Karnataka High Court 
ಸುದ್ದಿಗಳು

ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯ ನಾಡಗೀತೆಗೆ ಆಕ್ಷೇಪ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ರಾಜ್ಯ ಸರ್ಕಾರ 2023ರ ಸೆಪ್ಟೆಂಬರ್‌ 25ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಪೂರ್ಣಗೊಳಿಸಿದೆ.

Bar & Bench

ವಿಧಾನಸಭೆಯಲ್ಲಿ ವಿಸ್ತೃತ ಚರ್ಚೆಯ ಬಳಿಕ ಶಿಕ್ಷಣ ಕಾಯಿದೆ ಅಡಿ ನೋಂದಾಯಿತ ಶಾಲೆಗಳೆಲ್ಲವೂ ಖ್ಯಾತ ಗಾಯಕ, ಸಂಗೀತ ಸಂಯೋಜಕ ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಆದೇಶಿಸಲಾಗಿದೆ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಇದನ್ನು ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿದೆ.

ರಾಜ್ಯ ಸರ್ಕಾರ 2023ರ ಸೆಪ್ಟೆಂಬರ್‌ 25ರಂದು ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿ ಸಂಬಂಧ ಅರ್ಜಿದಾರರ ಮತ್ತು ಸರ್ಕಾರದ ಪರ ವಕೀಲರ ವಾದ -ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕಸದಸ್ಯ ಪೀಠ ತೀರ್ಪು ಕಾಯ್ದಿರಿಸಿತು.

ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಎಸ್‌.ಎ. ಅಹ್ಮದ್ ಅವರು ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಿರ್ದಿಷ್ಟ ಧಾಟಿಯಲ್ಲಿ ನಾಡಗೀತೆ ಹಾಡುವುದನ್ನು ನಿಗದಿಪಡಿಸಲು ಸಂವಿಧಾನದ ಪರಿಚ್ಛೇದ 162 ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಅಧಿಕಾರ ಹಾಗೂ ಹಕ್ಕು ಇದೆ. ಅದೇ ರೀತಿ ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್‌ 133ರ ಅಡಿಯಲ್ಲಿ ಇಂತಹದೊಂದು ಆದೇಶ ಮಾಡಲು ಸರ್ಕಾರ ಅಧಿಕಾರ ಹೊಂದಿದೆ. ಅದರಂತೆ ನಾಡಗೀತೆ ವಿಚಾರದಲ್ಲಿ ಸರ್ಕಾರ ಹೊರಡಿಸಿರುವ ಆದೇಶ ಕಾನೂನುಬದ್ಧವಾಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು.

ಅರ್ಜಿದಾರರ ಪರ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಅವರು, ನಾಡಗೀತೆ ವಿಚಾರದಲ್ಲಿ ಸರ್ಕಾರ ಕಾರ್ಯಕಾರಿ ಆದೇಶ ಹೊರಡಿಸಿದೆ. ಇದು ಸಂವಿಧಾನದ 19ನೇ ವಿಧಿ ಅಡಿಯಲ್ಲಿ ಜನರಿಗೆ ದೊರೆತಿರುವ ಮೂಲಭೂತ ಹಕ್ಕುಗಳಾದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ. ವಾಕ್‌ ಮತ್ತು ಅಭಿವ್ಯಕ್ತಿ ರಾಜ್ಯ ಅಥವಾ ರಾಷ್ಟ್ರಗೀತೆಯನ್ನು ತನ್ನ ಇಚ್ಛೆಯ ರಾಗ/ಧಾಟಿಯಲ್ಲಿ ಹಾಡುವ ಹಕ್ಕು ಸೇರಿದೆ. ಅದನ್ನು ಸರ್ಕಾರ ಮೊಟಕುಗೊಳಿಸಿದ್ದು, ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಅಗತ್ಯವಿದ್ದರೆ ಪ್ರತ್ಯೇಕ ಶಾಸನವ ರೂಪಿಸಿ, ಅದರಡಿ ಇಂತಹ ಆದೇಶ ಮಾಡಬಹುದು. ಶಾಸನದ ಬೆಂಬಲವಿಲ್ಲದೇ ಮೂಲಭೂತ ಹಕ್ಕು ಮೊಟಕುಗೊಳಿಸಲು ಅಥವಾ ನಿರ್ಬಂಧಿಸಲು ಕಾರ್ಯಕಾರಿ ಅಧಿಕಾರವನ್ನು ಬಳಕೆ ಮಾಡಲಾಗದು ಎಂದರು.

ವಾದ ಮಂಡನೆಯ ಒಂದು ಹಂತದಲ್ಲಿ ಪೀಠವು ಇದೇ ಧಾಟಿಯಲ್ಲಿ ಹಾಡಬೇಕು ಎಂಬುದಕ್ಕೆ ಸರ್ಕಾರಕ್ಕೆ ಅಧಿಕಾರ ಎಲ್ಲಿದೆ? ಸರ್ಕಾರ ಕಾನೂನಿನ ಪ್ರಕಾರ ನಡೆಯಬೇಕು. ನಿಮಗೆ ಅಧಿಕಾರ ಎಲ್ಲಿದೆ? ಎಂದು ಕೇಳಿತ್ತು.

ಆಗ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌ ಎ ಅಹ್ಮದ್‌ ಅವರು “ಸದನದಲ್ಲಿ ಚರ್ಚೆಯಾಗಿ ವಿರೋಧ ಪಕ್ಷವೂ ಸೇರಿದಂತೆ ಕನ್ನಡದ ಸಂಸ್ಕೃತಿ ವಿಚಾರವನ್ನು ಪ್ರಮುಖವಾಗಿ ಇಟ್ಟುಕೊಂಡು, ಖಾಸಗಿ ಶಿಕ್ಷಣ ಸಂಸ್ಥೆಗಳೂ ಶಿಕ್ಷಣ ಕಾಯಿದೆ ಅಡಿ ಬರುವುದರಿಂದ ಅವರೂ ನಾಡಗೀತೆ ಹಾಡಬೇಕು ಎಂದು ಆದೇಶಿಸಲಾಗಿತ್ತು. ಈ ಸಂಬಂಧ ಮೆಮೊ ಹಾಕಲಾಗಿತ್ತು. ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್‌ 133 ಅಡಿಯಲ್ಲಿ ಸರ್ಕಾರಕ್ಕೆ ಹಕ್ಕಿದೆ” ಎಂದು ವಿವರಿಸಿದರು.