
ವಿವಾಹಿತ ಮಹಿಳೆಯರ ವಿರುದ್ಧ ಪತಿ ಮತ್ತವರ ಸಂಬಂಧಿಕರು ಎಸಗುವ ಕ್ರೌರ್ಯವನ್ನು ತಡೆಯಲು ಇರುವ ಐಪಿಸಿ ಸೆಕ್ಷನ್ 498 ಎಯನ್ನು ಎಗ್ಗಿಲ್ಲದೆ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ [ದಾರ ಲಕ್ಷ್ಮಿ ನಾರಾಯಣ ಮತ್ತಿತರರು ಹಾಗು ತೆಲಂಗಾಣ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಕೆಲವೊಮ್ಮೆ ಕೌಟುಂಬಿಕ ದೌರ್ಜನ್ಯ ಮತ್ತು ಕಿರುಕುಳದಿಂದ ಮಹಿಳೆಯರನ್ನು ರಕ್ಷಿಸುವ ಗುರಿ ಹೊಂದಿದ್ದ ಈ ಸೆಕ್ಷನ್ ಅನ್ನು ತಮ್ಮ ವಿವೇಚನಾರಹಿತ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ಪತಿ ಹಾಗೂ ಆತನ ಕುಟುಂಬದ ವಿರುದ್ಧ ಹೆಚ್ಚು ದುರ್ಬಳಕೆ ಮಾಡಿಕೊಳ್ಳುಲಾಗುತ್ತಿದೆ ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟೇಶ್ವರ ಸಿಂಗ್ ಅವರಿದ್ದ ಪೀಠ ತಿಳಿಸಿದೆ.
“ಕೆಲ ಬಾರಿ ಹೆಂಡತಿ ತನ್ನ ಅಸಮಂಜಸ ಬೇಡಿಕೆ ಈಡೇರಿಸಿಕೊಳ್ಳುವುದಕ್ಕಾಗಿ ಪತಿ ಮತ್ತು ಆತನ ಕುಟುಂಬದ ವಿರುದ್ಧ ಐಪಿಸಿ ಸೆಕ್ಷನ್ 498 ಎ ಬಳಕೆಯ ಮೊರೆ ಹೋಗುತ್ತಿದ್ದಾಳೆ” ಎಂದು ಅದು ಹೇಳಿದೆ.
"ವಿವಾಹ ಎಂಬ ಸಂಸ್ಥೆಯೊಳಗೆ ಬೆಳೆಯುತ್ತಿರುವ ಅಪಶ್ರುತಿ ಹಾಗೂ ಉದ್ವಿಗ್ನತೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ, ದೇಶಾದ್ಯಂತ ವೈವಾಹಿಕ ವ್ಯಾಜ್ಯಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು ಪರಿಣಾಮ ಐಪಿಸಿ ಸೆಕ್ಷನ್ 498 ಎ ರೀತಿಯ ಸೆಕ್ಷನ್‌ಗಳನ್ನು ಪತಿ ಮತ್ತವರ ಕುಟುಂಬದ ವಿರುದ್ಧದ ವೈಯಕ್ತಿಕ ದ್ವೇಷಕ್ಕಾಗಿ ಮಹಿಳೆಯರು ಅಸ್ತ್ರವಾಗಿ ದುರುಪಯೋಗಪಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ವೈವಾಹಿಕ ಸಂಘರ್ಷದ ವೇಳೆ ಮಾಡಲಾಗುವ ಅಸ್ಪಷ್ಟ ಮತ್ತು ಸಾಮಾನ್ಯೀಕರಿಸಿದ ಆರೋಪಗಳು ಪರಿಶೀಲನೆಗೆ ಒಳಪಡದಿದ್ದಲ್ಲಿ ಅದು ಕಾನೂನು ಪ್ರಕ್ರಿಯೆಗಳ ದುರುಪಯೋಗಕ್ಕೆ ಕಾರಣವಾಗಲಿದ್ದು ಹೆಂಡತಿ ಇಲ್ಲವೇ ಆಕೆಯ ಕುಟುಂಬದವರು ಗಂಡನನ್ನು ಮಣಿಸುವ ತಂತ್ರವಾಗಿ ಬಳಸಲು ಕುಮ್ಮಕ್ಕು ನೀಡುತ್ತದೆ" ಎಂದು ಅದು ಆತಂಕ ವ್ಯಕ್ತಪಡಿಸಿದೆ.
ಪತಿ ಮತ್ತು ಆತನ ಮನೆಯವರ ವಿರುದ್ಧ ಪತ್ನಿ ದಾಖಲಿಸಿದ್ದ ಕ್ರೌರ್ಯ ಮತ್ತು ವರದಕ್ಷಿಣೆ ಪ್ರಕರಣಗಳನ್ನು ರದ್ದುಗೊಳಿಸುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ. ಪತಿ ಮತ್ತವರ ಕುಟುಂಬದ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ತೆಲಂಗಾಣ ಹೈಕೋರ್ಟ್ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು.
ತಮ್ಮ ವಿವಾಹ ವಿಸರ್ಜಿಸುವಂತೆ ಕೋರಿ ಪತಿ ಮೇಲ್ಮನವಿ ಸಲ್ಲಿಸಿದ್ದರು. ಆ ಬಳಿಕ ಪತ್ನಿ ತನ್ನ ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ವಾದ ಆಲಿಸಿದ ಸುಪ್ರೀಂ ಕೋರ್ಟ್ ವೈಯಕ್ತಿಕ ದ್ವೇಷದಿಂದ ಪತ್ನಿ ಪ್ರಕರಣ ಹೂಡಿದ್ದು ಆಕೆಯನ್ನು ರಕ್ಷಿಸಲೆಂದು ರೂಪಿಸಲಾದ ಸೆಕ್ಷನ್ ಅನ್ನು ಆಕೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾಳೆ ಎಂದಿತು.
"ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ಕ್ರೌರ್ಯವನ್ನು ಅನುಭವಿಸಿದ ಯಾವುದೇ ಮಹಿಳೆ ಮೌನವಾಗಿರಬೇಕು ಮತ್ತು ದೂರು ನೀಡುವ ಅಥವಾ ಯಾವುದೇ ಕ್ರಿಮಿನಲ್ ಮೊಕದ್ದಮೆ ಹೂಡುವುದನ್ನು ತಡೆಯಬೇಕು ಎಂದು ನಾವು ಎಂದಿಗೂ ಹೇಳುತ್ತಿಲ್ಲ. ಆದರೆ ನಾವು ಪ್ರಸ್ತುತ ಪ್ರಕರಣದಂತಹ ಕೇಸ್‌ಗಳನ್ನು ಪ್ರೋತ್ಸಾಹಿಸಬಾರದು. ಇಲ್ಲಿ ವಿವಾಹ ವಿಸರ್ಜಿಸುವಂತೆ ಪತಿ ಕೋರಿದ ಬಳಿಕ ಪತ್ನಿ ಐಪಿಸಿ ಸೆಕ್ಷನ್ 498 ಎ ಅಡಿಯಲ್ಲಿ ದೂರು ದಾಖಲಿಸಿದ್ದಾರೆ” ಎಂದು ತಿಳಿಸಿದ ನ್ಯಾಯಾಲಯ ಪ್ರಕರಣ ರದ್ದುಗೊಳಿಸಿತು.
ಸೆಕ್ಷನ್ 498ಎ ದುರುಪಯೋಗದ ಬಗ್ಗೆ ನ್ಯಾಯಾಲಯ ಕಳವಳ ಬೇಸರ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಈ ಕಾನೂನು ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದಿವೆ.