ಯಗಳಿಲ್ಲ ಎಂದು ಹೇಳಿದೆ.

ಪಿತೂರಿ ಕುರಿತು ಪ್ರತಿವಾದಿ ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯ ತನ್ನ ಗಮನಕ್ಕೆ ಬಂದಿಲ್ಲ. ಪಿತೂರಿಯ ಜೊತೆಗೆ ವಾಣಿಜ್ಯ ಪ್ರಮಾಣದ ಮಾದಕ ವಸ್ತು ಬಳಕೆ ಪತ್ತೆಯಾದ ಹಿನ್ನೆಲೆಯಲ್ಲಿ ಅರ್ಜಿದಾರರು ಎನ್‌ಡಿಪಿಎಸ್ ಕಾಯ್ದೆಯಡಿಯಲ್ಲಿ ಅಪರಾಧ ಎಸಗುವ ಉದ್ದೇಶ ಹೊಂದಿದ್ದಾರೆ ಎಂದು ಪ್ರತಿವಾದಿ ಮಂಡಿಸಿದ ವಾದ ತಿರಸ್ಕಾರಕ್ಕೆ ಅರ್ಹವಾಗಿದೆ ಎಂದು ನ್ಯಾಯಾಲಯ 14 ಪುಟಗಳ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಆರೋಪಿಗಳು ವಿಲಾಸಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು ಎಂಬ ಒಂದೇ ಕಾರಣಕ್ಕೆ ಆರೋಪಿಗಳ ವಿರುದ್ಧ ಸೆಕ್ಷನ್ 29ರ ಅಡಿ ಅಪರಾಧ ನಿಗದಿಪಡಿಸಲು ಸಾಧ್ಯವಿಲ್ಲ. ಅರ್ಜಿದಾರರ ವಿರುದ್ಧದ ಪಿತೂರಿ ರುಜುವಾತು ಮಾಡಲು ಸಾಕ್ಷ್ಯ ರೂಪದಲ್ಲಿ ಮೂಲಭೂತ ಸಾಕ್ಷ್ಯಗಳಿರಬೇಕು ಎಂಬ ಅಂಶವನ್ನು ನ್ಯಾಯಾಲಯ ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಆರ್ಯನ್‌, ಮರ್ಚೆಂಟ್‌ ಹಾಗೂ ಧಮೇಚಾ ಅವರಿಗೆ ಅಕ್ಟೋಬರ್ 28ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಅಕ್ಟೋಬರ್ 31ರಂದು ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಅಂದು ನ್ಯಾಯಾಲಯ ಸಂಕ್ಷಿಪ್ತವಾಗಿ ಆದೇಶ ಪ್ರಕಟಿಸಿತ್ತು. ಇಂದು ಪ್ರಕಟವಾದ ಸಕಾರಣ ಆದೇಶದಲ್ಲಿ “ಖಾನ್ ಅವರ ಬಳಿ ಯಾವುದೇ ಮಾದಕವಸ್ತು ಪತ್ತೆಯಾಗಿಲ್ಲ. ಮರ್ಚೆಂಟ್‌ ಮತ್ತು ಧಮೇಚಾ ಅವರ ಬಳಿ ಸಣ್ಣ ಪ್ರಮಾಣದ ಅಮಲು ಪದಾರ್ಥ ಮಾತ್ರ ದೊರೆತಿದೆ. ಇಂತಹ ಸಂದರ್ಭದಲ್ಲಿ ಆರೋಪಿ ಅಕ್ರಮ ಕೃತ್ಯ ಎಸಗಿದ್ದಾನೆ ಎಂದು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯ ಅಗತ್ಯ ಮತ್ತು ಇದು ಅಯಾಚಿತವಾಗಿ ನಡೆದಿರಬೇಕು. ಆದರೆ ಈಗಿನ ಪ್ರಕರಣದಲ್ಲಿ ಅಂತಹ ಸಾಕ್ಷ್ಯ ದೊರೆತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಆರ್ಯನ್‌ ಖಾನ್‌ ವಾಟ್ಸಾಪ್‌ ಸಂದೇಶದಲ್ಲಿ ಆಕ್ಷೇಪಾರ್ಹ ಅಂಶಗಳಿಲ್ಲ. ಎಲ್ಲಾ ಆರೋಪಿಗಳು ಸಾಮಾನ್ಯ ಉದ್ದೇಶದಿಂದ ಕಾನೂನುಬಾಹಿರ ಕೃತ್ಯ ಎಸಗಲು ಮುಂದಾಗಿದ್ದರು ಎಂದು ಈ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಯಾವುದೇ ಸೂಕ್ತ ಪುರಾವೆ ದಾಖಲೆಯಲ್ಲಿ ಲಭಿಸಿಲ್ಲ ಎಂದು ಕೂಡ ನ್ಯಾಯಾಲಯ ಒತ್ತಿ ಹೇಳಿದೆ.

ಬದಲಿಗೆ ಇಲ್ಲಿಯವರೆಗೆ ನಡೆದ ತನಿಖೆಯ ಪ್ರಕಾರ ಮೂವರೂ ಆರೋಪಿಗಳು ಪ್ರತ್ಯೇಕವಾಗಿ ಹಡಗಿನಲ್ಲಿ ಪಯಣಿಸುತ್ತಿದ್ದರು. ಈ ಮೂವರೂ ಮಾದಕವಸ್ತು ಪ್ರಕರಣದ ಬಗ್ಗೆ ಸಂಚು ರೂಪಿಸಿರಲಿಲ್ಲ. ತೂಫಾನ್‌ ಸಿಂಗ್‌ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಹೇಳಿರುವಂತೆ ಆರೋಪಿಗಳು ಎನ್‌ಸಿಬಿಗೆ ನೀಡಿದ ತಪ್ಪೊಪ್ಪಿಗೆ ಹೇಳಿಕೆಗಳಿಗೆ ಯಾವುದೇ ಮೌಲ್ಯವಿಲ್ಲ. ಪಿತೂರಿಯ ಅಪರಾಧ ಸಾಬೀತಾಗದ ಕಾರಣ ಜಾಮೀನು ಮಂಜೂರು ಮಾಡಲು ಮಾಡುವಲ್ಲಿ ಸೆಕ್ಷನ್ 37 ರ ಕಠಿಣತೆ ಅನ್ವಯಿಸುವುದಿಲ್ಲ ಎಂದು ಪೀಠ ತೀರ್ಪು ನೀಡಿದೆ.