ನೂಹ್ ಹಿಂಸಾಚಾರ: ಆರೋಪಿಗಳ ಕಟ್ಟಡ ತೆರವು ಕಾರ್ಯಾಚರಣೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತಡೆ

ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ನೇತೃತ್ವದ ಪೀಠ, ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಕೈಗೆತ್ತಿಕೊಂಡಿದೆ.
Punjab and Haryana High Court with Nuh violence
Punjab and Haryana High Court with Nuh violence
Published on

ಈಚೆಗೆ ನಡೆದಿದ್ದ ಹರಿಯಾಣದ ನೂಹ್‌ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ವಿಚಾರಣೆಗೆ ಮುಂದಾಗಿರುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆರೋಪಿಗಳ ಕಟ್ಟಡ ನೆಲಸಮ ಕಾರ್ಯಾಚರಣೆಗೆ ತಡೆ ನೀಡಿದೆ [ಸ್ವಯಂಪ್ರೇರಿತ ಅರ್ಜಿಯ ವಿಚಾರಣೆ ಮೂಲಕ ನ್ಯಾಯಾಲಯ ಮತ್ತು ಹರ್ಯಾಣ ಸರ್ಕಾರ ನಡುವಣ ಪ್ರಕರಣ].

ನ್ಯಾಯಮೂರ್ತಿ ಜಿ ಎಸ್ ಸಂಧವಾಲಿಯಾ ನೇತೃತ್ವದ ಪೀಠ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ಪರಿಗಣಿಸಿದೆ.

ಮಾಧ್ಯಮ ವರದಿಗಳ ಪ್ರಕಾರ ಜುಲೈ 31ರ ಸಂಜೆ ನೂಹ್ ಜಿಲ್ಲೆಯಲ್ಲಿ ಗೋರಕ್ಷಕ ಮೋನು ಮಾನೇಸರ್ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ವಿಎಚ್‌ಪಿ ಹಮ್ಮಿಕೊಂಡಿದ್ದ ಮೆರವಣಿಗೆ ಮೇಲೆ ದಾಳಿ ನಡೆದು ಹಿಂಸಾಚಾರ ಭುಗಿಲೆದ್ದಿತ್ತು.

Also Read
ಜಹಾಂಗೀರ್‌ಪುರಿ ತೆರವು ಕಾರ್ಯಾಚರಣೆ ಪ್ರಶ್ನಿಸಿ ಸುಪ್ರೀಂ ಮೊರೆ ಹೋದ ಸಿಪಿಎಂ ನಾಯಕಿ ಬೃಂದಾ ಕಾರಟ್

ಘರ್ಷಣೆಯಲ್ಲಿ ಐದು ಮಂದಿ ಸಾವನ್ನಪ್ಪಿ ಪೊಲೀಸರು ಸೇರಿದಂತೆ ಕನಿಷ್ಠ 70 ಮಂದಿ ಗಾಯಗೊಂಡಿದ್ದರು. ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಸುಮಾರು 40 ಪ್ರಕರಣಗಳನ್ನು ದಾಖಲಿಸಲಾಗಿದ್ದು 80ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿತ್ತು.

ತರುವಾಯ ಜಿಲ್ಲೆಯಲ್ಲಿ 700 ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯನ್ನು ಸರ್ಕಾರ ಕೈಗೊಂಡಿತ್ತು. ಕೆಡವಲಾದ ಕಟ್ಟಡಗಳು ನೂಹ್‌ ನಗರದ ಮನೆ, ಅಂಗಡಿ ಹಾಗೂ ಅನಧಿಕೃತ ನಿರ್ಮಾಣಗಳಾಗಿದ್ದು ಇವೆಲ್ಲವನ್ನೂ ಸರ್ಕಾರಿ ಆಸ್ತಿಯಲ್ಲಿ ನಿರ್ಮಿಸಲಾಗಿದೆ.  ಕೋಮು ಘರ್ಷಣೆಯಲ್ಲಿ ತೊಡಗಿರುವ ಶಂಕಿತ ವ್ಯಕ್ತಿಗಳು ಇವುಗಳನ್ನು ಬಳಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದರು.

ಕೋಮು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಒಟ್ಟು 56 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, ಇದುವರೆಗೆ 147 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

Kannada Bar & Bench
kannada.barandbench.com