Justice Abhay Shreeniwas Oka Image credit: Akhil Maharashtra Giryarohan Mahasangh
ಸುದ್ದಿಗಳು

ಜಗತ್ತಿನ ಯಾವುದೇ ಶಕ್ತಿ ನ್ಯಾಯಮೂರ್ತಿಗಳ ಕೆಲಸ ತಡೆಯಲಾಗದು: ನ್ಯಾ. ಓಕ್‌

“ನ್ಯಾಯಾಂಗದಲ್ಲಿನ ವೃತ್ತಿಗಳ ಕುರಿತು ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಪರಿಷತ್‌ಗಳು ಕೈಪಿಡಿಯನ್ನು ಹೊರತಂದಿವೆ. ಈ ಪುಸ್ತಕವನ್ನು ಹಂಚಿಕೊಳ್ಳುತ್ತೇನೆ. ಅದನ್ನು ಕನ್ನಡದಲ್ಲೂ ಹೊರತರಬಹುದಾಗಿದೆ” ಎಂದ ಸುಪ್ರೀಂ ಕೋರ್ಟ್‌ ನ್ಯಾ. ಓಕ್‌.

Siddesh M S

“ನ್ಯಾಯಮೂರ್ತಿಯಾಗಿ ನಾವು ಮಾಡುವ ಕೆಲಸವನ್ನು ಜಗತ್ತಿನ ಯಾವುದೇ ಶಕ್ತಿ ನಿಯಂತ್ರಿಸಲಾಗದು. ನಿರ್ಧಾರ ಕೈಗೊಳ್ಳುವ ಅಧಿಕಾರ ನಮಗೆ ಇರುತ್ತದೆ. ನಮ್ಮ ಆತ್ಮಸಾಕ್ಷಿ ಮತ್ತು ಕಾನೂನಿನ ನಿಬಂಧನೆಗೆ ಇದು ಒಳಪಟ್ಟಿರುತ್ತದೆ” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರು ಹೇಳಿದರು.

ಬೆಂಗಳೂರಿನ ರಾಜಾಜಿನಗರದ ಕೆಎಲ್ಇ ಸೊಸೈಟಿಯ ಕಾನೂನು ಕಾಲೇಜು ಮತ್ತು ಸಮುತ್ಕರ್ಷ್ ಟ್ರಸ್ಟ್ ವತಿಯಿಂದ ಶನಿವಾರ ಕೆಎಲ್ಇ ನಿಜಲಿಂಗಪ್ಪ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ನ್ಯಾಯಾಂಗ ಸೇವೆಗಳು: ಅವಕಾಶ ಮತ್ತು ಸವಾಲು” ಕುರಿತಾದ ರಾಷ್ಟ್ರೀಯ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಆತ್ಮಸಾಕ್ಷಿ ಮತ್ತು ಕಾನೂನಿನ ನಿಬಂಧನೆ ಎಂಬ ಸಣ್ಣ ನಿರ್ಬಂಧಗಳು ಮಾತ್ರ ನ್ಯಾಯಾಧೀಶರ ಮೇಲಿರುತ್ತವೆ. ನ್ಯಾಯಮೂರ್ತಿ ಹುದ್ದೆಯಲ್ಲಿ ಕುಳಿತಾಗ ಸ್ವತಂತ್ರ ವ್ಯಕ್ತಿಯಾಗಿರುತ್ತೇವೆ. ಅತ್ಯುತ್ತಮ ಮತ್ತು ಗುಣಾತ್ಮಕವಾದ ತೀರ್ಪು ನೀಡುವ ಸಾಮರ್ಥ್ಯ ಮತ್ತು ಅವಕಾಶ ಹೊಂದಿರುತ್ತೇವೆ. ಇದು ನ್ಯಾಯಾಧೀಶರ ಹುದ್ದೆಯ ಮಹತ್ವ” ಎಂದು ಅವರು ವಿವರಿಸಿದರು.

“ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಈಗ ನ್ಯಾಯಾಂಗ ಕ್ಷೇತ್ರದಲ್ಲಿ ಉತ್ತಮ ಉದ್ಯೋಗಾವಕಾಶಗಳಿದ್ದು, ಅತ್ಯುತ್ತಮ ವೇತನ, ಭತ್ಯೆ ಸಿಗುತ್ತದೆ. ಸಮಾಜದಲ್ಲಿ ಗೌರವ ಇರುತ್ತದೆ. ಹೀಗಾಗಿ, ಇತರ ಕ್ಷೇತ್ರದಲ್ಲಿರುವವರಿಗಿಂತ ಉತ್ತಮವಾಗಿಲ್ಲ ಎಂಬ ವಿಚಾರದಿಂದ ಕಾನೂನು ವಿದ್ಯಾರ್ಥಿಗಳು ಹೊರಬರಬೇಕು” ಎಂದರು.

“ಸಿವಿಲ್‌ ನ್ಯಾಯಮೂರ್ತಿಯಾಗಿ ನೇಮಕವಾಗುವವರಿಗೆ ಅಂದಾಜು 95 ಸಾವಿರದಿಂದ 1.05 ಲಕ್ಷ ರೂಪಾಯಿ ವೇತನ ಸಿಗುತ್ತದೆ. ಹಿರಿಯ ಸಿವಿಲ್‌ ನ್ಯಾಯಾಧೀಶರಾದರೆ ವೇತನ 1.5 ಲಕ್ಷ ರೂಪಾಯಿ ದಾಟುತ್ತದೆ. ಇದರ ಜೊತೆಗೆ ಭತ್ಯೆಗಳು ಇರುತ್ತವೆ. ಈ ಎಲ್ಲಾ ದೃಷ್ಟಿಯಿಂದ ನ್ಯಾಯಾಂಗ ಸೇವೆಯಲ್ಲಿನ ಉದ್ಯೋಗ ಸಾಧ್ಯತೆಗಳ ಬಗ್ಗೆ ಕಾನೂನು ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು” ಎಂದರು.

“ಸುಪ್ರೀಂ ಕೋರ್ಟ್‌ನಿಂದ ಹಿಡಿದು ಸಿವಿಲ್‌ ನ್ಯಾಯಾಧೀಶರವರೆಗಿನ ಎಲ್ಲಾ ನ್ಯಾಯಮೂರ್ತಿಗಳ ಕೆಲಸ ಒಂದೇ ಆಗಿರುತ್ತದೆ. ಜನರ ಅತ್ಯಂತ ಅಗತ್ಯವಾದ ಸಮಸ್ಯೆಗಳನ್ನು ನಿರ್ಧರಿಸುವ ಹಂತದಲ್ಲಿ ಸಿವಿಲ್‌ ನ್ಯಾಯಾಧೀಶರು ಇರುತ್ತಾರೆ. ಸಿವಿಲ್‌, ಜಿಲ್ಲಾ ನ್ಯಾಯಾಧೀಶರ ಕೆಲಸವು ಸಾಂವಿಧಾನಿಕ ನ್ಯಾಯಾಲಯಗಳಲ್ಲಿರುವ ನ್ಯಾಯಮೂರ್ತಿಗಳ ಹುದ್ದೆಗಿಂತ ಭಿನ್ನವಾಗಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಿವಿಲ್‌ ನ್ಯಾಯಾಲಯಗಳು ಕೆಳಹಂತದ ನ್ಯಾಯಾಲಯಗಳಲ್ಲ. ಸಿವಿಲ್‌ ನ್ಯಾಯಾಧೀಶರು ಸಾಮಾನ್ಯ ಜನರ ಸಮಸ್ಯೆಗಳಿಗೆ ಪ್ರತಿದಿನ ಎದುರಾಗುತ್ತಾರೆ. ಅವರ ಸಮಸ್ಯೆಗಳಿಗೆ ಸಿವಿಲ್‌ ನ್ಯಾಯಾಧೀಶರು ಪರಿಹಾರ ಒದಗಿಸುತ್ತಾರೆ” ಎಂದರು.

“ಯಾವುದೇ ರಾಜ್ಯದಲ್ಲಿ ನೋಡಿದರೂ ಈಗ ಶೇ. 40-50ರಷ್ಟು ನ್ಯಾಯಮೂರ್ತಿಗಳು ಮಹಿಳೆಯರಾಗಿದ್ದಾರೆ ಎಂಬ ಬದಲಾವಣೆಯನ್ನು ನಾನು ಕಾಣುತ್ತಿದ್ದೇನೆ. ಇದು ಸ್ವಾಗತಾರ್ಹವಾದ ಬದಲಾವಣೆ” ಎಂದು ಹೇಳಿದರು.

“ನ್ಯಾಯಾಂಗದಲ್ಲಿನ ವೃತ್ತಿಯು ಅತ್ಯುತ್ತಮ ಅವಕಾಶ ಎಂಬುದು ನಮ್ಮ ಕಾನೂನು ವಿದ್ಯಾರ್ಥಿಗಳಿಗೆ ತಿಳಿದಿಲ್ಲ. 70-80ರ ದಶಕದಲ್ಲಿ ನ್ಯಾಯಾಂಗ ಸೇವೆಗೆ ಸೇರುವುದಕ್ಕೆ ಯಾರೂ ಸಲಹೆ ನೀಡುತ್ತಿರಲಿಲ್ಲ. ಈಗ ಎಲ್ಲವೂ ಬದಲಾಗಿದೆ” ಎಂದರು.

“ಅತ್ಯಂತ ಸ್ಪರ್ಧಾತ್ಮಕ, ಪ್ರತಿಭಾನ್ವಿತ, ಬುದ್ದಿವಂತ, ಮಹತ್ವಾಕಾಂಕ್ಷೆ ಹೊಂದಿರುವ ಯವಕ-ಯುವತಿಯರು ಕಾನೂನು ಕೋರ್ಸ್‌ಗಳಿಗೆ ಸೇರ್ಪಡೆಯಾಗುತ್ತಿದ್ದಾರೆ. ಹೀಗಾಗಿ, ಕಾನೂನು ಕಾಲೇಜುಗಳಿಗೆ ನಾವು ಭೇಟಿ ಕೊಟ್ಟು, ನ್ಯಾಯಾಂಗ ಅಧಿಕಾರಿ ಅಥವಾ ಕಾನೂನು ಬೋಧಕ ವೃತ್ತಿ ಪ್ರವೇಶಿಸುವ ಕುರಿತು ಅವರಿಗೆ ತಿಳಿಸಬೇಕಿದೆ” ಎಂದು ಹೇಳಿದರು.

“ವಿಜ್ಞಾನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ವ್ಯವಸ್ಥಿತವಾಗಿ ಸಂಶೋಧನೆ ನಡೆಸುವ ಸಂಸ್ಥೆಗಳಿವೆ. ಆದರೆ, ಕಾನೂನು ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಸಂಶೋಧನಾ ಸಂಸ್ಥೆಗಳು ಇಲ್ಲ. ಈ ಕಡೆಯೂ ಕಾನೂನು ವಿದ್ಯಾರ್ಥಿಗಳು ಗಮನಹರಿಸಬೇಕು” ಎಂದು ಸಲಹೆ ನೀಡಿದರು.

“ನ್ಯಾಯಾಂಗದಲ್ಲಿನ ವೃತ್ತಿಗಳ ಕುರಿತು ಮಹಾರಾಷ್ಟ್ರ ಮತ್ತು ಗೋವಾ ವಕೀಲರ ಪರಿಷತ್‌ಗಳು ಕೈಪಿಡಿಯನ್ನು ಹೊರತಂದಿವೆ. ಈ ಪುಸ್ತಕವನ್ನು ಹಂಚಿಕೊಳ್ಳುತ್ತೇನೆ. ಅದನ್ನು ಕನ್ನಡದಲ್ಲೂ ಹೊರತರಬಹುದಾಗಿದೆ” ಎಂದರು.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎನ್‌ ವೆಂಕಟಾಚಲಯ್ಯ ಅವರು ಆನ್‌ಲೈನ್‌ನಲ್ಲಿ ಆಶಯ ನುಡಿಗಳನ್ನಾಡಿದರು. ಕರ್ನಾಟಕ ಹೈಕೋರ್ಟ್‌ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್‌ ಅರಾಧೆ, ನ್ಯಾಯಮೂರ್ತಿಗಳಾದ ಬಿ ವೀರಪ್ಪ, ಪಿ ಎಸ್‌ ದಿನೇಶ್‌ ಕುಮಾರ್‌, ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ ನಾವದಗಿ, ಕೆಎಲ್‌ಇ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜೆ ಎಂ ಮಲ್ಲಿಕಾರ್ಜುನಯ್ಯ, ಕಾರ್ಯಕ್ರಮ ಸಂಘಟನಾ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ವಕೀಲರಾದ ಶ್ರೀಧರ್‌ ಪ್ರಭು ಅವರು ಉಪಸ್ಥಿತರಿದ್ದರು.