Calcutta High Court  
ಸುದ್ದಿಗಳು

ಪತ್ನಿ ತನ್ನ ಹೆಸರಿನಲ್ಲಿ ಖರೀದಿಸಿದ ಆಸ್ತಿಯನ್ನು ಗಂಡನ ಅನುಮತಿಯಿಲ್ಲದೆ ಮಾರುವುದು ಕ್ರೌರ್ಯವಲ್ಲ: ಕಲ್ಕತ್ತಾ ಹೈಕೋರ್ಟ್

ಹೆಂಡತಿ ಕ್ರೌರ್ಯ ಎಸಗಿ ತೊರೆದುಹೋಗಿದ್ದಾರೆ ಎಂಬ ಆಧಾರದಲ್ಲಿ ಪತಿ ಪರವಾಗಿ ವಿಚ್ಛೇದನಕ್ಕೆ ಅವಕಾಶ ನೀಡಿ ವಿಚಾರಣಾ ನ್ಯಾಯಾಲಯ ಹೊರಡಿಸಿದ್ದ ತೀರ್ಪನ್ನು ಕಲ್ಕತ್ತಾ ಹೈಕೋರ್ಟ್ ರದ್ದುಗೊಳಿಸಿತು.

Bar & Bench

ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ಗಂಡನ ಒಪ್ಪಿಗೆ ಪಡೆಯದೆಯೇ ಮಾರಾಟ ಮಾಡಲು ನಿರ್ಧರಿಸಿದರೆ ಅದು ಕ್ರೌರ್ಯವಾಗುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ಈಚೆಗೆ ತೀರ್ಪು ನೀಡಿದೆ [ಎಂಎಸ್‌ ಮತ್ತು ಜೆಎನ್‌ಎಸ್‌ ನಡುವಣ ಪ್ರಕರಣ].

ಆ ಮೂಲಕ ಹೆಂಡತಿ ಕ್ರೌರ್ಯ ಎಸಗಿ ತೊರೆದುಹೋಗಿದ್ದಾರೆ ಎಂಬ ಆಧಾರದಲ್ಲಿ ಪತಿ ಪರವಾಗಿ ವಿಚ್ಛೇದನಕ್ಕೆ ಅವಕಾಶ ನೀಡಿ ವಿಚಾರಣಾ ನ್ಯಾಯಾಲಯ 2014ರಲ್ಲಿ ಹೊರಡಿಸಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಹರೀಶ್ ಟಂಡನ್ ಮತ್ತು ಪ್ರಸೇನ್‌ಜಿತ್ ಬಿಸ್ವಾಸ್ ಅವರಿದ್ದ ವಿಭಾಗೀಯ ಪೀಠ ರದ್ದುಗೊಳಿಸಿತು.

“ಇಬ್ಬರೂ ವಿದ್ಯಾವಂತರೆಂದು ತೋರುತ್ತಿದ್ದು ಪತಿಯ ಅನುಮೋದನೆ ಅಥವಾ ಅನುಮತಿ ಪಡೆಯದೆ ಪತ್ನಿ ತನ್ನ ಹೆಸರಿನಲ್ಲಿರುವ ಆಸ್ತಿಯನ್ನು ಮಾರಲು ನಿರ್ಧರಿಸಿದರೆ ಅದು ಕ್ರೌರ್ಯವಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಪತ್ನಿಗೆ ಯಾವುದೇ ಆದಾಯದ ಮೂಲ ಇಲ್ಲದ್ದರಿಂದ ಖರೀದಿಸಲಾಗಿದ್ದ ಭೂಮಿಗೆ ಪತಿಯೇ ಹಣ ಪಾವತಿಸಿದ್ದರು ಎಂಬ ಊಹೆ ಇದೆ ಎಂದು ವಿಚಾರಣಾ ನ್ಯಾಯಾಲಯ ತಿಳಿಸಿತ್ತು. 

ಆದರೆ ಇದನ್ನು ಸತ್ಯವೆಂದೇ ಪರಿಗಣಿಸಿದರೂ ಆಸ್ತಿ ಪತ್ನಿಯ ಹೆಸರಲ್ಲಿದೆ ಎಂದ ಹೈಕೋರ್ಟ್‌ ಹೆಂಡತಿಯನ್ನು ಗಂಡನ ಆಸ್ತಿ ಎಂದು ಪರಿಗಣಿಸುವಂತಿಲ್ಲ. ಇಲ್ಲವೇ ಆಕೆ ತನ್ನ ಜೀವನದಲ್ಲಿ ಮಾಡಲು ನಿರ್ಧರಿಸಿದ ಯಾವುದೇ ಕಾರ್ಯ ಮಾಡಲು ಪತಿಯಿಂದ ಅನುಮತಿ ಪಡೆಯಬೇಕು ಎಂದು ನಿರೀಕ್ಷಿಸುವಂತಿಲ್ಲ ಎಂಬುದಾಗಿ ವಿವರಿಸಿದೆ.

ಪತ್ನಿಯ ಒಪ್ಪಿಗೆಯಿಲ್ಲದೆ ಗಂಡ ಆಸ್ತಿ ಮಾರಾಟ ಮಾಡಬಹುದಾದರೆ, ಪತ್ನಿಯ ಹೆಸರಿನಲ್ಲಿರುವ ಆಸ್ತಿಯನ್ನು ಪತಿಯ ಅನುಮತಿಯಿಲ್ಲದೆ ಆಕೆ ಮಾರಾಟ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

"ನಾವು ಲಿಂಗ ಅಸಮಾನತೆಯ ಮನಸ್ಥಿತಿಯನ್ನು ನಿರ್ಮೂಲನೆ ಮಾಡಬೇಕಿದೆ. ಆದ್ದರಿಂದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಅವಲೋಕನ ಸ್ವೀಕಾರಾರ್ಹವಲ್ಲ ಮತ್ತು ಅಸಮರ್ಥನೀಯೆ" ಎಂದು ಅದು ಹೇಳಿದೆ.

ಅಲ್ಲದೆ ಮಹಿಳೆಯರ ಮೇಲೆ ಪುರುಷರ ಪ್ರಾಬಲ್ಯ ಪ್ರಸ್ತುತ ಸಮಾಜಕ್ಕೆ ಸ್ವೀಕಾರಾರ್ಹವಲ್ಲ ಎಂದ ನ್ಯಾಯಾಲಯ ನಮ್ಮ ಸಂವಿಧಾನ ಶಿಲ್ಪಿಗಳು ಅಂತಹ ಅರ್ಥದಲ್ಲಿ ಎಂದಿಗೂ ಹೇಳಿಲ್ಲ ಎಂಬುದಾಗಿ ನುಡಿದಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

MS_V_JNS.pdf
Preview