ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲದ ಸಂದರ್ಭದಲ್ಲಿ ವಿಶೇಷ ವಿವಾಹ ಕಾಯಿದೆ ಅಸ್ತಿತ್ವಕ್ಕೆ ಬಂದಿದ್ದು ಮದುವೆಗೆ ಆಕ್ಷೇಪಣೆ ಸಲ್ಲಿಸುವಂತೆ ನೋಟಿಸ್ ಪ್ರಕಟಿಸುವುದು ಪುರುಷ ಪ್ರಧಾನ ವ್ಯವಸ್ಥೆಯಾಗುತ್ತದೆ ಹಾಗೂ ಅದರಿಂದ ಖಾಸಗಿತನಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯ ಮೂರನೇ ದಿನವಾದ ಗುರುವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಪಿಎಸ್ ನರಸಿಂಹ ಹಾಗೂ ಹಿಮಾ ಕೊಹ್ಲಿ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಈ ಅಭಿಪ್ರಾಯ ನೀಡಿತು.
ವಿವಾಹ ಅಧಿಕಾರಿಗಳು ಮದುವೆಗೆ 30 ದಿನಗಳಿರುವಂತೆ ವಧು-ವರರ ವಿವರ ಕುರಿತು ಸಾರ್ವಜನಿಕ ನೋಟಿಸ್ ಅನ್ನು ಎದ್ದುಕಾಣುವ ಸ್ಥಳದಲ್ಲಿ ಅಥವಾ ತಮ್ಮ ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸಬೇಕು ಎಂಬ ವಿಶೇಷ ವಿವಾಹ ಕಾಯಿದೆಯ ಸೆಕ್ಷನ್ 5, 6 ಮತ್ತು 7ನ್ನು ಪೀಠ ನಿರ್ದಿಷ್ಟವಾಗಿ ಚರ್ಚಿಸಿತು ವಧು-ವರರ ಹೆಸರು, ಫೋನ್ ಸಂಖ್ಯೆ, ಜನ್ಮ ದಿನಾಂಕ, ವಯಸ್ಸು, ಉದ್ಯೋಗ, ವಿಳಾಸ ಅವರ ಗುರುತಿಗೆ ಪೂರಕವಾದ ಇತರ ಮಾಹಿತಿಯನ್ನು ನೋಟಿಸ್ ಒಳಗೊಂಡಿರುತ್ತದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಿವಿಧ ಧರ್ಮಗಳ ವೈಯಕ್ತಿಕ ಕಾನೂನುಗಳಲ್ಲಿ ಅಂತಹ ಯಾವುದೇ ನಿಬಂಧನೆಗಳಿಲ್ಲ. ಮದುವೆಗೆ ಆಕ್ಷೇಪಣೆಗಳನ್ನು ಆಹ್ವಾನಿಸುವ 30 ದಿನಗಳ ನೋಟಿಸ್ ಅವಧಿಯು ಅರ್ಜಿದಾರರ ಮೂಲಭೂತ ಹಕ್ಕುಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ವಾದಿಸಿದರು.
ಆಗ ನ್ಯಾ. ಭಟ್ “ಇದು ಕೇವಲ ಪುರುಷಪ್ರಧಾನ ವ್ಯವಸ್ಥೆಯನ್ನು ಆಧರಿಸಿದ್ದು ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲದಿದ್ದಾಗ ಈ ಕಾನೂನು ರೂಪುಗೊಂಡಿದೆ” ಎಂದರು. ಈ ಮಾತಿಗೆ ಸಮ್ಮತಿ ಸೂಚಿಸಿದ ಸಿಜೆಐ “ಇದು ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಸೇರಿದಂತೆ ಸಮಾಜದ ಆಕ್ರಮಣಕ್ಕೆ ಆಹ್ವಾನ ನೀಡಿದಂತೆ” ಎಂದು ಹೇಳಿದರು. ಇದಕ್ಕೆ ತಲೆದೂಗಿದ ಸಿಂಘ್ವಿ ಸಂಪೂರ್ಣ ಅಸಮಾನತೆ, ತಾರತಮ್ಯದಿಂದ ಕೂಡಿದ ಹಾಗೂ ಗೋಪ್ಯತೆಗೆ ಧಕ್ಕೆ ತರುವ ಈ ನಿಯಮವನ್ನು ರದ್ದುಪಡಿಸಬೇಕು ಎಂದರು.
ಅರ್ಜಿದಾರರ ಪರ ವಾದಮಂಡಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ರಾಜು ರಾಮಚಂದ್ರನ್ ʼವಿವಾಹದ ಹಕ್ಕನ್ನು ಜೀವಿಸುವ ಮತ್ತು ವೈಕ್ತಿಕ ಸ್ವಾತಂತ್ರ್ದಯ ರಕ್ಷಣೆ ಒದಗಿಸುವ ಸಂವಿಧಾನದ 21 ನೇ ವಿಧಿಯೊಡನೆ ಓದಿದಾಗ ಈ ನಿಯಮ ನಿಲ್ಲುವುದಿಲ್ಲ. ಇಂತಹ ಹೇಸಿಗೆ ಹುಟ್ಟಿಸುವ, ಪ್ರತಿಗಾಮಿ ನೋಟಿಸ್‌ಗಳನ್ನು ರದ್ದುಪಡಿಸಬೇಕು ಎಂದರು.
ಅನೂರ್ಜಿತ ವಿವಾಹಗಳನ್ನು ತಡೆಯುವುದೇ ಅಂತಹ ನೋಟಿಸ್‌ನ ಉದ್ದೇಶವಾಗಿದ್ದರೆ, ಅದು ಕನಿಷ್ಠ ನಿರ್ಬಂಧಿತ ವಿಧಾನವಾಗಿರಬಹುದಾಗಿತ್ತು ಎಂದು ಸಿಜೆಐ ಅಭಿಪ್ರಾಯಪಟ್ಟರು.
“ಒಬ್ಬ ವ್ಯಕ್ತಿ ಸಮಾಜದಂಚಿನ ಸಮುದಾಯಕ್ಕೆ ಅಥವಾ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವನಾಗಿದ್ದರೆ, ಈ ಸೆಕ್ಷನ್ ತರತಮ ಉಂಟುಮಾಡುವಂತಹ ಪರಿಣಾಮ ಬೀರುವ ಸಾಧ್ಯತೆ ಇದೆ. ಇದು ನಮ್ಮ ಸಮಾಜದ ಅತ್ಯಂತ ದುರ್ಬಲ ವರ್ಗಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರೋಟೊಕಾಲ್‌ಗೆ ಸಂಬಂಧಿಸಿದಂತೆ ನಾವು ಇವುಗಳಿಗೆ ಶಕ್ತಿ ತುಂಬದಂತೆ ಜಾಗರೂಕರಾಗಿರಬೇಕು. ಅಧಿಕಾರಿಗಳು ಈ ವ್ಯಕ್ತಿಗಳ ವೈಯಕ್ತಿಕ ಮತ್ತು ಖಾಸಗಿ ಮಾಹಿತಿಯನ್ನು ಹೊಂದಿದ್ದು ಅವರಿಗೆ ರಕ್ಷಣೆ ದೊರೆತಿದೆಯೇ ಎಂಬುದನ್ನು ನೋಡಬೇಕಾಗುತ್ತದೆ” ಎಂದರು.
ಪ್ರಕರಣದ ವಿಚಾರಣೆ ಮುಂದುವರೆದಿದೆ.
ಕುತೂಹಲದ ಸಂಗತಿ ಎಂದರೆ ಮದುವೆಗೆ 30 ದಿನಗಳ ಮೊದಲು ದಂಪತಿಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ವಿಶೇಷ ವಿವಾಹ ಕಾಯಿದೆಯ ನಿಬಂಧನೆಗಳನ್ನು ಪ್ರಶ್ನಿಸುವ ಪಿಐಎಲ್ ಅನ್ನು ವಿಚಾರಣೆಗೆ ಪರಿಗಣಿಸಲು ಸರ್ವೋಚ್ಚ ನ್ಯಾಯಾಲಯ ಕಳೆದ ವರ್ಷ ನಿರಾಕರಿಸಿತ್ತು.
ಪ್ರಸ್ತುತ ದಿನಮಾನದಲ್ಲಿ ಇಂತಹ ಸೆಕ್ಷನ್‌ಗಳು ಅತ್ಯಗತ್ಯವೇ ಎಂಬುದನ್ನು ಶಾಸಕಾಂಗ ಮರುಪರಿಶೀಲಿಸಬೇಕು ಎಂದು ಕೇರಳ ಹೈಕೋರ್ಟ್ ಈ ವರ್ಷದ ಫೆಬ್ರವರಿಯಲ್ಲಿ ಅಭಿಪ್ರಾಯಪಟ್ಟಿದೆ.
ಒಪ್ಪಿಗೆ ಇರುವ ಇಬ್ಬರು ವಯಸ್ಕರು ಪತಿ-ಪತ್ನಿಯಾಗಿ ಒಟ್ಟಿಗೆ ಇರಲು ನಿರ್ಧರಿಸಿದರೆ, ಅವರ ಕುಟುಂಬದ ಸದಸ್ಯರು ಸೇರಿದಂತೆ ಯಾರಿಗೂ ಹಸ್ತಕ್ಷೇಪ ಮಾಡಲು ಅರ್ಹತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಕಳೆದ ವರ್ಷ ಹೇಳಿತ್ತು.