Gautam Navlakha and NIA
Gautam Navlakha and NIA 
ಸುದ್ದಿಗಳು

ಗೌತಮ್ ನವಲಖಾ ಭದ್ರತಾ ಪಡೆಗಳ ಮೇಲೆ ದಾಳಿಗೈದ ನಿಷೇಧಿತ ಉಗ್ರ ಸಂಘಟನೆಯ ಸಕ್ರಿಯ ಸದಸ್ಯ ಎಂದ ಮುಂಬೈ ನ್ಯಾಯಾಲಯ

Bar & Bench

ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿ ಗೌತಮ್‌ ನವಲಖಾ ಅವರು ಭದ್ರತಾ ಪಡೆಗಳ ಮೇಲೆ ಹಲವಾರು ದಾಳಿ ನಡೆಸಿ ಭದ್ರತಾ ಸಿಬ್ಬಂದಿಗಳನ್ನು ಹತ್ಯೆಗೈದಿರುವ ನಿಷೇಧಿತ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಮಾವೋವಾದಿ) ಭಯೋತ್ಪಾದನಾ ಸಂಘಟನೆಯ ಸಕ್ರಿಯ ಸದಸ್ಯರು ಎಂದು ಮುಂಬೈ ನ್ಯಾಯಾಲಯ ಹೇಳಿದ್ದು, ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.

ನವಲಾಖ ವಿರುದ್ಧದ ಆರೋಪಗಳು ಮೇಲ್ನೋಟಕ್ಕೆ ಸತ್ಯವಾಗಿವೆ ಎಂದು ನಂಬಲು ಸಕಾರಣ ಆಧಾರಗಳಿವೆ ಎಂದು ವಿಶೇಷ ನ್ಯಾಯಮೂರ್ತಿ ರಾಜೇಶ್‌ ಕಟಾರಿಯಾ ಹೇಳಿದ್ದಾರೆ.

“ಮೇಲ್ನೋಟಕ್ಕೆ ಪ್ರಾಸಿಕ್ಯೂಷನ್‌ ಆಧರಿಸಿರುವ ಪೂರಕ ಆರೋಪ ಪಟ್ಟಿ ಮತ್ತು ದಾಖಲೆಗಳಲ್ಲಿ ನವಲಖಾ ಅವರು ನಿಷೇಧಿತ ಉಗ್ರ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು, ಆ ಸಂಘಟನೆಯ ಉದ್ದೇಶಕ್ಕೆ ಅನುಗುಣವಾಗಿ ಅವರು ಚಟುವಟಿಕೆ ನಡೆಸುತ್ತಿದ್ದರು. ಅವರ ಮನೆಯಲ್ಲಿ ಶೋಧ ಮಾಡಿದಾಗ ದೊರೆತಿರುವ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಂದ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪ ಪಟ್ಟಿಯ ಜೊತೆ ಸಲ್ಲಿಸಲಾಗಿರುವ ದಾಖಲೆಗಳು ಅರ್ಜಿದಾರರು ಅಪರಾಧ ಮತ್ತು ಪಿತೂರಿಯಲ್ಲಿ ಸಕ್ರಿಯವಾಗಿರುವುದನ್ನು ಸಾಬೀತುಪಡಿಸುತ್ತದೆ… ಇತರೆ ಆರೋಪಿಗಳ ಜೊತೆಗೂಡಿ ಅವರು ಶಸ್ತ್ರಾಸ್ತ್ರ ತರಬೇತಿಯಲ್ಲೂ ಭಾಗಿಯಾಗಿದ್ದಾರೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ನವಲಖಾ ಅವರು ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಸಯದ್‌ ಗುಲಾಮ್‌ ನಬಿ ಫೈ ಹಾಗೂ ಪಾಕಿಸ್ತಾನದ ಗುಪ್ತಚರ ಸೇವೆ (ಐಎಸ್‌ಐ) ಮುಖ್ಯಸ್ಥರ ಜೊತೆ ಸಂಪರ್ಕ ಹೊಂದಿದ್ದರು ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವುದನ್ನು ಸತ್ರ ನ್ಯಾಯಾಲಯವು ಪರಿಗಣಿಸಿದೆ.

“ಒಟ್ಟಾರೆಯಾಗಿ ಲಭ್ಯವಿರುವ ದಾಖಲೆಗಳನ್ನು ಪರಿಗಣಿಸಿದಾಗ ಸಹ ಆರೋಪಿಗಳಿಂದ ನವಲಖಾ ಅವರ ಪಾತ್ರವನ್ನು ಪ್ರತ್ಯೇಕಿಸಿ ನೋಡಲಾಗದು. ಮೇಲ್ನೋಟಕ್ಕೆ ನವಲಖಾ ಅವರ ವಿರುದ್ಧದ ಆರೋಪಗಳು ಸತ್ಯ ಎಂದು ಹೇಳಲು ಸಕಾರಣಗಳಿವೆ” ಎಂದಿರುವ ನ್ಯಾಯಾಧೀಶರು, ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪ್ರಜಾಸತ್ತೀಯ ಹಕ್ಕುಗಳಿಗಾಗಿ ಜನರ ಒಕ್ಕೂಟದ (ಪಿಯುಡಿಆರ್‌) ಮಾಜಿ ಕಾರ್ಯದರ್ಶಿಯಾದ ನವಲಖಾ ಅವರನ್ನು 2018ರ ಆಗಸ್ಟ್‌ನಲ್ಲಿ ಬಂಧಿಸಲಾಗಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಒಂದು ತಿಂಗಳ ಅವಧಿಗೆ ಗೃಹ ಬಂಧನ ವಿಸ್ತರಿಸುವಂತೆ ಕೋರಿದ್ದ ನವಲಖಾ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಮಾನ್ಯ ಮಾಡಿತ್ತು. ಇದನ್ನು ಡಿಸೆಂಬರ್‌ನಲ್ಲಿ ಮತ್ತೆ ವಿಸ್ತರಿಸಲಾಗಿದ್ದು, ಸದ್ಯ ಅವರು ನವಿ ಮುಂಬೈನ ಥಾಣೆ ಜಿಲ್ಲೆಯಲ್ಲಿ ನೆಲೆಸಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಎನ್‌ಐಎ ನ್ಯಾಯಾಲಯವು ಜಾಮೀನು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೊಸದಾಗಿ ಜಾಮೀನು ಅರ್ಜಿ ಪರಿಗಣಿಸುವಂತೆ ವಿಶೇಷ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್‌ ಪ್ರಕರಣವನ್ನು ಮರಳಿಸಿತ್ತು.