Parliament
Parliament 
ಸುದ್ದಿಗಳು

ಜನಪ್ರತಿನಿಧಿಗಳ ವಿಚಾರಣೆ: ವಿಶೇಷ ನ್ಯಾಯಾಲಯ ಸ್ಥಾಪನೆಯಲ್ಲಿ ಏಕರೂಪತೆ ಇಲ್ಲ ಎಂದು ಸುಪ್ರೀಂಕೋರ್ಟ್‌ಗೆ ಮಾಹಿತಿ

Bar & Bench

ದೇಶದ ಶಾಸಕರು ಮತ್ತು ಸಂಸದರ ವಿರುದ್ಧ ವಿಶೇಷ ಕಾಯ್ದೆಗಳ ಅಡಿ 189 ಪ್ರಕರಣಗಳು ಬಾಕಿ ಇವೆ ಎಂದು ಅಮಿಕಸ್ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ವಿಜಯ್ ಹನ್ಸಾರಿಯಾ ಬುಧವಾರ ಸುಪ್ರೀಂಕೋರ್ಟಿಗೆ ಮಾಹಿತಿ ನೀಡಿದ್ದಾರೆ.

ಇವುಗಳಲ್ಲಿ 1988ರ ಭ್ರಷ್ಟಾಚಾರ ತಡೆ ಕಾಯ್ದೆಯಡಿ 175 ಪ್ರಕರಣಗಳು ಮತ್ತು 2002ರ ಹಣದ ಅಕ್ರ ವರ್ಗಾವಣೆ ತಡೆ ಕಾಯ್ದೆಯಡಿ 14 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ಸಂಸತ್ತಿನ ಸದಸ್ಯರು ಮತ್ತು ಶಾಸಕಾಂಗ ಸಭೆಗಳ ಸದಸ್ಯರ (ಸಂಸದರು ಮತ್ತು ಶಾಸಕರು) ವಿರುದ್ಧ ಪ್ರಕರಣಗಳನ್ನು ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳ ಸ್ಥಾಪನೆ ಕುರಿತಂತೆ ಯಾವುದೇ ಏಕರೂಪತೆಯಿಲ್ಲ" ಎಂದು ಕೂಡ ಅವರು ತಿಳಿಸಿದ್ದಾರೆ.

1988ರ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಅಪರಾಧಗಳ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಹನ್ಸಾರಿಯಾ ತನ್ನ ವರದಿಯಲ್ಲಿ ಹೇಳಿದ್ದಾರೆ.

"ಉದಾಹರಣೆಗೆ, ಮಧ್ಯಪ್ರದೇಶದಲ್ಲಿ (21 ಪ್ರಕರಣಗಳು ಬಾಕಿ ಉಳಿದಿವೆ) ಮತ್ತು ಕರ್ನಾಟಕದಲ್ಲಿ (20 ಪ್ರಕರಣಗಳು ಬಾಕಿ ಉಳಿದಿವೆ) ಈ ಎಲ್ಲಾ ಪ್ರಕರಣಗಳು ಕ್ರಮವಾಗಿ ಭೋಪಾಲ್ ಮತ್ತು ಬೆಂಗಳೂರಿನಲ್ಲಿ ವಿಶೇಷ ನ್ಯಾಯಾಧೀಶರ (ಸಂಸದ/ ಶಾಸಕ) ಮುಂದೆ ಬಾಕಿ ಉಳಿದಿವೆ. ತೆಲಂಗಾಣದಲ್ಲಿ , ಈ ಪ್ರಕರಣಗಳು ಹೈದರಾಬಾದ್‌ನಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯದ ಎದುರು ಬಾಕಿ ಇವೆ. ದೆಹಲಿಯಲ್ಲಿ, 1988ರ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ದೆಹಲಿ ಪೊಲೀಸರು ಮತ್ತು ಸಿಬಿಐ ಎರಡೂ ವಿಚಾರಣೆ ನಡೆಸುತ್ತಿವೆ. 2002ರ ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ಸಂದರ್ಭದಲ್ಲಿಯೂ ಇದೇ ರೀತಿ ಆಗಿದೆ”
ಅಮಿಕಸ್ ಕ್ಯೂರಿ ಸಲ್ಲಿಸಿರುವ ವರದಿ

ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಯಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಸಂಸದರು / ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಒಂದು ವಿಶೇಷ ನ್ಯಾಯಾಲಯವಿದೆಕರ್ನಾಟಕಕ್ಕೆ ಸಂಬಂಧಿಸಿದಂತೆ, ವಿಶೇಷ ಸಂಸದ / ಶಾಸಕ ನ್ಯಾಯಾಲಯ ಅಸ್ತಿತ್ವದಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ರಾಜ್ಯದೆಲ್ಲೆಡೆಯಿಂದ ಸಾಕ್ಷಿಗಳು ಪ್ರಯಾಣಿಸಬೇಕಾಗಿರುವುದರಿಂದ, ಪ್ರಕರಣಗಳ ವಿಚಾರಣೆಯಲ್ಲಿ ವಿಳಂಬವಾಗುತ್ತಿದೆ. ಭೋಪಾಲ್‌ಗೆ ಸಂಬಂಧಿಸಿದಂತೆ, ಒಬ್ಬ ಹಾಲಿ ಶಾಸಕರ ವಿರುದ್ಧ 67 ಪ್ರಕರಣಗಳಿದ್ದು ಇವು ಇಂದೋರ್ ವ್ಯಾಪ್ತಿಯಲ್ಲಿ ಘಟಿಸಿದ್ದರೂ ಭೋಪಾಲದ ಸಂಸದರು/ಶಾಸಕರ ವಿಶೇಷ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿಸಲಾಗಿದೆ. ಎಂದು ಮಾಹಿತಿ ನೀಡಲಾಗಿದೆ.

ವರದಿಯ ಇತರೆ ಪ್ರಮುಖ ಅಂಶಗಳು ಹೀಗಿವೆ:

  • ಮಾಜಿ ಮತ್ತು ಹಾಲಿ ಶಾಸಕರನ್ನು ಒಳಗೊಂಡ ಕ್ರಿಮಿನಲ್ ಪ್ರಕರಣಗಳನ್ನು ಪ್ರತಿ ಜಿಲ್ಲೆಯ ಒಬ್ಬ ನ್ಯಾಯಾಂಗ ಅಧಿಕಾರಿಗೆ ಹಂಚಿಕೆ ಮಾಡಲು ಪ್ರತಿ ಹೈಕೋರ್ಟ್‌ಗೆ ನಿರ್ದೇಶನ ನೀಡಬಹುದು.

  • ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ನೀಲನಕ್ಷೆ ತಯಾರಿಸುವ ಸಲುವಾಗಿ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಬೇಕು.

  • ವಿಚಾರಣೆಯ ಅವಧಿ ಒಂದು ವರ್ಷ ಮೀರಬಾರದು.

  • ವಿಶೇಷ ಕಾಯ್ದೆ ಅಡಿಯ ಎಲ್ಲಾ ಪ್ರಕರಣಗಳಿಗೆ ಒಬ್ಬ ನ್ಯಾಯಾಂಗ ಅಧಿಕಾರಿಯನ್ನು ನೇಮಿಸಲು ಹೈಕೋರ್ಟ್‌ಗಳಿಗೆ ಸೂಚಿಸಬೇಕು. ಮತ್ತು ಅಧಿಕಾರಿ ಪ್ರಕರಣಗಳನ್ನು ಆದ್ಯತೆಯ ಮೇಲೆ ಇತ್ಯರ್ಥಗೊಳಿಸಲು ಯತ್ನಿಸಬೇಕು.

  • ಜನಪ್ರತಿನಿಧಿಗಳಿಗೆ ಸಂಬಂಧಿಸಿದಂತೆ ಯಾವ ಬಗೆಯ ಪ್ರಕರಣಗಳಿಗೆ ಮೊದಲು ಆದ್ಯತೆ ನೀಡಬೇಕು ಎನ್ನುವ ಬಗ್ಗೆ ಖಚಿತತೆ ಹೊಂದಬೇಕು.

  • ಪ್ರಕರಣಗಳ ಅನಗತ್ಯ ಮುಂದೂಡಿಕೆಗೆ ಅವಕಾಶ ನೀಡಬಾರದು.

  • ಮಾಜಿ ಶಾಸಕರು/ಸಂಸದರಿಗಿಂತಲೂ ಹಾಲಿ ಶಾಸಕರು/ಸಂಸದರ ವಿಚಾರಣೆಗೆ ಹೆಚ್ಚು ಒತ್ತು ನೀಡಬೇಕು.

  • ನ್ಯಾಯಾಲಯಗಳಲ್ಲಿ ವೀಡಿಯೊ ಕಾನ್ಫರೆನ್ಸಿಂಗ್, ಸಾಕ್ಷಿಗಳ ಸುರಕ್ಷತೆ ಮತ್ತು ಭದ್ರತೆಗಾಗಿ ಸೂಕ್ತ ವಿಚಾರಣಾ ಕೊಠಡಿ ರಚನೆ, ಪ್ರಕರಣಗಳಿಗೆ ನೋಡಲ್ ಪ್ರಾಸಿಕ್ಯೂಷನ್ ಅಧಿಕಾರಿ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕಕ್ಕಾಗಿ ನಿಯಮ ರೂಪಿಸಬೇಕು.

ಭಾರತದಾದ್ಯಂತ ಸಂಸದರು ಮತ್ತು ಶಾಸಕರ ವಿರುದ್ಧ ಒಟ್ಟು 4,442 ಪ್ರಕರಣಗಳು ಬಾಕಿ ಉಳಿದಿವೆ ಎಂದು ಹನ್ಸಾರಿಯಾ ಈ ಹಿಂದೆ ನ್ಯಾಯಾಲಯಕ್ಕೆ ತಿಳಿಸಿದ್ದು, ಈ ಪೈಕಿ 2,556 ಮಂದಿ ಜನಪ್ರತಿನಿಧಿಗಳ ವಿಚಾರಣೆ ಇನ್ನೂ ನಡೆದಿಲ್ಲ ಎಂದು ಮಾಹಿತಿ ನೀಡಿದ್ದರು.

ವಿಶೇಷ ಕಾಯ್ದೆಗಳ ಅಡಿಯಲ್ಲಿ ಸಂಸದರು ಮತ್ತು ಶಾಸಕರ ವಿರುದ್ಧ ಬಾಕಿ ಇರುವ ಪ್ರಕರಣಗಳ ಮಾಹಿತಿಯನ್ನು ಎರಡು ದಿನಗಳಲ್ಲಿ ಸಲ್ಲಿಸುವಂತೆ ಸೆಪ್ಟೆಂಬರ್ 14 ರಂದು ಸುಪ್ರೀಂ ಕೋರ್ಟ್ ದೇಶದ ಹೈಕೋರ್ಟ್‌ಗಳಿಗೆ ನಿರ್ದೇಶನ ನೀಡಿತ್ತು.

ಮಾಜಿ ಮತ್ತು ಹಾಲಿ ಸಂಸದರು ಹಾಗೂ ಶಾಸಕರ ವಿರುದ್ಧ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ಕೋರಿ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ವಯ ಅಮಿಕಸ್ ಕ್ಯೂರಿ ಅವರು ಈ ಮಾಹಿತಿ ಸಲ್ಲಿಸಿದ್ದರು.