ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯ ನಾಡಗೀತೆಗೆ ಆಕ್ಷೇಪ: ರಾಗಕ್ಕೆ ಕಾಲ ಸಾಪೇಕ್ಷತೆ ಇದೆ ಎಂದ ಹೈಕೋರ್ಟ್‌

“ಬೇರೆ ರಾಜ್ಯಗಳಲ್ಲಿ ಈ ರೀತಿಯ ನಾಡಗೀತೆಗಳು ಇವೆಯೇ? ಯಾವೆಲ್ಲಾ ರಾಜ್ಯಗಳಲ್ಲಿ ಇವೆ. ಅಲ್ಲಿನ ಸರ್ಕಾರ ಏನು ಮಾಡಿವೆ” ಎಂದು ಪರಿಶೀಲಿಸಿ ಎಂದು ನ್ಯಾಯಾಲಯ ಹೇಳಿತು.
High Court of Karnataka
High Court of Karnataka
Published on

“ರಾಗಕ್ಕೆ ಕಾಲ ಸಾಪೇಕ್ಷತೆ ಇದೆ. ಕೆಲವು ರಾಗಗಳನ್ನು ಮುಂಜಾನೆ ಹೇಳಲಾಗದು. ಮತ್ತೆ ಕೆಲವು ರಾಗಗಳನ್ನು ಮಧ್ಯಾಹ್ನ ಹೇಳಲಾಗದು. ಅದೊಂದು ವಿಜ್ಞಾನ. ಸಂಗೀತ ಶಾಸ್ತ್ರ ಆ ರೀತಿಯಲ್ಲಿ ಬೆಳವಣಿಗೆ ಕಂಡಿದೆ” ಎಂದು ಕರ್ನಾಟಕ ಹೈಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿತು.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ಸರ್ಕಾರವು 2022ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಉದ್ದೇಶಿಸಿ ನ್ಯಾಯಾಲಯವು “ಸಂಗೀತ ಶಾಸ್ತ್ರದ ಹಿನ್ನೆಲೆಯಲ್ಲಿ ಆ ಪದ್ಯವನ್ನು ನೋಡಿದ್ದೇನೆ. ಕೆಲವು ಚರಣಗಳು ರಾತ್ರಿ ರಾಗದಲ್ಲಿ, ಮತ್ತೆ ಕೆಲವು ಚರಣಗಳನ್ನು ಮಧ್ಯಾಹ್ನಿಕ ರಾಗದಲ್ಲಿ ಹೇಳಬೇಕಿದೆ. ಒಂದು ಚರಣ ಪ್ರಾರ್ಥನ ರಾಗದಲ್ಲಿದೆ. ಅದನ್ನು ಏಕೆ ಹಾಗೆ ಮಾಡಿದ್ದಾರೆ ಗೊತ್ತಿಲ್ಲ. ಯಾವುದೇ ಒಂದು ರಾಗದಲ್ಲಿ ಆ ಹಾಡವನ್ನು ಹಾಡಬಹುದೇ ಎಂಬ ಪ್ರಶ್ನೆ ಏಳುತ್ತದೆ. ಇದು ಸಂಗೀತ ಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರ. ಒಳ್ಳೆಯ ಸಂಗೀತ ಗ್ರಂಥಗಳನ್ನು ತಂದು ತಿಳಿಸಬೇಕು” ಎಂದು ಪೀಠವು ಹೇಳಿತು.

“ಬೇರೆ ರಾಜ್ಯಗಳಲ್ಲಿ ಈ ರೀತಿಯ ನಾಡಗೀತೆಗಳು ಇವೆಯೇ? ಯಾವೆಲ್ಲಾ ರಾಜ್ಯಗಳಲ್ಲಿ ಇವೆ. ಅಲ್ಲಿನ ಸರ್ಕಾರ ಏನು ಮಾಡಿವೆ” ಎಂದು ಪರಿಶೀಲಿಸಿ ಎಂದು ನ್ಯಾಯಾಲಯ ಹೇಳಿತು.

Also Read
ಮೈಸೂರು ಅನಂತಸ್ವಾಮಿ ರಾಗ ಸಂಯೋಜನೆಯ ನಾಡಗೀತೆಗೆ ಆಕ್ಷೇಪ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಇದಕ್ಕೆ ಅರ್ಜಿದಾರರ ಪರ ವಕೀಲರು “ತಮಿಳುನಾಡಿನಲ್ಲಿ ನಾಡಗೀತೆ ಇದೆ. ಕವಿಯೇ ರಾಗ ಸಂಯೋಜನೆ ಮಾಡಿದ್ದಾರೆ” ಎಂದರು.

ಆಗ ಪೀಠವು “ಸಂಗೀತ ಶಾಸ್ತ್ರದ ದಿಗ್ಗಜರಲ್ಲಿ ಯಾರನ್ನು ನ್ಯಾಯಾಲಯಕ್ಕೆ ಕರೆಸಬಹುದು” ಎಂದು ಪ್ರಶ್ನಿಸಿತು. ಇದಕ್ಕೆ ಕಿಕ್ಕೇರಿ ಕೃಷ್ಣಮೂರ್ತಿ ಅವರು “ಬಿ ಕೆ ಸುಮಿತ್ರಾ ಅವರನ್ನು ಕರೆಸಬಹುದು” ಎಂದರು. ಆಗ ಪೀಠವು “ಹಾಗಾದರೆ ಅವರನ್ನು ಮುಂದಿನ ವಿಚಾರಣೆಗೆ ಕರೆಯುತ್ತೀರಾ. ಸಂಗೀತಕ್ಕೆ ಸಂಬಂಧಿಸಿದ ಗ್ರಂಥಗಳನ್ನು ಓದಿಕೊಂಡು, ಅವುಗಳ ಮೂಲಕ ನ್ಯಾಯಾಲಯಕ್ಕೆ ಸಹಾಯ ಮಾಡಬೇಕು” ಎಂದು ವಿಚಾರಣೆಯನ್ನು ಆಗಸ್ಟ್‌ 17ಕ್ಕೆ ಮುಂದೂಡಿತು.

Kannada Bar & Bench
kannada.barandbench.com