CNA, Netflix
CNA, Netflix 
ಸುದ್ದಿಗಳು

ʼಎ ಬಿಗ್‌ ಲಿಟಲ್‌ ಮರ್ಡರ್‌ʼ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ನೆಟ್‌ಫ್ಲಿಕ್ಸ್‌, ಸಿಎನ್‌ಎಗೆ ದೆಹಲಿ ಹೈಕೋರ್ಟ್‌ ತಡೆ

Bar & Bench

ದೆಹಲಿಯ ಗುರುಗ್ರಾಮದಲ್ಲಿರುವ ರೆಯಾನ್‌ ಇಂಟರ್‌ನ್ಯಾಷನಲ್‌ ಶಾಲೆಯಲ್ಲಿ ನಡೆದಿದೆ ಎನ್ನಲಾದ ಕೊಲೆಗೆ ಸಂಬಂಧಿಸಿದಂತೆ ರೂಪಿಸಲಾಗಿರುವ “ಎ ಬಿಗ್‌ ಲಿಟಲ್‌ ಮರ್ಡರ್‌” ಸಾಕ್ಷ್ಯಚಿತ್ರವನ್ನು ಪ್ರಸಾರ ಅಥವಾ ಸ್ಟ್ರೀಮ್‌ ಮಾಡದಂತೆ ಚಾನೆಲ್‌ ನ್ಯೂಸ್‌ ಏಷ್ಯಾ (ಸಿಎನ್‌ಎ) ಮತ್ತು ನೆಟ್‌ಫ್ಲಿಕ್ಸ್‌ ಅನ್ನು ದೆಹಲಿ ಹೈಕೋರ್ಟ್‌ ನಿರ್ಬಂಧಿಸಿದೆ.

ಸೇಂಟ್‌ ಕ್ಷೇವಿಯರ್‌ ಶೈಕ್ಷಣಿಕ ಟ್ರಸ್ಟ್‌ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್‌ ನಾಥ್‌ ನೇತೃತ್ವದ ಏಕಸದಸ್ಯ ಪೀಠ ಆದೇಶ ಮಾಡಿದ್ದು, ಸಾಕ್ಷ್ಯಚಿತ್ರ ಸ್ಟ್ರೀಮ್‌ ಮಾಡದಂತೆ ಒಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ನಿರ್ಬಂಧ ವಿಧಿಸಿದೆ. ಎಲ್ಲಾ ಪ್ರತಿವಾದಿಗಳಿಗೂ ನೋಟಿಸ್‌ ಜಾರಿ ಮಾಡಲಾಗಿದ್ದು, ವಿಚಾರಣೆಯನ್ನು ಅಕ್ಟೋಬರ್‌ 22ಕ್ಕೆ ಮುಂದೂಡಲಾಗಿದೆ.

ಶಾಲೆಯ ಅನುಮತಿ ಪಡೆಯದೇ ಶಾಲೆಯ ಹೆಸರು ಮತ್ತು ವಿಡಿಯೊಗಳನ್ನು ವ್ಯಾಪಕವಾಗಿ ಮತ್ತು ಮೇಲಿಂದ ಮೇಲೆ ಬಳಸಲಾಗಿದೆ ಎಂದು ಟ್ರಸ್ಟ್‌ ವಾದಿಸಿತ್ತು. ಇದೇ ವಿಚಾರ ಆಧರಿಸಿ ಹೊರತರಲಾಗಿದ್ದ ಪುಸ್ತಕದಲ್ಲಿ ಫಿರ್ಯಾದುದಾರ ಶಾಲೆಯ ಹೆಸರು ಬಳಕೆ ಮತ್ತು ಅದರ ಉಲ್ಲೇಖ ಮಾಡಿದ್ದ ಹಿನ್ನೆಲೆಯಲ್ಲಿ ಜನವರಿ 22ರಂದು ದೆಹಲಿ ಹೈಕೋರ್ಟ್‌ನ ಮತ್ತೊಂದು ಪೀಠವು ಈ ಹಿಂದೆಯೇ ಅದಕ್ಕೆ ತಡೆ ನೀಡಿದೆ. ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಪ್ರತಿವಾದಿಗಳು ಪ್ರಕಾಶನ, ಪ್ಯಾಕೇಜಿಂಗ್‌, ಬಿಡುಗಡೆ, ಮಾರಾಟಕ್ಕಿಡುವುದು, ಪುಸಕ್ತ ಅಥವಾ ಅದರಲ್ಲಿ ನಿರ್ದಿಷ್ಟ ಭಾಗವನ್ನು ಮಾರಾಟ ಅಥವಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಬಾರದು ಎಂದು ನಿರ್ಬಂಧ ವಿಧಿಸಲಾಗಿತ್ತು ಎಂದು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು.

ಆಕ್ಷೇಪಾರ್ಹವಾದ ಸಾಕ್ಷ್ಯಚಿತ್ರವನ್ನು ಮಯೂರಿಕಾ ಬಿಸ್ವಾಸ್‌ ನಿರ್ಮಿಸಿದ್ದು, ಇದೇ ತಿಂಗಳು ಸಿಎನ್‌ಎ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಮಾಡಲು ನಿರ್ಧರಿಸಲಾಗಿತ್ತು.

2017ರ ಸೆಪ್ಟೆಂಬರ್‌ 8ರಂದು ರೆಯಾನ್‌ ಇಂಟರ್‌ನ್ಯಾಷನಲ್‌ ಶಾಲೆಯ ಶೌಚಾಲಯದಲ್ಲಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದನ್ನು ಆಧರಿಸಿ ಸಾಕ್ಷ್ಯಚಿತ್ರ ರೂಪಿಸಲಾಗಿದೆ. ಈ ಪ್ರಕರಣದ ವಿಚಾರಣೆಯು ಗುರುಗ್ರಾಮದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಶಾಲೆಯ ವಿಡಿಯೊ ಮತ್ತು ಹೆಸರನ್ನು ಸಾಕ್ಷ್ಯಚಿತ್ರದಲ್ಲಿ ಬಳಸುವುದು 2018ರ ಜನವರಿ 8ರಂದು ಗುರುಗ್ರಾಮದ ವಿಚಾರಣಾಧೀನ ನ್ಯಾಯಾಲಯ ಹೊರಡಿಸಿರುವ ಆದೇಶದ ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್‌ಗೆ ಮನವರಿಕೆ ಮಾಡಿಕೊಡಲಾಯಿತು.

ಶಾಲೆಯ ವಾದವನ್ನು ಆಲಿಸಿದ ನ್ಯಾಯಮೂರ್ತಿಗಳು “ಆಕ್ಷೇಪಾರ್ಹವಾದ ನಡೆಯು ಗುರುಗ್ರಾಮದ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯ ಮತ್ತು ಹೈಕೋರ್ಟ್‌ ಸಮನ್ವಯ ಪೀಠವು ಹೊರಡಿಸಿರುವ ಆದೇಶಗಳಿಗೆ ವಿರುದ್ಧವಾಗಿದೆ. ತಮ್ಮ ವಾದದಲ್ಲಿ ಹುರುಳಿದೆ ಎಂಬುದನ್ನು ಫಿರ್ಯಾದುದಾರರು ಮೇಲ್ನೋಟಕ್ಕೆ ಸಾಬೀತುಪಡಿಸಿದ್ದಾರೆ. ಹೀಗಾಗಿ, “ಎ ಬಿಗ್‌ ಲಿಟಲ್‌ ಮರ್ಡರ್‌” ಸಾಕ್ಷ್ಯಚಿತ್ರದ ಸ್ಟ್ರೀಮಿಂಗ್‌, ಪ್ರಸಾರ ಇತ್ಯಾದಿ ಮಾಡದಂತೆ ಅಥವಾ ಅದರ ಸಂಕ್ಷಿಪ್ತಗೊಳಿಸಿದ ಆವೃತ್ತಿಯನ್ನು ಪ್ರಸಾರ ಮಾಡದಂತೆ ನಿರ್ಬಂಧಿಸಲಾಗಿದೆ” ಎಂದು ಆದೇಶದಲ್ಲಿ ಹೇಳಿದೆ.

ಫಿರ್ಯಾದುದಾರ ಶಾಲೆಗೆ ಸಂಬಂಧಿಸಿದ ಉಲ್ಲೇಖಗಳನ್ನು ತೆಗೆದು ಸಾಕ್ಷ್ಯಚಿತ್ರವನ್ನು ಸ್ಟ್ರೀಮ್‌ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.