Surendra Gadling  
ಸುದ್ದಿಗಳು

ಸಾಮಾನ್ಯ ಪ್ರಕರಣವಲ್ಲ ಎಂದ ಸುಪ್ರೀಂ: ಗಾಡ್ಲಿಂಗ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಬೇಕೆಂಬ ವಿನಂತಿಗೆ ಅತೃಪ್ತಿ

ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಡ್ಲಿಂಗ್ ಅವರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ನಾಗಪುರ ಪೀಠ 2023ರ ಜನವರಿಯಲ್ಲಿ ತಿರಸ್ಕರಿಸಿತ್ತು.

Bar & Bench

ಸೂರಜ್‌ಗಢದಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ವಾಹನಗಳಿಗೆ 2016ರಲ್ಲಿ ನಕ್ಸಲರು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿರುವ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಸುರೇಂದ್ರ ಗಾಡ್ಲಿಂಗ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂದೂಡುವಂತೆ ಕೋರಿದ ಮಹಾರಾಷ್ಟ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ತರಾಟೆಗೆ ತೆಗೆದುಕೊಂಡಿದೆ [ಸುರೇಂದ್ರ ಪುಂಡಲೀಕ ಗಾಡ್ಲಿಂಗ್‌ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಇನ್ನೂ ಕೆಲವು ದಾಖಲೆಗಳನ್ನು ಸಲ್ಲಿಸಲು ಬಾಕಿ ಇರುವ ಹಿನ್ನೆಲೆಯಲ್ಲಿ ಪ್ರಕರಣ ಮುಂದೂಡುವಂತೆ ರಾಜ್ಯ ಸರ್ಕಾರ ಕೋರಿತು. ಆಗ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠವು, ಈ ರೀತಿಯ ಪ್ರಕರಣಗಳನ್ನು ನಾವು ಆಲಿಸಬೇಕಿದೆ, ಇದು ಸಾಮಾನ್ಯ ಪ್ರಕರಣವಲ್ಲ, ವಿಳಂಬ ಮಾಡದೆ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಕಿವಿ ಹಿಂಡಿತು. ಕಡೆಗೆ ಉಳಿದ ದಾಖಲೆಗಳನ್ನು ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಅದು ಎರಡು ವಾರಗಳ ಕಾಲಾವಕಾಶ ನೀಡಿತು.

ಗಾಡ್ಲಿಂಗ್‌ ಅವರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್‌ ನಾಗಪುರ ಪೀಠ 2023ರ ಜನವರಿಯಲ್ಲಿ ತಿರಸ್ಕರಿಸಿತ್ತು. ಹೀಗಾಗಿ ವಕೀಲ ನೂಪುರ್ ಕುಮಾರ್ ಮೂಲಕ ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಮೇಲ್ಮನವಿ ಸಲ್ಲಿಸಲಾಗಿತ್ತು.

ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿರುವ ಸೂರಜ್‌ಗಢ ಗಣಿಗಳಿಂದ ಕಬ್ಬಿಣದ ಅದಿರು ಸಾಗಿಸುತ್ತಿದ್ದ ಸುಮಾರು 39 ವಾಹನಗಳಿಗೆ ಮಾವೋವಾದಿಗಳು 2016ರ ಡಿಸೆಂಬರ್‌ನಲ್ಲಿ ಬೆಂಕಿ ಹಚ್ಚಿದ್ದರು.

ಗಡ್‌ಚಿರೋಲಿ ಪೊಲೀಸರು ಐಪಿಸಿ ಸೆಕ್ಷನ್‌ 307 (ಕೊಲೆಗೆ ಯತ್ನ), 341, 342 (ಅಕ್ರಮವಾಗಿ ತಡೆಯುವುದು, ಪ್ರತಿಬಂಧಿಸುವುದು), 435 (ಸ್ಫೋಟಕ ಬಳಸಿ ಕೇಡು ಬಗೆಯುವುದು), 323 (ಸ್ವಇಚ್ಛೆಯಿಂದ ಮಾಡುವ ಗಾಯ), 504 (ಉದ್ದೇಶಪೂರ್ವಕ ಅವಮಾನ), 506 (ಕ್ರಿಮಿನಲ್ ಬೆದರಿಕೆ), 143, 147 (ಗಲಭೆ), 148, 149 (ಕಾನೂನುಬಾಹಿರ ಸಭೆಗಳಲ್ಲಿ ಗಲಭೆ) ಹಾಗೂ 120-ಬಿ (ಕ್ರಿಮಿನಲ್‌ ಸಂಚು) ಅಡಿ ಪ್ರಕರಣ ದಾಖಲಿಸಿದ್ದರು. ಅಲ್ಲದೆ ಯುಎಪಿಎ ಕಾಯಿದೆಯ ಸೆಕ್ಷನ್ 16, 18, 20 ಮತ್ತು 23 (ಭಯೋತ್ಪಾದಕ ಚಟುವಟಿಕೆಗಳಿಗೆ ಶಿಕ್ಷೆ) ಹಾಗೂ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ಗಳಡಿಯೂ ಪ್ರಕರಣ ದಾಖಲಿಸಲಾಗಿತ್ತು.

ಘಟನೆಯಲ್ಲಿ ಗಾಡ್ಲಿಂಗ್‌ ಭಾಗಿಯಾಗಿದ್ದರು ಎಂದಿದ್ದ ಪೊಲೀಸರು ಅವರ ವಿರುದ್ಧ ಯುಎಪಿಎ ಕಾಯಿದೆಯಡಿ ಆರೋಪ ಮಾಡಿದ್ದರು. 2018ರ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕೂಡ ಗಾಡ್ಲಿಂಗ್‌ ಅವರು ಆರೋಪಿಯಾಗಿದ್ದು , ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕರಣದ ತನಿಖೆ ನಡೆಸುತ್ತಿದೆ. ಗಾಡ್ಲಿಂಗ್ ಸದ್ಯ ತಲೋಜಾ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಗಾಡ್ಲಿಂಗ್ ಅವರು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಸಂಘಟನೆಯ  ನೇರ ಸದಸ್ಯತ್ವ ಹೊಂದಿದ್ದಾರೆ ಎಂಬ ಆರೋಪಗಳು ಮೇಲ್ನೋಟಕ್ಕೆ ನಿಜವೆಂದು ತೋರುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿತ್ತು. ಜಾಮೀನು ಕೋರಿ ಮಾಡಲಾಗಿರುವ ವಾದಕ್ಕಿಂತಲೂ ಆರೋಪಗಳು ಹೆಚ್ಚು ಗಂಭಿರವಾಗಿವೆ ಎಂದು ಅದು ತಿಳಿಸಿತ್ತು. ಗಾಡ್ಲಿಂಗ್‌ ಪರವಾಗಿ  ಹಿರಿಯ ವಕೀಲ ಆನಂದ್ ಗ್ರೋವರ್ , ವಕೀಲರಾದ ಪರಸ್ ನಾಥ್ ಸಿಂಗ್  ಹಾಗೂ ರೋಹಿನ್ ಭಟ್ ವಾದ ಮಂಡಿಸಿದ್ದರು.