ಮನೆಕೆಲಸದಾಕೆಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಈ ಹಿಂದೆ ಹೈಕೋರ್ಟ್ ಜಾಮೀನು ಅರ್ಜಿ ವಜಾಗೊಳಿಸಿರುವುದರಿಂದ ಇಲ್ಲಿಯವರೆಗೆ ಪ್ರಕರಣದಲ್ಲಿ ಒಂದಿಂಚೂ ಬೆಳವಣಿಗೆಯಾಗದಿರುವುದರಿಂದ ಬದಲಾದ ಪರಿಸ್ಥಿತಿಯನ್ನು ಆಧರಿಸಿ ಜಾಮೀನು ಮಂಜೂರು ಮಾಡಬೇಕು ಎಂದು ಪ್ರಜ್ವಲ್ ರೇವಣ್ಣ ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ಮನವಿ ಮಾಡಿದರು.
ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಅತ್ಯಾಚಾರ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಪ್ರಜ್ವಲ್ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಕಳೆದ ವರ್ಷ ಹೈಕೋರ್ಟ್‌ನ ಇದೇ ಪೀಠವು ಪ್ರಜ್ವಲ್‌ಗೆ ಜಾಮೀನು ನಿರಾಕರಿಸಿತ್ತು. ಇದೇ ಆದೇಶವನ್ನು ಸುಪ್ರೀಂ ಕೋರ್ಟ್ ಸಹ ಎತ್ತಿ ಹಿಡಿದಿತ್ತು. ಆದರೆ, ಅಲ್ಲಿನಿಂದ ಇಲ್ಲಿಯವರೆಗೆ ಒಂದೇ ಒಂದು ಇಂಚೂ ಪ್ರಕರಣ ಮುಂದೆ ಹೋಗಿಲ್ಲ. 150ಕ್ಕೂ ಹೆಚ್ಚು ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಉಲ್ಲೇಖಿಸಿದ್ದು, ಅವು ಸದ್ಯ ಮುಗಿಯುವ ಲಕ್ಷಣವಿಲ್ಲ. ಅದಲ್ಲದೇ, ಅಪಾರ ಪ್ರಮಾಣದ ಡಿಜಿಟಲ್ ಸಾಕ್ಷಿಗಳನ್ನು ಪ್ರಾಸಿಕ್ಯೂಷನ್ ಸಲ್ಲಿಸಿದೆ ಎನ್ನಲಾಗಿದ್ದು, ಅವುಗಳ ಪರಿಶೀಲನೆ ಸುಲಭಕ್ಕೆ ಮುಗಿಯುವುದಿಲ್ಲ. ವಿಚಾರಣೆ ತಡವಾಗುವುದು ಜಾಮೀನಿಗೆ ಆಧಾರವಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಸ್ಪಷ್ಟಪಡಿಸಿರುವುದರಿಂದ ಜಾಮೀನು ಮಂಜೂರು ಮಾಡಬೇಕು” ಎಂದರು.
“ಇದೇ ಪ್ರಕರಣದಲ್ಲಿ ಪ್ರಜ್ವಲ್ ತಂದೆ ಎಚ್ ಡಿ ರೇವಣ್ಣ ವಿರುದ್ಧದ ವಿಚಾರಣೆಗೆ ತಡೆಯಾಜ್ಞೆಯಾಗಿದೆ. ಸಾಕ್ಷಿಗಳಿಗೆ ಪ್ರಭಾವ ಬೀರುವ ಆತಂಕ ಬಹುತೇಕ ಎಲ್ಲಾ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಇರುತ್ತದೆ. ಇದಕ್ಕೆ ನಿರ್ದಿಷ್ಟವಾದ ಯಾವುದೇ ಷರತ್ತನ್ನು ನ್ಯಾಯಾಲಯ ವಿಧಿಸಬಹುದಾಗಿದೆ. ಎಡಿಎಂ ಜಬಲ್‌ಪುರ್ ಪ್ರಕರಣದಲ್ಲಿ ನ್ಯಾ. ಎಚ್ ಆರ್ ಖನ್ನಾ ಅವರು ವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದಿದ್ದರು. ಇಲ್ಲಿಯೂ ಸಂವಿಧಾನದ 21ನೇ ವಿಧಿಯಡಿ ಪ್ರಜ್ವಲ್‌ಗೆ ಸಾಂವಿಧಾನಿಕವಾಗಿ ದೊರೆತಿರುವ ಬದುಕುವ ಹಕ್ಕನ್ನು ಕಲ್ಪಿಸಬೇಕು. ತನಿಖೆ ಮುಗಿದು, ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿಗಳನ್ನು ಸಲ್ಲಿಸಿರುವುದರಿಂದ ಪ್ರಜ್ವಲ್ ಅಗತ್ಯವಿಲ್ಲ. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು” ಎಂದರು.
ರಾಜ್ಯ ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್ ಅವರು “ವಿಚಾರಣಾಧೀನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ವಿನಾ ಕಾರಣ ಆರೋಪಗಳನ್ನು ಮಾಡಲಾಗಿದೆ. ಸಂತ್ರಸ್ತೆಯನ್ನು ಪ್ರಜ್ವಲ್ ಐದು ಬಾರಿ ನ್ಯಾಯಾಲಯಕ್ಕೆ ಕರೆಸಿದ್ದಾರೆ. ವಿಚಾರಣೆ ವಿಳಂಬಕ್ಕೆ ಯಾರು ಕಾರಣ ಎಂಬುದನ್ನು ದಾಖಲೆ ಸಹಿತ ಸಾಬೀತುಪಡಿಸಲಾಗುವುದು. ಪ್ರಕರಣದಲ್ಲಿ ಸಂತ್ರಸ್ತೆಯನ್ನು ಪ್ರಜ್ವಲ್ ಕುಟುಂಬದವರು ಸೇರಿ ಅಪಹರಿಸಿದ್ದರು. ಇಲ್ಲಿ ಪ್ರಜ್ವಲ್ ನಡತೆಯನ್ನು ನ್ಯಾಯಾಲಯ ಪರಿಗಣಿಸಬೇಕು. ಒಟ್ಟಾರೆಯಾಗಿ, ಪ್ರಜ್ವಲ್ ಜಾಮೀನು ಅರ್ಜಿಯು ಊರ್ಜಿತವಾಗುವುದಿಲ್ಲ” ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಜೂನ್ 26ಕ್ಕೆ ಮುಂದೂಡಿತು.