ಸಲಿಂಗ ಸಂಬಂಧ ಮತ್ತು ಭಿನ್ನ ಲೈಂಗಿಕತೆಯ ಹಕ್ಕುಗಳು ಕೇಂದ್ರ ಸರ್ಕಾರ ಪ್ರತಿಪಾದಿಸಿದಂತೆ ನಗರ- ಗಣ್ಯರ ಪರಿಕಲ್ಪನೆಗಳಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೇಶದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿರುವ ಅರ್ಜಿಗಳ ವಿಚಾರಣೆಯ ಎರಡನೇ ದಿನವಾದ ಬುಧವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು “ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಹುತೇಕ ಮಂದಿ ತಮ್ಮ ಲೈಂಗಿಕ ಅಸ್ಮಿತೆಯ ಕುರಿತು ಗೋಪ್ಯತೆಯಿಂದ ಹೊರಬರುತ್ತಿದ್ದಾರೆ. ಆದರೆ ಇದರರ್ಥ ಸಲಿಂಗ ವಿವಾಹ ಬೇಡಿಕೆಗಳು ನಗರ ಗಣ್ಯರಿಗೆ ಸೀಮಿತ ಎನ್ನಲು ಸರ್ಕಾರ ಯಾವುದೇ ಮಾಹಿತಿ ಹೊಂದಿದೆ ಎಂದಲ್ಲ.
"ವ್ಯಕ್ತಿಯು ನಿಯಂತ್ರಿಸಲಾಗದ ಆತನ ಗುಣವಿಶೇಷತೆಯನ್ನು ಆಧರಿಸಿ ಆತನ ಮೇಲೆ ತಾರತಮ್ಯವನ್ನು ಪ್ರಭುತ್ವವು ಮಾಡುವಂತಿಲ್ಲ. ನೀವು ಅದನ್ನು ಸಹಜ ಗುಣಲಕ್ಷಣಗಳೆಂದು ನೋಡಿದಾಗ, ಆಗ ಅದು 'ನಗರ ಗಣ್ಯರ' ಪರಿಕಲ್ಪನೆಗೆ ವಿರುದ್ಧವಾಗುತ್ತದೆ. ಸಲಿಂಗ ವಿವಾಹ ನಗರ ಗಣ್ಯರ ಪರಿಕಲ್ಪನೆ ಎಂದು ತೋರಿಸುವಂತಹ ಯಾವುದೇ ಮಾಹಿತಿ ಸರ್ಕಾರದ ಬಳಿ ಇಲ್ಲ” ಎಂದು ಅವರು ಹೇಳಿದರು.
ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿರುವ ಅರ್ಜಿದಾರರು ಕೇವಲ ನಗರ ಗಣ್ಯರ ಅಭಿಪ್ರಾಯಗಳನ್ನು ಪ್ರತಿನಿಧಿಸುತ್ತಾರೆ ಎಂದು ಸರ್ಕಾರ ಕೆಲದಿನಗಳ ಹಿಂದೆ ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು.
ಸಲಿಂಗ ವಿವಾಹಕ್ಕೆ ಮಾನ್ಯತೆ ಕೋರಿ ಸುಮಾರು 20 ಅರ್ಜಿಗಳು ನ್ಯಾಯಾಲಯಕ್ಕೆ ಸಲ್ಲಿಕೆಯಾಗಿವೆ. ಕೇಂದ್ರ ಸರ್ಕಾರದ ಜೊತೆಗೆ ಮುಸ್ಲಿಂ ಧಾರ್ಮಿಕ ಸಂಘಟನೆ ಜಾಮಿಯತ್ ಉಲಾಮಾ- ಇ- ಹಿಂದ್ ವಿರೋಧ ವ್ಯಕ್ತಪಡಿಸಿದೆ.
ಕುತೂಹಲದ ಸಂಗತಿ ಎಂದರೆ ಸಲಿಂಗ ವಿವಾಹ, ಸಲಿಂಗ ದಂಪತಿಯ ದತ್ತು ಮತ್ತು ಉತ್ತರಾಧಿಕಾರ ಹಕ್ಕುಗಳನ್ನು ಕಾನೂನುಬದ್ಧಗೊಳಿಸುವುದನ್ನು ಬೆಂಬಲಿಸಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ದೆಹಲಿ ಆಯೋಗ (ಡಿಸಿಪಿಸಿಆರ್) ಅರ್ಜಿಯನ್ನು ಬೆಂಬಲಸಿದ್ದರೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿನ ರಾಷ್ಟ್ರೀಯ ಆಯೋಗ ಸಲಿಂಗ ದಂಪತಿಗೆ ದತ್ತು ಹಕ್ಕು ನೀಡಿದರೆ ಅದು ಅಂತಹ ಮಗುವಿಗೆ ವಿನಾಶಕಾರಿಯಾಗುತ್ತದೆ ಎಂದಿದೆ.