ಹರಿಯಾಣ ಜಿಲ್ಲೆಯ ನೂಹ್‌ನಲ್ಲಿ ಈಚೆಗೆ ಸಂಭವಿಸಿದ ಕೋಮುಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಮಮ್ಮನ್ ಖಾನ್ ಅವರಿಗೆ ಸಂಬಂಧಿಸಿದ ಪ್ರಕರಣಗಳನ್ನು ಅವರ ಕೇತ್ರದಿಂದ ಬೇರೆಡೆಗೆ ವರ್ಗಾಯಿಸಿ ನೂಹ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಪೊಲೀಸರು ಈಚೆಗೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಖಾನ್ ಅವರು ಫಿರೋಜ್‌ಪುರ ಜಿರ್ಕಾ ಕ್ಷೇತ್ರದ ವಿಧಾನಸಭಾ ಸದಸ್ಯರಾಗಿರುವುದರಿಂದ ಪ್ರಕರಣದ ವಿಚಾರಣೆಯನ್ನು ನೂಹ್ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂದು ಅವರು ಕೋರಿದ್ದರು.
ಪೊಲೀಸರ ಪರವಾಗಿ ಪ್ರಾಸಿಕ್ಯೂಷನ್ ಮಾಡಿದ ಮನವಿಗೆ ಸಮ್ಮತಿ ಸೂಚಿಸಿದ ನೂಹ್ ಸೆಷನ್ಸ್ ನ್ಯಾಯಾಧೀಶ ಸುಶೀಲ್ ಕುಮಾರ್ ಅವರು ನೂಹ್‌ನ ಡ್ಯೂಟಿ ಮ್ಯಾಜಿಸ್ಟ್ರೇಟ್ ಅವರ ಅನುಪಸ್ಥಿತಿಯಲ್ಲಿ ನೂಹ್ ಸಿಜೆಎಂ ನ್ಯಾಯಾಲಯ ನಾಲ್ಕು ಎಫ್‌ಐಆರ್‌ಗಳ ವಿಚಾರಣೆ ನಡೆಸಬೇಕು ಎಂದು ಸೂಚಿಸಿದರು.
ಗಲಭೆ ಪ್ರಕರಣಗಳ ತನಿಖೆಗಾಗಿ ಉನ್ನತ ಮಟ್ಟದ ವಿಶೇಷ ತನಿಖಾ (ಎಸ್‌ಐಟಿ) ರಚನೆಗೆ ಕೋರಿ ಖಾನ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೆಪ್ಟೆಂಬರ್ 14ರಂದು ಹರಿಯಾಣ ಸರ್ಕಾರಕ್ಕೆ ನೋಟಿಸ್ ನೀಡಿತ್ತು.
ಕುತೂಹಲಕಾರಿ ಸಂಗತಿ ಎಂದರೆ ನ್ಯಾಯಾಲಯದ ವಿಚಾರಣೆ ವೇಳೆಯಷ್ಟೇ ಖಾನ್ ಅವರೂ ಪ್ರಕರಣವೊಂದರಲ್ಲಿ ಆರೋಪಿಯಾಗಿರುವುದು ತಿಳಿದು ಬಂದಿತ್ತು. ಅದೇ ದಿನ ಅವರನ್ನು ಬಂಧಿಸಲಾಗಿದ್ದು ಪ್ರಸ್ತುತ ಅವರು ಪೊಲೀಸ್ ವಶದಲ್ಲಿದ್ದಾರೆ.
ನಂತರ ಖಾನ್ ಅವರನ್ನು ಗಲಭೆಯ ʼಮುಖ್ಯ ಸಂಚುಕೋರʼ ಎಂದು ಬಣ್ಣಿಸಿದ್ದ ಪೊಲೀಸರು ಫೋನ್ ಮತ್ತು ಸಾಮಾಜಿಕ ಮಾಧ್ಯಮಗಳ ಪರಿಶೀಲನೆಗಾಗಿ ಅವರನ್ನು ವಶಕ್ಕೆ ಪಡೆಯುವ ಅಗತ್ಯವಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆದರೆ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದು ಗಲಭೆಯಲ್ಲಿ ಪಾಲ್ಗೊಂಡಿಲ್ಲ. ಅಲ್ಲದೆ ಈಗಾಗಲೇ ತನ್ನ ಮೊಬೈಲ್ ದೂರವಾಣಿಯನ್ನು ಪೊಲೀಸರಿಗೆ ಹಸ್ತಾಂತರಿಸಿರುವುದಾಗಿ ಅವರು ನೂಹ್‌ನ ಸಿಜೆಎಂ ನ್ಯಾಯಾಲಯಕ್ಕೆ ತಿಳಿಸಿದ್ದರು. ಖಾನ್ ಅವರ ಎರಡು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ನಂತರ ಸೆಪ್ಟೆಂಬರ್ 17 ರಂದು (ಇಂದು) ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.