ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 313ರ ದೃಷ್ಟಿಯಿಂದ ಆರೋಪಿ ಸಲ್ಲಿಸಿದ ಪ್ರತಿವಾದವನ್ನು ಪರಿಗಣಿಸುವುದು ಮತ್ತು ಅದರ ಬಗ್ಗೆ ತೀರ್ಪು ನೀಡುವಾಗ ಲಿಖಿತವಾಗಿ ಕಾರಣಗಳನ್ನು ನೀಡುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪುನರುಚ್ಚರಿಸಿದೆ. [ಜೈಪ್ರಕಾಶ್ ತಿವಾರಿ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].
ಅಂತಹ ಪ್ರತಿವಾದವನ್ನು ವಿವೇಚನೆ ಬಳಸಿ ಕೂಲಂಕಷವಾಗಿ ಪರಿಶೀಲಿಸಬೇಕೆ ವಿನಾ ಕಟ್ಟುನಿಟ್ಟಾಗಿ ಅಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ತಿಳಿಸಿತು.
ಸವಾಲಿನ ರೂಪದಲ್ಲಿ ಪ್ರತಿಕೂಲ ಸಾಕ್ಷ್ಯವನ್ನು ಪ್ರಸ್ತುತಪಡಿಸಿದ್ದಾಗ ತಮ್ಮ ಪ್ರತಿವಾದ ಮಂಡಿಸಲು ಆರೋಪಿಗಳಿಗೆ ಸಿಆರ್‌ಪಿಸಿ ಸೆಕ್ಷನ್ 313 ಅವಕಾಶ ಕಲ್ಪಿಸುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.
“ಎಲ್ಲಾ ಸನ್ನಿವೇಶಗಳನ್ನು ಒಟ್ಟಿಗೆ ಸೇರಿಸಿ ಆರೋಪಿಗೆ ತನ್ನನ್ನು ನಿರೂಪಿಸುವಂತೆ ಒಂದೇ ಒಂದು ಅವಕಾಶ ಒದಗಿಸಿದರೆ ಆತ ತರ್ಕಬದ್ಧ ಮತ್ತು ಅರ್ಥಗರ್ಭಿತ ವಿವರಣೆ ನೀಡಲು ಸಾಧ್ಯವಾಗದು. ನ್ಯಾಯಯುತ ಅವಕಾಶವನ್ನು ಮಣಿಸುವಂತಹ ಇಂತಹ ಕ್ರಿಯೆಗಳು ಬರೀ ಔಪಚಾರಿಕತೆಯೇ ವಿನಾ ಬೇರೇನೂ ಅಲ್ಲ. ಸೆಕ್ಷನ್ 313ರ ನಿಜವಾದ ಉದ್ದೇಶ ಈಡೇರಿಸದೇ ಇರುವುದು ಕಟ್ಟಕಡೆಗೆ ಆರೋಪಿಗಳಿಗೆ ಗಂಭೀರ ತಾರತಮ್ಯ ಉಂಟುಮಾಡಲಿದ್ದು ಇದರಿಂದ ನ್ಯಾಯಯುತ ತೀರ್ಮಾನಕ್ಕೆ ಬರಲು ಅಗತ್ಯವಾದ ಎಲ್ಲಾ ಸಂಗತಿ ಮತ್ತು ಸಂದರ್ಭಗಳ ಪ್ರಯೋಜನ ನ್ಯಾಯಾಲಯಕ್ಕೆ ದೊರೆಯದೇ ಇರಬಹುದು” ಎಂದು ಪೀಠ ತಿಳಿಸಿದೆ.
ದೂರುದಾರೆ ಮತ್ತು ಆಕೆಯ ತಾಯಿಯ ಸಾಕ್ಷ್ಯವನ್ನಷ್ಟೇ ಆಧರಿಸಿ ಕೊಲೆ ಯತ್ನ ಆರೋಪದಡಿ ಶಿಕ್ಷೆಗೆ ತುತ್ತಾಗಿದ್ದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಆಪಾದಿತ ಅಪರಾಧ 2003ರಲ್ಲಿ ನಡೆದಿತ್ತು, ವಿಚಾರಣಾ ನ್ಯಾಯಾಲಯ 2005ರಲ್ಲಿ ಮೇಲ್ಮನವಿದಾರನಿಗೆ ಶಿಕ್ಷೆ ವಿಧಿಸಿತ್ತು ಮತ್ತು ಮಧ್ಯಪ್ರದೇಶ ಹೈಕೋರ್ಟ್ 2017ರಲ್ಲಿ ಅದನ್ನು ಎತ್ತಿಹಿಡಿದಿತ್ತು. ಸುಪ್ರೀಂ ಕೋರ್ಟ್ 2018 ರಲ್ಲಿ ತೀರ್ಪನ್ನು ಎತ್ತಿ ಹಿಡಿದಿತ್ತು. ಸುಪ್ರೀಂ ಕೋರ್ಟ್ ಜಾಮೀನು ನೀಡುವ ಮೊದಲು 1 ವರ್ಷ ಮತ್ತು 7 ತಿಂಗಳ ಶಿಕ್ಷೆಯನ್ನು ಆರೋಪಿ- ಮೇಲ್ಮನವಿದಾರ ಅನುಭವಿಸಿದ್ದರು.
ವಿಚಾರಣೆಯ ಅವಧಿಯಲ್ಲಿ ವ್ಯಕ್ತಿಗತವಾಗಿ ಪ್ರಶ್ನೆಗಳನ್ನು ಕೇಳದ ಕಾರಣ ಪೂರ್ವಾಗ್ರಹ ಉಂಟಾಗಿದೆ ಎಂದು ಆರೋಪಿ-ಅಪೀಲುದಾರರ ಪರ ವಕೀಲರು ವಾದ ಮಂಡಿಸಿಲ್ಲ ಎಂಬುದನ್ನು ಗಮನಿಸಿದ ನ್ಯಾಯಾಲಯ ಅರ್ಹತೆಯ ಆಧಾರದ ಮೇಲೆ ಪ್ರಕರಣದ ವಿಚಾರಣೆ ಮುಂದುವರೆಸಲು ನಿರ್ಧರಿಸಿತ್ತು. ದಾವೆಯ ಅವಧಿಯನ್ನು ಕಾರಣವಾಗಿ ನೀಡಿ ಅದು ಹಾಗೆ ಮಾಡಿತ್ತು.
ಪರಿಣಾಮವಾಗಿ ಸಂಬಂಧಿತ ಸಾಕ್ಷಿಗಳ ಹೇಳಿಕೆಗಳನ್ನು ಕೂಡ ಎಚ್ಚರಿಕೆಯಿಂದ ಪರಿಶೀಲಿಸುವ ಅಗತ್ಯವಿದೆ. ತಾಯಿಯ ಪ್ರತ್ಯಕ್ಷದರ್ಶಿ ಹೇಳಿಕೆ ಕೂಡ ಆತ್ಮವಿಶ್ವಾಸದಿಂದ ಕೂಡಿರಲಿಲ್ಲ ಹಾಗೂ ಅಪರಾಧ ನಡೆದಿದೆ ಎನ್ನಲಾದ ಸ್ಥಳದಲ್ಲಿ ಯಾವುದೇ ಮದ್ದುಗುಂಡಿನ ಕಾರ್ಟ್ರಿಜ್‌ಗಳು ಕಂಡುಬರಲಿಲ್ಲ ಎಂದು ನ್ಯಾಯಾಲಯ ಗಮನಿಸಿತು.
ಇದಲ್ಲದೆ, ದೂರುದಾರರು ಸಲ್ಲಿಸಿದ ಮತ್ತೊಂದು ಕ್ರಿಮಿನಲ್ ಮೊಕದ್ದಮೆಯಲ್ಲಿ ಮೇಲ್ಮನವಿ-ಆರೋಪಿಗಳನ್ನು ಈಗಾಗಲೇ ಖುಲಾಸೆಗೊಳಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿತು.
ಸವಾಲಿನ ರೂಪದಲ್ಲಿ ಪ್ರತಿಕೂಲ ಸಾಕ್ಷ್ಯವನ್ನು ಪ್ರಸ್ತುತಪಡಿಸಿದ್ದಾಗ ತಮ್ಮ ಪ್ರತಿವಾದ ಮಂಡಿಸಲು ಆರೋಪಿಗಳಿಗೆ ಸಿಆರ್‌ಪಿಸಿ ಸೆಕ್ಷನ್ 313 ಅವಕಾಶ ಕಲ್ಪಿಸುತ್ತದೆ ಎಂದು ನ್ಯಾಯಾಲಯ ಈ ಹಂತದಲ್ಲಿ ವಿವರಿಸಿತು.
ಇದಲ್ಲದೆ ಒಬ್ಬ ಆರೋಪಿ ಪ್ರತಿವಾದ ಮಂಡಿಸಿದರೆ ಅಥವಾ ವಿವರಣೆ ನೀಡಿದರೆ ಅವನು ತನ್ನ ಸಮರ್ಥನೆಯನ್ನು ಯುಕ್ತ ಅನುಮಾನವಾಗಿ ಸಾಬೀತುಪಡಿಸುವ ಅಗತ್ಯವಿಲ್ಲ ಬದಲಿಗೆ ಸಂಭವನೀಯತೆಗಳ ಆಧಾರದಲ್ಲಿ ಮಾತ್ರ ಸಾಬೀತುಪಡಿಸಬಹುದು ಎಂದು ನ್ಯಾಯಾಲಯ ಹೇಳಿತು.
ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಈಗಾಗಲೇ ಜಾಮೀನಿನ ಮೇಲೆ ಜೈಲಿನಿಂದ ಹೊರಗಿರುವ ಆರೋಪಿಯನ್ನು ಖುಲಾಸೆಗೊಳಿಸಿತು. ಅಲ್ಲದೆ ಅವರ ಜಾಮೀನು ಬಾಂಡ್‌ಗಳನ್ನು ವಿಲೇವಾರಿ ಮಾಡಿತು.
“ಜೊಳ್ಳಿನಿಂದ ಕಾಳನ್ನು ಬೇರ್ಪಡಿಸುವುದು ಮತ್ತು ಪುರಾವೆಗಳ ರಾಶಿಯಿಂದ ಸತ್ಯವನ್ನು ಹೆಕ್ಕುವುದು ನ್ಯಾಯಾಲಯದ ಕರ್ತವ್ಯ” ಎಂದು ಪೀಠ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.
ಆದೇಶದ ಪ್ರತಿಯನ್ನು ಇಲ್ಲಿ ಓದಿ: