ಕೊಲಿಜಿಯಂ ಇಲ್ಲದಿದ್ದಾಗ ಕಿರಿಯ ನ್ಯಾಯಮೂರ್ತಿಗಳನ್ನು ಸಿಜೆಐ ಆಗಿ ನೇಮಿಸಲಾಗಿತ್ತು: ಇತಿಹಾಸ ನೆನಪಿಸಿದ ನ್ಯಾ. ಓಕ್‌

“ನ್ಯಾಯಮೂರ್ತಿಗಳನ್ನು ನ್ಯಾಯಮೂರ್ತಿಗಳೇ ನೇಮಕ ಮಾಡುವ ವ್ಯವಸ್ಥೆ (ಕೊಲಿಜಿಯಂ) ಇರುವುದು ಭಾರತದಲ್ಲಿ ಮಾತ್ರ. ಹೊಣೆಗಾರಿಕೆಯಿಲ್ಲದ ನ್ಯಾಯಾಂಗವು ಪ್ರಜಾಪ್ರಭುತ್ವದ ಪರಿಕಲ್ಪನೆಗೆ ವಿರುದ್ಧವಾಗಿದೆಯೇ?” ಎಂದು ಪ್ರಶ್ನಿಸಿದ ಕಾನೂನು ವಿದ್ಯಾರ್ಥಿ.
Supreme Court Judge, Justice A S Oka
Supreme Court Judge, Justice A S Oka
Published on

"ಕೊಲಿಜಿಯಂ ವ್ಯವಸ್ಥೆಯಿಂದ ಹೊರಬರಬೇಕೆಂದರೆ ಅದಕ್ಕಿಂತ ಹೆಚ್ಚು ಪಾರದರ್ಶಕ ಮತ್ತು ಅತ್ಯುತ್ತಮ ವ್ಯವಸ್ಥೆಯನ್ನು ರೂಪಿಸಿಕೊಂಡು ಅದರಿಂದ ಹೊರಬರಬೇಕು. ಇದಕ್ಕೆ ಪರ್ಯಾಯವಾಗಿರುವ, ನ್ಯಾಯಾಂಗದ ಸ್ವಾತಂತ್ರ್ಯವನ್ನು ಬಿಟ್ಟುಕೊಡದಂಥ ವ್ಯವಸ್ಥೆಯ ಬಗ್ಗೆ ನಾವು ಯೋಚಿಸಬೇಕು,” ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರು ಅಭಿಪ್ರಾಯಪಟ್ಟರು.

ಬೆಂಗಳೂರಿನ ರಾಜಾಜಿನಗರದ ಕೆಎಲ್ಇ ಸೊಸೈಟಿಯ ಕಾನೂನು ಕಾಲೇಜು ಮತ್ತು ಸಮುತ್ಕರ್ಷ್ ಟ್ರಸ್ಟ್ ವತಿಯಿಂದ ಶನಿವಾರ ಕೆಎಲ್ಇ ಸೊಸೈಟಿಯ ಎಸ್‌ ನಿಜಲಿಂಗಪ್ಪ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ “ನ್ಯಾಯಾಂಗ ಸೇವೆಗಳು: ಅವಕಾಶ ಮತ್ತು ಸವಾಲು” ಎನ್ನುವ ವಿಷಯವಾಗಿ ಏರ್ಪಡಿಸಿದ್ದ ರಾಷ್ಟ್ರೀಯ ಸೆಮಿನಾರ್‌ನಲ್ಲಿ ಅವರು ಮಾತನಾಡಿದರು.

ನ್ಯಾ. ಓಕ್‌ ಅವರು ಉದ್ಘಾಟನಾ ಭಾಷಣದ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಕಾನೂನು ವಿದ್ಯಾರ್ಥಿ ನೀಲೇಶ್‌ ಜಾಧವ್‌ ಎನ್ನುವವರು “ನ್ಯಾಯಮೂರ್ತಿಗಳನ್ನು ನ್ಯಾಯಮೂರ್ತಿಗಳೇ ನೇಮಕ ಮಾಡುವ ವ್ಯವಸ್ಥೆ (ಕೊಲಿಜಿಯಂ) ಇರುವುದು ಭಾರತದಲ್ಲಿ ಮಾತ್ರ. ಸಂಪೂರ್ಣ ಹೊಣೆಗಾರಿಕೆಯಿಲ್ಲದ ನ್ಯಾಯಾಂಗವು ಪ್ರಜಾಪ್ರಭುತ್ವದ ಪರಿಕಲ್ಪನೆಗೆ ವಿರುದ್ಧವಾಗಿದೆಯೇ” ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಓಕ್‌ ಅವರು, “ಕೊಲಿಜಿಯಂ ವ್ಯವಸ್ಥೆಯನ್ನು ಮೊದಲಿನಿಂದಲೂ ಟೀಕಿಸಲಾಗುತ್ತಿದೆ. ನಾನು ವ್ಯವಸ್ಥೆಯ ಭಾಗವಾಗಿರುವುದರಿಂದ ನಾನು ಇಲ್ಲಿಂದ ಪಲಾಯನ ಮಾಡಲಾಗದು. ಕೊಲಿಜಿಯಂ ವ್ಯವಸ್ಥೆ ಸರಿಯಿಲ್ಲ ಎಂದರೆ ನಾವು ಅದರಿಂದ ಹೊರಬರಬೇಕು. ಆದರೆ, ಇದಕ್ಕಿಂತ ಹೆಚ್ಚು ಪಾರದರ್ಶಕ ಮತ್ತು ಅತ್ಯುತ್ತಮ ವ್ಯವಸ್ಥೆಯನ್ನು ರೂಪಿಸಿಕೊಂಡು ಅದರಿಂದ ಹೊರಬರಬೇಕು. ಇದಕ್ಕೆ ಪರ್ಯಾಯವಾಗಿರುವ ನ್ಯಾಯಾಂಗದ ಸ್ವಾತಂತ್ರ್ಯವನ್ನು ಬಿಟ್ಟುಕೊಡದಂಥ ವ್ಯವಸ್ಥೆಯ ಬಗ್ಗೆಯೂ ನಾವು ಯೋಚಿಸಬೇಕು” ಎಂದರು.

“ಕರ್ನಾಟಕದ ಅತ್ಯಂತ ಪ್ರತಿಭಾವಂತ ವಕೀಲರೊಬ್ಬರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್‌ಗೆ ಶಿಫಾರಸ್ಸು ಮಾಡಿದ್ದಕ್ಕೆ ನಾನು ಪಾಲುದಾರನಾಗಿದ್ದೇನೆ. ಮರು ಮಾತಿಲ್ಲದೇ ಆ ವಕೀಲರ ಹೆಸರನ್ನು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಶಿಫಾರಸ್ಸು (ಕೇಂದ್ರ ಸರ್ಕಾರಕ್ಕೆ) ಮಾಡಿತ್ತು. ಆನಂತರ ಆ ವಕೀಲರು ತಮ್ಮ ಒಪ್ಪಿಗೆಯನ್ನು ಹಿಂಪಡೆದಿದ್ದರು. ಏಕೆ ಹೀಗಾಯಿತು ಎಂದು ವಕೀಲರ ಸಮುದಾಯ ಪ್ರಶ್ನಿಸಿಕೊಳ್ಳಬೇಕು. ಇದಕ್ಕೆ ಉತ್ತರಿಸಲು ನನಗೆ ನನ್ನದೇ ಆದ ಕೆಲವು ನಿರ್ಬಂಧಗಳಿವೆ” ಎಂದು ಅವರು ಉದಾಹರಿಸಿದರು.

ಮುಂದುವರೆದು, “ಕಾನೂನು ವಿದ್ಯಾರ್ಥಿಗಳಾದ ನೀವು ಇತಿಹಾಸವನ್ನೂ ಓದಬೇಕು. 1970ರ ದಶಕದಲ್ಲಿ ಕೊಲಿಜಿಯಂ ವ್ಯವಸ್ಥೆ ಅಸ್ತಿತ್ವದಲ್ಲಿದಿದ್ದಾಗ ಎರಡು ಬಾರಿ ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಮೂರ್ತಿಗಳನ್ನು ಮೀರಿ ಕಿರಿಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲಾಗಿದೆ. ಕೊಲಿಜಿಯಂ ವ್ಯವಸ್ಥೆಯ ಇಲ್ಲದರ ಪರಿಣಾಮ ಅದಾಗಿತ್ತು” ಎಂದು ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸುವವರು ನೆನಪಿಟ್ಟುಕೊಳ್ಳಬೇಕಾದ ಅಂಶವನ್ನು ಮನಗಾಣಿಸಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಂಗದ ಟೀಕೆಯ ಕುರಿತು ಉತ್ತರಿಸಿದ ನ್ಯಾ. ಓಕ್‌ ಅವರು “ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುವ ವಿಚಾರಗಳು ಬೇಗ ಸಾಯುತ್ತವೆ. ಇಂದು ಯಾರಾದರೂ ನ್ಯಾಯಾಂಗದ ಬಗ್ಗೆ ಏನಾದರೂ ಹುಬ್ಬೇರಿಸುವ ವಿಚಾರ ಪ್ರಸ್ತಾಪಿಸಿದರೆ ಕೆಲವೇ ದಿನಗಳಲ್ಲಿ ಅದು ಮರೆತು ಹೋಗಿರುತ್ತದೆ. ನೀವು ವಾಟ್ಸಾಪ್‌ನಲ್ಲಿ ಏಳು ದಿನಗಳ ಹಿಂದೆ ಯಾವ ಸಂದೇಶ ಸ್ವೀಕರಿಸಿದ್ದರೆ ಎಂದು ನೆನಪಿರುತ್ತದೆಯೇ?” ಎಂದು ಪ್ರಶ್ನಿಸುವ ಮೂಲಕ ಸಾಮಾಜಿಕ ಮಾಧ್ಯಮಗಳ ಮಿತಿ ವಿವರಿಸಿದರು.

“ನ್ಯಾಯಮೂರ್ತಿಗಳಾಗಿ ನಾವು ವ್ಯವಸ್ಥೆಯ ಟೀಕೆಯನ್ನು ಸ್ವೀಕರಿಸಬೇಕು. ಯಾರಾದರೂ ನಮ್ಮನ್ನು ಟೀಕಿಸಿದರಲ್ಲವೇ ನಾವು ಎಲ್ಲಿ ಹಾದಿ ತಪ್ಪುತ್ತಿದ್ದೇವೆ ಎಂಬುದು ಅರಿವಿಗೆ ಬರುವುದು? ಟೀಕಿಸುವುದಕ್ಕೂ ಮುನ್ನ ದತ್ತಾಂಶಗಳನ್ನು ಇಟ್ಟುಕೊಂಡು ನೀವು ಸಂಶೋಧನೆ ಮಾಡಿದ್ದೀರಾ? ಮೊದಲ ತಲೆಮಾರಿನ ವಕೀಲರು ಎಷ್ಟು ಮಂದಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದಾರೆ ಎಂಬುದನ್ನು ಪರಿಶೀಲಿಸಿದ್ದೀರಾ?" ಎಂದು ಪ್ರಶ್ನಿಸಿದರು.

ಮಾತು ಮುಂದುವರಿಸಿ, "ಕೆಲವು ನ್ಯಾಯಮೂರ್ತಿಗಳ ಮಕ್ಕಳು ನ್ಯಾಯಮೂರ್ತಿಗಳಾಗಿರುವುದನ್ನು ನಾನು ಅಲ್ಲಗಳೆಯುವುದಿಲ್ಲ. ಅದು ದಾಖಲೆಯಲ್ಲಿದೆ. ಸಾರ್ವಜನಿಕವಾಗಿ ಇಂದು ದಾಖಲೆಗಳು ಸಿಗುತ್ತವೆ. ಅದನ್ನು ಪರಿಶೀಲಿಸಿ. ಮೊದಲ ತಲೆಮಾರಿನ ಎಷ್ಟು ಮಂದಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿದ್ದಾರೆ ಎಂಬುದುನ್ನು ಪರಿಶೀಲಿಸಿ. ಹಾಲಿ ಸಿಜೆಐ ಹೈಕೋರ್ಟ್‌ ನ್ಯಾಯಮೂರ್ತಿಯ ಮಗನಾಗಿದ್ದರೆ? ನ್ಯಾಯಾಂಗದಲ್ಲಿ ತಪ್ಪುಗಳಾಗುತ್ತಿದ್ದರೆ ಟೀಕೆ ಮಾಡುವ ಹಕ್ಕು ನಿಮಗೆ ಇದೆ. ಟೀಕೆಯು ಸೂಕ್ಷ್ಮ ಅಧ್ಯಯನ ಮತ್ತು ವಿಶ್ಲೇಷಣೆಯನ್ನು ಆಧರಿಸಿರಬೇಕು” ಎಂದು ತಿಳಿ ಹೇಳಿದರು.

Also Read
ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಲು ನೀಡಿದ್ದ ಸಮ್ಮತಿ ಹಿಂಪಡೆದ ಹಿರಿಯ ವಕೀಲ ಆದಿತ್ಯ ಸೋಂಧಿ

2021ರ ಫೆಬ್ರವರಿ 4ರಂದು ಸುಪ್ರೀಂ ಕೋರ್ಟ್‌ ಕೊಲಿಜಿಯಂ ಕರ್ನಾಟಕ ಹಿರಿಯ ವಕೀಲ ಆದಿತ್ಯ ಸೋಂಧಿ ಅವರ ಹೆಸರನ್ನು ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಇತರೆ ಮೂವರ ಜೊತೆ ಶಿಫಾರಸ್ಸು ಮಾಡಿತ್ತು. ಉಳಿದಿಬ್ಬರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಿದ್ದ ಕೇಂದ್ರ ಸರ್ಕಾವು ಸೋಂಧಿ ಅವರ ಹೆಸರು ಪರಿಗಣಿಸಿರಲಿಲ್ಲ. ಬಳಿಕ 2021ರ ಸೆಪ್ಟೆಂಬರ್‌ 1ರ ಸಭೆಯ ಬಳಿಕ ಕೊಲಿಜಿಯಂ ಮತ್ತೊಮ್ಮೆ ಸೋಂಧಿ ಅವರ ಹೆಸರನ್ನು ಪುನರುಚ್ಚರಿಸಿತ್ತು. ಇದನ್ನೂ ಕೇಂದ್ರ ಸರ್ಕಾರ ಪರಿಗಣಿಸಿರಲಿಲ್ಲ. ಹೀಗಾಗಿ, ನ್ಯಾಯಮೂರ್ತಿಯಾಗಲು ನೀಡಿದ್ದ ಸಮ್ಮತಿಯನ್ನು ವಕೀಲ ಸೋಂಧಿ ಅವರು ಹಿಂಪಡೆದಿದ್ದರು ಎಂಬುದನ್ನು ಇಲ್ಲಿ ನೆನಯಬಹುದಾಗಿದೆ.

Kannada Bar & Bench
kannada.barandbench.com