ಉತ್ತರ ಭಾರತದಲ್ಲಿ ವಾಯು ಮಾಲಿನ್ಯ: ಕೂಳೆ ದಹನ ನಿಷೇಧಿಸಲು ಕೋರಿದ್ದ ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರೆದುರು ಪ್ರಕರಣ ಪ್ರಸ್ತಾಪಿಸಲಾಯಿತಾದರೂ ಇದು ಖಚಿತವಾಗಿ ನ್ಯಾಯಂಗದ ವ್ಯಾಪ್ತಿ ಬರುವ ಪ್ರಕರಣವಲ್ಲ ಎಂದು ಅವರು ಹೇಳಿದರು.
Satellite Image of India and Pakistan (pollution) and Supreme Court
Satellite Image of India and Pakistan (pollution) and Supreme Court
Published on

ದೆಹಲಿ ಮತ್ತು ಉತ್ತರ ಭಾರತದ ವಿವಿಧೆಡೆ ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಕೂಳೆ ದಹನ ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆ  ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ.

ಪ್ರಕರಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರೆದುರು ಪ್ರಸ್ತಾಪಿಸಲಾಯಿತಾದರೂ ಇದು ಖಚಿತವಾಗಿ ನ್ಯಾಯಂಗದ ವ್ಯಾಪ್ತಿಗೆ ಬರುವ ವಿಷಯವಲ್ಲ ಎಂದು ಅವರು ಹೇಳಿದರು.

“ನಿಷೇಧದಿಂದಾಗಿ (ವಾಯುಮಾಲಿನ್ಯ ತಡೆಯಲು) ಅನುಕೂಲವಾಗಲಿದೆಯೇ? ಕೆಲವು ಪ್ರಕರಣಗಳನ್ನು ನ್ಯಾಯಾಯಗಳು ಪರಿಶೀಲಿಸಬಹುದು ಮತ್ತೆ ಕೆಲವು ನ್ಯಾಯಾಲಯದ ನಿರ್ವಹಣೆಯಿಂದ ಹೊರತಾಗಿದ್ದು ಪರಿಶೀಲಿಸಲಾಗದು” ಎಂದ ಅವರು “ನಾವೀಗಾಗಲೇ ನಿಮ್ಮ ಅಹವಾಲು ಕೇಳಿದ್ದೇವೆ. ಪ್ರಕರಣವನ್ನು ಈಗ ಕೈಗೆತ್ತಿಕೊಳ್ಳುವುದಿಲ್ಲ” ಎಂದರು.

Also Read
[ದೆಹಲಿ ವಾಯು ಮಾಲಿನ್ಯ] ಮಾಧ್ಯಮಗಳು ನಮ್ಮನ್ನು ಖಳನಾಯಕರ ರೀತಿ ಬಿಂಬಿಸುತ್ತಿವೆ: ಸುಪ್ರೀಂ ಕೋರ್ಟ್‌ ಅಸಮಾಧಾನ

ರಾಷ್ಟ್ರ ರಾಜಧಾನಿಯಲ್ಲಿ ಗಾಳಿಯ ಗುಣಮಟ್ಟ ಹಲವು ವರ್ಷಗಳಿಂದ ಕಳವಳಕಾರಿ ವಿಷಯವಾಗಿದೆ. ಗಾಳಿಯ ಗುಣಮಟ್ಟದ  ಮಾಹಿತಿ ನೀಡುವ ವಾಯು ಗುಣಮಟ್ಟ ಸೂಚ್ಯಂಕ ದೆಹಲಿ ಮತ್ತು ಸುತ್ತಮುತ್ತಲಿನ ರಾಜ್ಯಗಳಲ್ಲಿ ಅಕ್ಟೋಬರ್, ನವೆಂಬರ್ ತಿಂಗಳುಗಳಲ್ಲಿ ವಾಯುಮಾಲಿನ್ಯ ಅಪಾಯಕಾರಿ ಮಟ್ಟಕ್ಕೆ ಏರುತ್ತದೆ ಎನ್ನುತ್ತದೆ. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ರೈತರು ಬೆಳೆಗಳನ್ನು ಕೊಯ್ಲು ಮಾಡಿದ ನಂತರ ಉಳಿದಿರುವ ಕೃಷಿ ತ್ಯಾಜ್ಯಗಳಾದ, ಒಣಹುಲ್ಲು, ಕೂಳೆ ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ ಎಂಬ ಮಾತಿದೆ.

ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ  ತಡೆಯಲು ನ್ಯಾಯಾಲಯದ ತುರ್ತು ಮಧ್ಯಸ್ಥಿಕೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಕಳೆದ ವಾರ ಒಪ್ಪಿಕೊಂಡಿತ್ತು. ಆಗಿನ ಸಿಜೆಐ ಯು ಯು ಲಲಿತ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠದ ಮುಂದೆ ಅರ್ಜಿದಾರರು ಖುದ್ದು ಹಾಜರಾಗಿ “ದೆಹಲಿ ಉಸಿರುಗಟ್ಟಿಸುತ್ತಿದೆ” ಎಂದು ವಾದಿಸಿದ್ದರು.

ಆಗ ಪೀಠವು ಪ್ರಕರಣದ ವಿಚಾರಣೆಯ ಬಗ್ಗೆ ತನ್ನ ಆತಂಕ ವ್ಯಕ್ತಪಡಿಸಿದ್ದಲ್ಲದೆ ಸಂವಿಧಾನದ 32ನೇ ವಿಧಿಯ ಅಡಿಯಲ್ಲಿ ಅರ್ಜಿ ಸಲ್ಲಿಸುವುದು ಸರಿಯಾದ ಮಾರ್ಗವೇ ಎಂದು ಪ್ರಶ್ನಿಸಿತ್ತು. ಬಳಿಕ ನವೆಂಬರ್ 10, 2022 ರಂದು ಪ್ರಕರಣದ ವಿಚಾರಣೆಗೆ ಸಮ್ಮತಿಸಿತ್ತು.

Kannada Bar & Bench
kannada.barandbench.com