Chief Justice Satish Chandra Sharma and Justice Subramonium Prasad 
ಸುದ್ದಿಗಳು

ಜನತೆ ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜಿಸದಂತೆ ನಿಗಾ ಇರಿಸುವುದು ನ್ಯಾಯಾಲಯದ ಕರ್ತವ್ಯವಲ್ಲ: ದೆಹಲಿ ಹೈಕೋರ್ಟ್

ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಮಾಡುವುದು, ಉಗುಳುವುದು ಹಾಗೂ ಕಸ ಎಸೆಯುವುದನ್ನು ತಡೆಯಲು ಗೋಡೆಗಳ ಮೇಲೆ ದೇವರ ಚಿತ್ರಗಳನ್ನು ಅಂಟಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.

Bar & Bench

ಸಾರ್ವಜನಿಕ ಮೂತ್ರ ವಿಸರ್ಜನೆ, ಉಗುಳುವಿಕೆ ಹಾಗೂ ಕಸ ಎಸೆಯುವುದು ಸೇರಿದಂತೆ ಪ್ರತಿಯೊಬ್ಬ ನಾಗರಿಕರ ಚಲನವಲನ ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ಸಾಂವಿಧಾನಿಕ ನ್ಯಾಯಾಲಯದ ಕರ್ತವ್ಯವಲ್ಲ ಎಂದು ದೆಹಲಿ ಹೈಕೋರ್ಟ್‌ಸೋಮವಾರ ಹೇಳಿದೆ [ಗೋರಂಗ್ ಗುಪ್ತಾ ವಿರುದ್ಧ ದೆಹಲಿ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಮೂತ್ರ ವಿಸರ್ಜನೆ, ಉಗುಳುವಿಕೆ ಹಾಗೂ ಕಸ ಎಸೆಯುವುದನ್ನು ತಡೆಯಲು ಗೋಡೆಗಳ ಮೇಲೆ ದೇವರ ಚಿತ್ರಗಳನ್ನು ಅಂಟಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ಕಿರಿಯ ವಕೀಲ ಗೋರಂಗ್ ಗುಪ್ತಾ ಅವರಿಗೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಎಚ್ಚರಿಕೆ ನೀಡಿತು.

“ಪ್ರತಿಯೊಬ್ಬ ಪ್ರಜೆಯೂ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುತ್ತಾರೆಯೇ, ಉಗುಳುತ್ತಾರೆಯೇ, ಕಸ ಚೆಲ್ಲುವುದರಲ್ಲಿ ತೊಡಗಿದ್ದಾರೆಯೇ ಎಂದು ಗಮನಿಸುವುದು ಮತ್ತು ಅವರು ಹಾಗೆ ಮಾಡುವುದನ್ನು ನಿಯಂತ್ರಿಸುವುದು ಸಾಂವಿಧಾನಿಕ ನ್ಯಾಯಾಲಯದ ಕರ್ತವ್ಯವಲ್ಲ. ಅರ್ಜಿದಾರರು ಎತ್ತಿರುವ ಕಳಕಳಿಯನ್ನು ಸ್ಥಳೀಯ ನಾಗರಿಕ ಸಂಸ್ಥೆಗಳು ಉತ್ತಮವಾಗಿ ನಿರ್ವಹಿಸಬಲ್ಲವೇ ವಿನಾ ನ್ಯಾಯಾಲಯವಲ್ಲ” ಎಂದು ಅದು ಹೇಳಿದೆ.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೈಕೋರ್ಟ್‌ ನೀಡಿದ್ದ ಆದೇಶದ ಬಗ್ಗೆ ತಿಳಿದೂ ಇದೊಂದು ಹೊಸ ಕಾರಣವೆಂದು ಸಮರ್ಥಿಸಿ ಹೊಸ ಪಿಐಎಲ್‌ ಸಲ್ಲಿಸಿದ ಅರ್ಜಿದಾರರ ಬಗ್ಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ನಿಸ್ಸಂಶಯವಾಗಿ ಇದು ಕ್ಷುಲ್ಲಕ ಪಿಐಎಲ್‌ ಆಗಿದ್ದು ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥ ಮಾಡಿದೆ ಎಂದು ಅದು ಕಿಡಿಕಾರಿತು.

ಇದು ದಂಡ ವಿಧಿಸಲು ಯೋಗ್ಯವಾದ ಪ್ರಕರಣವಾದರೂ ಅರ್ಜಿ ಸಲ್ಲಿಸಿರುವುದು ಯುವ ವಕೀಲರು ಎಂಬುದನ್ನು ಗಮನಿಸಿದ ನ್ಯಾಯಾಲಯ ದಂಡ ವಿಧಿಸದೇ ಅರ್ಜಿಯನ್ನು ವಜಾ ಮಾಡಿತು. ಅಲ್ಲದೆ ಕ್ಷುಲ್ಲಕ ಪಿಐಎಲ್‌ಗಳನ್ನು ಸಲ್ಲಿಸುವ ಮೊದಲು ಅರ್ಜಿದಾರರು ಅಗತ್ಯ ಶ್ರದ್ಧೆ ಮತ್ತು ಸಂಯಮ ತೋರಬೇಕು ಎಂದು ಸಲಹೆ ನೀಡಿತು.