Corona masks and sanitizers
Corona masks and sanitizers 
ಸುದ್ದಿಗಳು

ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ಸೂಕ್ತ ಕ್ರಮ ಜರುಗಿಸದ ಸರ್ಕಾರ: ಕರ್ನಾಟಕ ಹೈಕೋರ್ಟ್ ಅಸಮಾಧಾನ

Bar & Bench

ಕೋವಿಡ್- 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ, ವಿಶೇಷವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮುಖಗವಸುಗಳನ್ನು ಧರಿಸದ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದ ವ್ಯಕ್ತಿಗಳ ವಿರುದ್ಧ ರಾಜ್ಯಸರ್ಕಾರ ತ್ವರಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದೆ.

ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳ ಭಾಗವಾಗಿರುವ ಕೋವಿಡ್ -19 ನಿರ್ವಹಣೆಯ ರಾಷ್ಟ್ರೀಯ ನಿರ್ದೇಶನಗಳನ್ನು ರಾಜ್ಯದಲ್ಲಿ ಅನುಸರಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ನಡೆಸಿತು, ಈ ಸಂದರ್ಭದಲ್ಲಿ ಕೋರ್ಟ್ ಹೇಳಿದ್ದು:

"ಕೋವಿಡ್- 19 ಸಾಂಕ್ರಾಮಿಕ ಎರಗಿ ಸುಮಾರು ಆರು ತಿಂಗಳು ಗತಿಸಿದೆ. ಮುಖಗವಸುಗಳನ್ನು ಕಡ್ಡಾಯವಾಗಿ ಬಳಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಅಂಶವನ್ನು ನ್ಯಾಯಾಂಗ ಸೂಚನೆಗೆ (Judicial notice) ಪರಿಗಣಿಸಬೇಕಾಗುತ್ತದೆ."
ಕರ್ನಾಟಕ ಹೈಕೋರ್ಟ್

ಮುಖಗವಸುಗಳನ್ನು ಧರಿಸದ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ದಕ್ಕಾಗಿ 19,500 ಜನರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಕೋವಿಡ್- 19 ಪ್ರಕರಣಗಳ ಹತೋಟಿ ನಿಟ್ಟಿನಲ್ಲಿ, ನ್ಯಾಯಪೀಠ ಈ ಕೆಳಗಿನ ನಿರ್ದೇಶನ ನೀಡಿದೆ:

  • ಮುಖಗವಸುಗಳು ಮತ್ತು ಸಾಮಾಜಿಕ ಅಂತರಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಅತ್ಯಂತ ಪರಿಣಾಮಕಾರಿ ಕ್ರಮ ಜರುಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ರಾಜ್ಯದಲ್ಲಿ ಪ್ರತಿದಿನ 9,000 ಕ್ಕೂ ಹೆಚ್ಚು ಕೋವಿಡ್- 19 ಸಕಾರಾತ್ಮಕ ಪ್ರಕರಣಗಳು ವರದಿಯಾಗುತ್ತಿವೆ ಎಂಬ ಅಂಶದ ದೃಷ್ಟಿಯಿಂದ ಈ ಕ್ರಮ ಜರುಗಿಸಬೇಕಿದೆ.

  • ಮುಖಗವಸುಗಳು ಮತ್ತು ಸಾಮಾಜಿಕ ಅಂತರಕ್ಕೆ ಸಂಬಂಧಿಸಿದ ನಿಯಮಗಳನ್ನು ಧಾರ್ಮಿಕ ಕ್ಷೇತ್ರಗಳಲ್ಲಿ ಅಥವಾ ದೊಡ್ಡ ಸಮಾವೇಶಗಳು ನಡೆಯುವ ಸ್ಥಳಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕಿದೆ.

  • ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ನಿಯಮಗಳನ್ನು ಪಾಲಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಆಗಾಗ್ಗೆ ಭೇಟಿ ನೀಡುವಂತೆ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಬೇಕು.

  • ಮುಖಗವಸುಗಳನ್ನು ಧರಿಸುವ ಸಂಬಂಧ ಇರುವ ನಿಯಮಗಳನ್ನು ಉಲ್ಲಂಘಿಸುವುದರಿಂದ ಕೋವಿಡ್- 19 ಹರಡಬಹುದು ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು.

  • ಈಜುಕೊಳಗಳ ಬಳಕೆಗೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರ ವಿಧಿಸಿರುವ ನಿರ್ಬಂಧ ಎಲ್ಲಾ ಈಜುಕೊಳಗಳಿಗೆ ಸಂಬಂಧಿಸಿದೆಯೇ ಅಥವಾ ಸಾರ್ವಜನಿಕ ಈಜುಕೊಳಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂದು ಸ್ಪಷ್ಟವಾಗಿಲ್ಲ. ರಾಜ್ಯ ಈ ಅಂಶವನ್ನು ಸ್ಪಷ್ಟಪಡಿಸಬೇಕು.

  • ತಪ್ಪಿತಸ್ಥ ವ್ಯಕ್ತಿಗಳ ಸ್ಥಾನಮಾನ ಲೆಕ್ಕಿಸದೆ ರಾಜ್ಯ ಸರ್ಕಾರ, ಅದರ ಸಂಸ್ಥೆಗಳು / ಅಂಗಗಳು ಮತ್ತು ಸ್ಥಳೀಯ ಸಂಸ್ಥೆಗಳು ಸಾಮಾಜಿಕ ಅಂತರವನ್ನು ಉಲ್ಲಂಘಿಸುವ ಮತ್ತು ಮುಖಗವಸುಗಳನ್ನು ಧರಿಸದಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು.

ಚಾಮುಂಡಿ ಬೆಟ್ಟಕ್ಕೆ ಮುಖಗವಸು ಧರಿಸದೆ ರಾಜಕಾರಣಿ ಮತ್ತು ನಟರೊಬ್ಬರು ಭೇಟಿ ನೀಡಿದ್ದ ಘಟನೆ ಸೇರಿದಂತೆ ಹಲವು ಪ್ರಕರಣಗಳನ್ನು ಪ್ರಸ್ತಾಪಿಸಿದ ನ್ಯಾಯಾಲಯ ನಟರು ರಾಜಕಾರಣಿಗಳು ಮಾದರಿಯಾಗಬೇಕು. ಅಧಿಕಾರಿಗಳು ಕೈಗೊಂಡ ಕ್ರಮ ತೃಪ್ತಿಕರವಾಗಿಲ್ಲ, ಸರ್ಕಾರ ಈ ಸಂಬಂಧ ಉತ್ತಮ ವರದಿ ಸಲ್ಲಿಸಬೇಕು ಎಂದು ಹೇಳಿತು.

ಇದೇ ವೇಳೆ ವಕೀಲ ಜಿ ಆರ್ ಮೋಹನ್ ರೋಗ ಗುಣಪಡಿಸುವುದಕ್ಕಿಂತ ಅದು ಬರುವುದನ್ನು ತಡೆಗಟ್ಟುವುದು ಮೇಲು. ಹೀಗಾಗಿ ನಿಯಮಗಳನ್ನು ಪಾಲಿಸಲು ಧಾರ್ಮಿಕ ಸ್ಥಳಗಳಿಗೆ ವಿಶೇಷ ಸ್ಕ್ವಾಡ್ ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

ಆಗ ನ್ಯಾಯಾಲಯ, "ಇವೆಲ್ಲವೂ ಸರ್ಕಾರದ ನೀತಿಯ ಭಾಗವಾಗಿದ್ದು ಧಾರ್ಮಿಕ ಕ್ಷೇತ್ರಗಳನ್ನು ಮುಚ್ಚಿಬಿಡುವುದು ಸೋಂಕು ತಡೆಗಟ್ಟುವ ಉತ್ತಮ ಕ್ರಮ’ ಎಂದು ಮೌಖಿಕವಾಗಿ ತಿಳಿಸಿತು.

ವಿಚಾರಣೆಯನ್ನು ಅಕ್ಟೋಬರ್ 6 ಕ್ಕೆ ಮುಂದೂಡಲಾಗಿದೆ.