Justice Jasti Chelameswar 
ಸುದ್ದಿಗಳು

ಅವರ ಬಗ್ಗೆ ಹೆಚ್ಚು ಸಮಯ ವ್ಯಯಿಸುವುದು ಸರಿಯಲ್ಲ: ನಿವೃತ್ತ ಸಿಜೆಐ ಕುರಿತು ನ್ಯಾ. ಚಲಮೇಶ್ವರ್ ಪ್ರತಿಕ್ರಿಯೆ

ವಯನಾಡ್ ಸಾಹಿತ್ಯ ಉತ್ಸವದಲ್ಲಿ ನ್ಯಾಯಾಲಯ ಮತ್ತು ರಾಜಕೀಯ ಎಂಬ ವಿಷಯದ ಕುರಿತು ಸಂಸತ್ ಸದಸ್ಯ ಜಾನ್ ಬ್ರಿಟ್ಟಾಸ್ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ವೇಳೆ ನ್ಯಾ. ಚಲಮೇಶ್ವರ್ ಈ ಮಾತುಗಳನ್ನಾಡಿದರು.

Bar & Bench

ಪೂಜಾ ಸ್ಥಳಗಳ ಕಾಯಿದೆ ಕುರಿತಂತೆ ಸುಪ್ರೀಂ ಕೋರ್ಟ್‌ನ ನಿಕಟಪೂರ್ವ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರ ನಿಲುವಿನ ಬಗ್ಗೆ  ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಜಸ್ತಿ ಚೆಲಮೇಶ್ವರ್ ವ್ಯಂಗ್ಯಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ಡಿಸೆಂಬರ್‌ನಲ್ಲಿ ನಡೆದ ವಯನಾಡ್ ಸಾಹಿತ್ಯ ಉತ್ಸವದಲ್ಲಿ ʼನ್ಯಾಯಾಲಯ ಮತ್ತು ರಾಜಕೀಯʼ ಎಂಬ ವಿಷಯದ ಕುರಿತು ಸಂಸದ ಜಾನ್ ಬ್ರಿಟ್ಟಾಸ್ ಅವರೊಂದಿಗೆ ನಡೆದ ಸಂವಾದ ಕಾರ್ಯಕ್ರಮದ ವೇಳೆ ನ್ಯಾ. ಚಲಮೇಶ್ವರ್ ಈ ಮಾತುಗಳನ್ನಾಡಿದರು.

ಬ್ರಿಟ್ಟಾಸ್ ಅವರು ನ್ಯಾಯಮೂರ್ತಿ ಚೆಲಮೇಶ್ವರ್ ಅವರನ್ನು ಉದ್ದೇಶಿಸಿ "2019ರಲ್ಲಿ ಸಂವಿಧಾನ ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಚಂದ್ರಚೂಡ್ ಮತ್ತು ಅವರ ಸಹೋದ್ಯೋಗಿಗಳು ಪೂಜಾ ಸ್ಥಳಗಳ ಕಾಯಿದೆ ಪವಿತ್ರವಾದುದು ಎಂದು ಹೇಳಿದ್ದರು. 2022 ರಲ್ಲಿ ಅದೇ ನ್ಯಾಯಮೂರ್ತಿಗಳು ಈ ತೀರ್ಪು ಪೂಜಾ ಸ್ಥಳಗಳನ್ನು ಉತ್ಖನನ ಇಲವೇ ಸಮೀಕ್ಷೆ ಮಾಡದಂತೆ ಯಾರನ್ನೂ ತಡೆಯುವುದಿಲ್ಲ ಎಂದು ಹೇಳಿದರು. ಈಗ ಕನಿಷ್ಠ 11ಪೂಜಾ ಸ್ಥಳಗಳಿಗೆ ಸಂಬಂಧಿಸಿದಂತೆ ಮೊಕದ್ದಮೆ ಹೂಡಲಾಗಿದೆ. ಅಲ್ಲದೆ ಅದು ಅನೇಕ ಸ್ಥಳಗಳಲ್ಲಿ ಗಲಭೆಗಳನ್ನು ಸೃಷ್ಟಿಸಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು?" ಎಂದು ಕೇಳಿದರು.

ಆಗ ಚಲಮೇಶ್ವರ್‌ ಅವರು"ನೀವು ಒಬ್ಬ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಉಲ್ಲೇಖಿಸುತ್ತಿದ್ದೀರಿ. ಅವರ ಕುರಿತಾಗಿ ಹೆಚ್ಚು ಸಮಯ ವ್ಯರ್ಥ ಮಾಡುವುದು ಸೂಕ್ತವಲ್ಲ ಎಂದು ಭಾವಿಸುತ್ತೇನೆ" ಎಂದು ಉತ್ತರಿಸಿದರು.

ನ್ಯಾಯಾಧೀಶರು ನಿರ್ವಹಿಸುವ ಕರ್ತವ್ಯಗಳಲ್ಲಿ ಸೈದ್ಧಾಂತಿಕ ಮತ್ತು ರಾಜಕೀಯ ಒಲವು ನಿಲುವು ನುಸುಳುತ್ತಿರುವ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು ನಮಗೆ ನಮ್ಮದೇ ಆದ ರಾಜಕೀಯ ಆದ್ಯತೆಗಳು ಇರಬಹುದಾದರೂ ಒಮ್ಮೆ ನ್ಯಾಯಾಧೀಶರ ಕುರ್ಚಿಯಲ್ಲಿ ಕುಳಿತಾಗ ಸಾರ್ವಜನಿಕರ ವ್ಯತಿರಿಕ್ತ ಅಭಿಪ್ರಾಯಕ್ಕೆ ತುತ್ತಾಗಿ ರಾಜಕೀಯ ಸಂಬಂಧ ಅಥವಾ ಹಿಂದಿನ ಸಂಬಂಧಗಳು ನಾನು ನೀಡುವ ತೀರ್ಪಿಗೆ ಅಡ್ಡಿಯಾಗಬಾರದು ಎಂದು ನಂಬುತ್ತೇನೆ. ಯಾರಾದರೂ ಅದನ್ನು ಪಾಲಿಸದೆ ಇದ್ದರೆ ಅದು ಸರಿ ಎಂದು ನನಗೆ ಅನ್ನಿಸುವುದಿಲ್ಲ. ಸರಿಯಾದದ್ದು ಏನೆಂದರೆ ರಾಜಕೀಯ ಒಲವು ನಿಲುವುಗಳನ್ನು ಹೊರಗಿಡುವುದೇ ಆಗಿದೆ ಎಂದು ಅವರು ಹೇಳಿದರು.

[ವೀಡಿಯೊಗಾಗಿ ಇಲ್ಲಿ ಕ್ಲಿಕ್ಕಿಸಿ]