Somnath Bharti and Bansuri Swaraj  Facebook
ಸುದ್ದಿಗಳು

ಸಂಸದೆ ಭಾನ್ಸುರಿ ವಿರುದ್ಧದ ಅರ್ಜಿ: ತಾನು ಅಂಚೆ ಕಚೇರಿಯಲ್ಲ ಎಂದು ಆಪ್‌ ನಾಯಕ ಸೋಮನಾಥ್ ಕಿವಿ ಹಿಂಡಿದ ದೆಹಲಿ ಹೈಕೋರ್ಟ್

ಖುದ್ದು ಹಾಜರಾದ ಸೋಮನಾಥ್ ಅವರು, ಸ್ವರಾಜ್ ಅವರ ಲಿಖಿತ ಹೇಳಿಕೆಯ ಪ್ರತಿ ತನಗೆ ದೊರೆತಿಲ್ಲ ಎಂದರು.

Bar & Bench

ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ನಾಯಕಿ ದಿವಂಗತ ಸುಷ್ಮ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಆಯ್ಕೆ ಪ್ರಶ್ನಿಸಿ ತಾನು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ತಡವಾಗಿ ಪ್ರತಿಕ್ರಿಯೆ ಸಲ್ಲಿಸಲು ಎಎಪಿ ನಾಯಕ ಸೋಮನಾಥ್ ಭಾರತೀ ಅವರಿಗೆ ದೆಹಲಿ ಹೈಕೋರ್ಟ್‌ ಸೋಮವಾರ ಅವಕಾಶ ನಿರಾಕರಿಸಿದೆ [ಸೋಮನಾಥ್‌ ಭಾರತೀ ಮತ್ತು ಬಾನ್ಸುರಿ ಸ್ವರಾಜ್‌ ಇನ್ನಿತರರ ನಡುವಣ ಪ್ರಕರಣ].

ಖುದ್ದು ಹಾಜರಾದ ಸೋಮನಾಥ್ ಅವರು, ಸ್ವರಾಜ್ ಅವರ ಲಿಖಿತ ಹೇಳಿಕೆಯ ಪ್ರತಿ ತನಗೆ ದೊರೆತಿಲ್ಲ. ಅಲ್ಲದೆ ತಾವು ಈಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಗ್ನರಾಗಿದ್ದಾಗಿ ತಿಳಿಸಿದರು. ಜೊತೆಗೆ ಭಾನ್ಸುರಿ ಪರ ವಕೀಲರೊಂದಿಗೆ ಸೂಕ್ತ ಸಮಯಕ್ಕೆ ಸಂವಹನ ನಡೆಸಿಲ್ಲ ಎಂಬುದನ್ನೂ ಒಪ್ಪಿಕೊಂಡರು.

ಹೀಗಾಗಿ ಸೋಮನಾಥ್‌ ಅವರ ವಾದವನ್ನು ನ್ಯಾಯಮೂರ್ತಿ ಅನೀಶ್ ದಯಾಳ್ ಅವರು ಒಪ್ಪಲಿಲ್ಲ. "ಇದು ಅಂಚೆ ಕಚೇರಿ ಅಲ್ಲ, ನ್ಯಾಯಾಲಯ ಇರುವುದು ಇದಕ್ಕಾಗಿ ಅಲ್ಲ. ನ್ಯಾಯಾಂಗದ ಸಮಯ ವ್ಯರ್ಥವಾಗುತ್ತದೆ. ಈ ಪ್ರಕರಣದಲ್ಲಿ ಮಾತ್ರವಲ್ಲದೆ ಎಲ್ಲಾ ಪ್ರಕರಣಗಳಲ್ಲಿಯೂ ಈ ಬಗೆಯ ಸಂಸ್ಕೃತಿಯನ್ನು ನಾವು ಬದಲಾವಣೆ ಮಾಡ ಬಯಸುತ್ತೇವೆ" ಎಂದು ನ್ಯಾಯಾಲಯ ಹೇಳಿತು.

ಲಿಖಿತ ಹೇಳಿಕೆ ಸಿಗದಿದ್ದರೆ, ಭಾರತೀ ಅವರು ನ್ಯಾಯಾಲಯಕ್ಕೆ ಮೊದಲೇ ತಿಳಿಸಬೇಕಿತ್ತು ಎಂದ ಪೀಠ ಚುನಾವಣೆಯಲ್ಲಿ ಮಗ್ನನಾಗಿದ್ದೆ ಎಂಬ ಭಾರತೀ ಅವರ ಹೇಳಿಕೆಗೂ ಆಕ್ಷೇಪ ವ್ಯಕ್ತಪಡಿಸಿತು.

"ದಾವೆ ಸಲ್ಲಿಸುವವರು ಚುನಾವಣೆಯಲ್ಲಿ ನಿರತರಾಗಿರುವುದರಿಂದ ಮಿತಿ ಕಾನೂನು ಅನ್ವಯಿಸುವುದಿಲ್ಲ ಎಂದು ಹೇಳುವ ನಿಯಮವಿದ್ದರೆ ಅದನ್ನು ನಮಗೆ ತಿಳಿಸಿ" ಎಂದು ನ್ಯಾಯಮೂರ್ತಿ ದಯಾಳ್ ಅಸಮಾಧಾನ ವ್ಯಕ್ತಪಡಿಸಿದರು. ಅಂತೆಯೇ, ತಡವಾಗಿ ಪ್ರತಿಕ್ರಿಯೆ ಸಲ್ಲಿಸಲು ಅನುಮತಿ ಕೋರಿ ಭಾರತೀ ಅವರು ಸಲ್ಲಿಸಿದ್ದ ಮನವಿಯನ್ನು ಪೀಠ ತಿರಸ್ಕರಿಸಿತು.

ಭಾನ್ಸುರಿ ಅವರ ಅಣತಿಯಂತೆ ಬಿಜೆಪಿ ಕಾರ್ಯಕರ್ತರು ಕಳೆದ ಲೋಕಸಭಾ ಚುನಾವಣೆಗೆ ಮುನ್ನ ಮತದಾರರಿಗೆ ಹಣ, ಸೀರೆ ಸೂಟ್-ಸಲ್ವಾರ್‌ ರೀತಿಯ ವಸ್ತುಗಳನ್ನು ವಿತರಿಸಿದ್ದರು ಎಂದು ಸೋಮನಾಥ್‌ ದೂರಿದ್ದರು. ಭಾನ್ಸುರಿ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಮನಾಥ್‌ ಭಾರತೀ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದರು.