Sexual Assault Complaint Form 
ಸುದ್ದಿಗಳು

ಭಾರತೀಯ ಮಹಿಳೆಯರು ಸುಳ್ಳು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸುವುದಿಲ್ಲ ಎಂಬುದು ತಪ್ಪು ಕಲ್ಪನೆ: ಕೇರಳ ಹೈಕೋರ್ಟ್

ದ್ವೇಷ ಸಾಧಿಸಲು ಪುರುಷರ ವಿರುದ್ಧ ಮಹಿಳೆಯರು ಸುಳ್ಳು ದೂರು ದಾಖಲಿಸುವ ಪ್ರಕರಣಗಳು ಕಳೆದ ಕೆಲವು ವರ್ಷಗಳಿಂದ ಹೆಚ್ಚುತ್ತಿವೆ ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ಹೇಳಿದರು.

Bar & Bench

ಸಮಾಜದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಧಕ್ಕೆ ಒದಗಬಹುದು ಎಂಬ ಕಾರಣಕ್ಕೆ ಭಾರತೀಯ ಮಹಿಳೆಯರು ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸುವುದಿಲ್ಲ ಎಂಬ ಊಹೆ ತಪ್ಪು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ ಅಜಿತ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕಳೆದ ಕೆಲವು ವರ್ಷಗಳಿಂದ ದ್ವೇಷ ಸಾಧಿಸಲು ಪುರುಷರ ವಿರುದ್ಧ ಮಹಿಳೆಯರು ಸುಳ್ಳು ದೂರು ದಾಖಲಿಸುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ನ್ಯಾಯಮೂರ್ತಿ ಎ ಬದರುದ್ದೀನ್ ಅಭಿಪ್ರಾಯಪಟ್ಟರು.

ಆರೋಪಗಳನ್ನು ವಿಶ್ಲೇಷಿಸದೆಯೇ ಎಲ್ಲಾ ಪ್ರಕರಣಗಳಲ್ಲೂ ಮಹಿಳೆಯರು ಸುಳ್ಳು ದಾವೆ ಹೂಡುವ ಸಾಧ್ಯತೆಯಿಲ್ಲ ಎಂದು ಊಹಿಸಿಕೊಳ್ಳಲಾಗದು ಎಂದು ನ್ಯಾಯಾಲಯ ಹೇಳಿತು.

“ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಭಾರತೀಯ ಸಮಾಜದ ಹುಡುಗಿಯೊಬ್ಬಳು ಯಾವುದೇ ವ್ಯಕ್ತಿಯ ವಿರುದ್ಧ ಸುಳ್ಳು ಲೈಂಗಿಕ ದೌರ್ಜನ್ಯ ಮತ್ತಿತರ ಆರೋಪ ಮಾಡುವುದಿಲ್ಲ ಎಂಬ ಪರಿಕಲ್ಪನೆ ಹಲವು ವರ್ಷಗಳಿಂದ ಚಾಲ್ತಿಯಲ್ಲಿತ್ತು. ಆದರೆ ಈಚಿನ ವರ್ಷಗಲ್ಲಿ ಈ ಪರಿಕಲ್ಪನೆ ದುರ್ಬಲಗೊಂಡಂತೆ ತೋರುತ್ತಿದ್ದು ಪುರುಷರ ವಿರುದ್ಧ ಸೇಡ ತೀರಿಸಿಕೊಳ್ಳಲು ತನ್ನ ಅಕ್ರಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲು ಅತ್ಯಾಚಾರ, ಲೈಂಗಿಕ ಕಿರುಕುಳ ಮತ್ತಿತರ ಆರೋಪಗಳನ್ನು ಸತ್ಯಾಂಶವಿಲ್ಲದೆ ಮಾಡಲಾಗುತ್ತಿದೆ. ಆದ್ದರಿಂದ ಪ್ರಕರಣದಿಂದ ಪ್ರಕರಣಕ್ಕೆ ವಾಸ್ತವಾಂಶವನ್ನು ವಿಶ್ಲೇಷಿಸದೆಯೇ ಆ ಪರಿಕಲ್ಪನೆಯನ್ನು ಕುರುಡಾಗಿ ಅನುಸರಿಸಬಾರದು” ಎಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.

ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣದ ವಿಚಾರಣೆ  ರದ್ದುಗೊಳಿಸುವಂತೆ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಮದುವೆಯಾಗುವುದಾಗಿ ಸುಳ್ಳು ಭವರಸೆ ನೀಡಿ ವ್ಯಕ್ತಿ ಅತ್ಯಾಚಾರ ಮಾಡಿರುವುದಾಗಿ ಮಹಿಳೆ ಆರೋಪಿಸಿದ್ದರು. ವಿಚಾರಣೆ ವೇಳೆ ಮಹಿಳೆ ತನಿಖೆ ರದ್ದುಗೊಳಿಸಲು ತನ್ನ ಅಭ್ಯಂತರ ಇಲ್ಲ ಎಂದು ತಿಳಿಸಿದ್ದರು.

ಆದರೆ ಪ್ರಕರಣ ರದ್ದುಗೊಳಿಸುವ ಮನವಿಗೆ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಮಹಿಳೆಯ ಹೇಳಿಕೆ ಆಧರಿಸಿರುವ ಎಫ್‌ಐಆರ್‌ ಅತ್ಯಾಚಾರ ನಡೆದಿರುವುದನ್ನು ಸೂಚಿಸುತ್ತದೆ ಎಂದು ವಾದಿಸಿದರು.

ಆರೋಪಿತ ಘಟನೆ 2014ರಲ್ಲಿ ನಡೆದಿದ್ದರೂ 2019ರಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬುದನ್ನು ನ್ಯಾಯಾಲಯ ಗಮನಿಸಿತು. 2016 ರಲ್ಲಿ, ಮಹಿಳೆ ಪೊಲೀಸರ ಮಹಿಳಾ ಕೋಶದಲ್ಲಿ ದೂರು ದಾಖಲಿಸಿದರೂ ಅರ್ಜಿದಾರರು ಆಕೆಯನ್ನು ಮದುವೆಯಾಗುವುದಾಗಿ ಭರವಸ ನೀಡಿದ್ದರಿಂದ ಅವರು ಆತನನ್ನು ತನಿಖೆಗೆ ಒಳಪಡಿಸಲಿಲ್ಲ ಎಂದರು. ಇದು ಮಹಿಳೆಯ ದೂರು ನಿಜವೇ ಎಂಬ ಬಗ್ಗೆ ನ್ಯಾಯಾಲಯ ಅನುಮಾನ ವ್ಯಕ್ತಪಡಿಸಲು ಕಾರಣವಾಯಿತು. ಅರ್ಜಿದಾರರು ಮತ್ತು ದೂರುದಾರೆಯ ನಡುವಿನ ಸಂಬಂಧ ಸಹಮತದ ಸ್ವರೂಪದ್ದಾಗಿತ್ತು ಎಂದು ನ್ಯಾಯಾಲಯ ತೀರ್ಪು ನೀಡಿತು.

ಈ ಹಿನ್ನೆಲೆಯಲ್ಲಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಅರ್ಜಿದಾರರ ವಿರುದ್ಧದ ಎಲ್ಲಾ ತನಿಖೆಗಳನ್ನು ರದ್ದುಗೊಳಿಸಿತು.