ಸಿಆರ್‌ಪಿಸಿ ಸೆಕ್ಷನ್ 160ರ ಅಡಿ ಸಮನ್ಸ್ ನೀಡಲು ಎಫ್‌ಐಆರ್ ದಾಖಲಿಸಿರಬೇಕು: ದೆಹಲಿ ಹೈಕೋರ್ಟ್

ಆ ಮೂಲಕ ಏವಿಯೇಷನ್‌ ಸರ್ವೀಸಸ್‌ ಪ್ರೈವೇಟ್‌ನ ಸಂಸ್ಥಾಪಕ ಹಾಗೂ ವಕೀಲ ಕುಲವಿಂದರ್‌ ಸಿಂಗ್‌ ಕೊಹ್ಲಿ ಅವರಿಗೆ ಎಸ್ಎಎಸ್ ನಗರದ ಸೈಬರ್ ಠಾಣೆ ಪೊಲೀಸರು ನೀಡಿದ್ದ ಸಮನ್ಸ್ ಅನ್ನು ನ್ಯಾಯಾಲಯ ರದ್ದುಗೊಳಿಸಿತು.
ಸಿಆರ್‌ಪಿಸಿ ಸೆಕ್ಷನ್ 160ರ ಅಡಿ ಸಮನ್ಸ್ ನೀಡಲು ಎಫ್‌ಐಆರ್ ದಾಖಲಿಸಿರಬೇಕು: ದೆಹಲಿ ಹೈಕೋರ್ಟ್
Published on

ಒಬ್ಬ ವ್ಯಕ್ತಿಯ ಹಾಜರಾತಿ ಅಗತ್ಯವಿದ್ದಾಗ ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 160ರ ಅಡಿಯಲ್ಲಿ ನೋಟಿಸ್/ಸಮನ್ಸ್‌ ನೀಡಲು ಎಫ್‌ಐಆರ್ ದಾಖಲಿಸಿಕೊಂಡಿರುವುದು ಅಗತ್ಯ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. [ಕುಲವಿಂದರ್ ಸಿಂಗ್ ಕೊಹ್ಲಿ ವಿರುದ್ಧ ದೆಹಲಿ ಸರ್ಕಾರ ನಡುವಣ ಪ್ರಕರಣ].

ಎಫ್‌ಐಆರ್ ದಾಖಲಿಸದೆ ಸಿಆರ್‌ಪಿಸಿ ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಲಾಗದು ಮತ್ತು ಸೆಕ್ಷನ್ 160ರ ಅಡಿಯಲ್ಲಿ ಸಮನ್ಸ್‌ಗಳನ್ನು ಒಬ್ಬ ಅಧಿಕಾರಿ ತನ್ನ ಸ್ವಂತ ಠಾಣೆ ಅಥವಾ ಪಕ್ಕದ ಠಾಣೆಯ ಮಿತಿಯಲ್ಲಿ ವಾಸಿಸುವ ವ್ಯಕ್ತಿಗಳಿಗೆ ಮಾತ್ರ ನೀಡಬಹುದು ಎಂದು ನ್ಯಾ. ಚಂದ್ರ ಧಾರಿ ಸಿಂಗ್ ಹೇಳಿದರು.

"ಸಿಆರ್‌ಪಿಸಿ ನಿಯಮಾನುಸಾರ ಸಿಆರ್‌ಪಿಸಿ ಸೆಕ್ಷನ್ 160ರ ಅಡಿಯಲ್ಲಿ ಸಮನ್ಸ್/ನೋಟಿಸ್‌ಗಳನ್ನು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿ ನೀಡಬಹುದಾಗಿದ್ದು ಅಂತಹ ತನಿಖೆ ಪ್ರಾರಂಭಿಸಲು ಎಫ್‌ಐಆರ್‌ ದಾಖಲಿಸುವುದು ಪೂರ್ವಾಪೇಕ್ಷಿತವಿದೆ. ಎಫ್‌ಐಆರ್‌ ದಾಖಲಿಸದೇ ತನಿಖೆ ಆರಂಭಿಸಲಾಗಿದೆ ಎಂದು ಹೇಳಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.

Also Read
ಹೈಕೋರ್ಟ್‌ ಸಿಆರ್‌ಪಿಸಿ ಸೆಕ್ಷನ್‌ 401ರ ಪರಿಷ್ಕರಣೆ ಅಧಿಕಾರ ಬಳಸಿ ಖುಲಾಸೆಯನ್ನು ಶಿಕ್ಷೆಯಾಗಿ ಮಾರ್ಪಡಿಸಬಹುದೇ?

ವಿಚಾರಣೆಯು ಕಾನೂನುಬದ್ಧ ಮತ್ತು ಮಾನ್ಯವಾಗಿದ್ದರೂ ಕೂಡ, ಪೊಲೀಸ್ ಅಧಿಕಾರಿ ಸಿಆರ್‌ಪಿಸಿ ನಿಬಂಧನೆಗಳನುಸಾರ ಕಾರ್ಯನಿರ್ವಹಿಸಬೇಕು ಮತ್ತು ಅವರು ಮ್ಯಾಜಿಸ್ಟ್ರೇಟ್‌ಗೆ ವರದಿ ನೀಡದೆ ಪ್ರಾಥಮಿಕ ತನಿಖೆ ನಡೆಸುವ ಮೂಲಕ ತಮ್ಮ ಅಧಿಕಾರವ್ಯಾಪ್ತಿ ಮೀರಿ ವರ್ತಿಸಬಾರದು ಎಂದು ನ್ಯಾಯಾಲಯ ವಿವರಿಸಿದೆ.

ಆ ಮೂಲಕ ತನಿಖೆಯೊಂದರಲ್ಲಿ ಫ್ರಾಂಕ್‌ಫಿನ್‌ ಏವಿಯೇಷನ್‌ ಸರ್ವೀಸಸ್‌ ಪ್ರೈವೇಟ್‌ನ ಸಂಸ್ಥಾಪಕ ಹಾಗೂ ವಕೀಲ ಕುಲವಿಂದರ್‌ ಸಿಂಗ್‌ ಕೊಹ್ಲಿ ಅವರಿಗೆ ಎಸ್‌ಎಎಸ್‌ ನಗರದ ಸೈಬರ್‌ ಠಾಣೆ ಪೊಲೀಸರು ನೀಡಿದ್ದ ಸಮನ್ಸ್‌ ಅನ್ನು ನ್ಯಾಯಾಲಯ ರದ್ದುಗೊಳಿಸಿತು.

Kannada Bar & Bench
kannada.barandbench.com