Punjab and Haryana High Court with Nuh violence 
ಸುದ್ದಿಗಳು

ನೂಹ್‌ ಹಿಂಸಾಚಾರ: ಎಸ್‌ಐಟಿ ತನಿಖೆ ಕೋರಿದ್ದ ಶಾಸಕನ ವಿರುದ್ಧವೇ ಎಫ್‌ಐಆರ್‌; ಅರ್ಜಿ ವಿಚಾರಣೆ ವೇಳೆ ತಬ್ಬಿಬ್ಬಾದ ಶಾಸಕ

Bar & Bench

ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ಈಚೆಗೆ ನಡೆದ ಗಲಭೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳದಿಂದ (ಎಸ್‌ಐಟಿ) ತನಿಖೆ ನಡೆಸುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಗುರುವಾರ ರಾಜ್ಯ ಸರ್ಕಾರಕ್ಕೆ ಪಂಜಾಬ್‌ ಮತ್ತು ಹರಿಯಾಣ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ [ಮಮ್ಮನ್‌ ಖಾನ್‌ ವರ್ಸಸ್‌ ಹರಿಯಾಣ ಸರ್ಕಾರ ಮತ್ತು ಇತರರು].

ಕಾಂಗ್ರೆಸ್‌ ಶಾಸಕ ಮಮ್ಮನ್‌ ಖಾನ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿಕಾಸ್‌ ಬಹ್ಲ್‌ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ವಿಶೇವೆಂದರೆ, ಗಲಭೆ ಸಂಬಂಧಿ ಪ್ರಕರಣದಲ್ಲಿ ಅರ್ಜಿದಾರರಾದ ಶಾಸಕರಿಗೆ ತಾವು ಸಹ ಆರೋಪಿ ಎನ್ನುವ ಅಂಶ ವಿಚಾರಣೆ ವೇಳೆ ತಿಳಿದುಬಂದಿತು!

ಎಸ್‌ಐಟಿ ತನಿಖೆ ಕೋರಿರುವ ಶಾಸಕರ ಹೆಸರೂ ಸಹ ಹಿಂಸಾಚಾರದ ಕುರಿತಾದ ಎಫ್‌ಐಆರ್‌ನಲ್ಲಿ ದಾಖಲಾಗಿರುವುದನ್ನು ತಿಳಿದ ಖಾನ್‌ ಪರ ವಕೀಲರು ಶಾಸಕರ ವಿರುದ್ದ ಯಾವುದೇ ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಕೋರಿದರು. ಖಾನ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಆರ್‌ ಎಸ್‌ ಛೀಮಾ ಅವರು ಖಾನ್ ಅವರ ಸ್ವಾತಂತ್ರ್ಯ ರಕ್ಷಿಸುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ಪಡೆಯಲು ಅನುಮತಿ ನೀಡಬೇಕು ಎಂದು ಕೋರಿದರು. ಇದಕ್ಕೆ ಪೀಠವು ಅನುಮತಿಸಿತು.

ಪೊಲೀಸ್‌ ಮಹಾನಿರ್ದೇಶಕರ ಶ್ರೇಣಿಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿ, ತನಿಖೆ ನಡೆಸುವಂತೆ ಖಾನ್‌ ನ್ಯಾಯಾಲಯವನ್ನು ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಪೀಠವು ವಿಚಾರಣೆಯನ್ನು ಅಕ್ಟೋಬರ್‌ 19ಕ್ಕೆ ಮುಂದೂಡಿದೆ.