High Court of Karnataka 
ಸುದ್ದಿಗಳು

ಹೈಕೋರ್ಟ್‌ ವಿಡಿಯೋ ಕಲಾಪದಲ್ಲಿ ಅಶ್ಲೀಲ ಚಿತ್ರ ಪ್ರದರ್ಶನ: ಅನಾಮಿಕರ ವಿರುದ್ಧ ಪ್ರಕರಣ ದಾಖಲು

ಹೈಕೋರ್ಟ್‌ ಕಂಪ್ಯೂಟರ್ಸ್‌ ರಿಜಿಸ್ಟ್ರಾರ್‌ ಕಚೇರಿಯ ಎನ್‌ ಸುರೇಶ್‌ ಅವರು ನೀಡಿದ ದೂರಿನ ಅನ್ವಯ ಅನಾಮಿಕರ ವಿರುದ್ಧ ಐಟಿ ಕಾಯಿದೆ ಸೆಕ್ಷನ್‌ಗಳಾದ 67 ಮತ್ತು 67(ಎ) ಅಡಿ ಕೇಂದ್ರೀಯ ಸೆನ್‌ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Bar & Bench

ಕರ್ನಾಟಕ ಹೈಕೋರ್ಟ್‌ನ ವಿವಿಧ ಕೋರ್ಟ್‌ ಹಾಲ್ ಗಳ ವಿಡಿಯೊ ಕಾನ್ಫರೆನ್ಸ್‌ ವಿಚಾರಣೆ ವೇಳೆ ಅಶ್ಲೀಲ ಚಿತ್ರ ಪ್ರದರ್ಶಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅನಾಮಿಕರ ವಿರುದ್ಧ ಮಂಗಳವಾರ ಎಫ್‌ಐಆರ್‌ ದಾಖಲಾಗಿದೆ.

ಹೈಕೋರ್ಟ್‌ ಕಂಪ್ಯೂಟರ್ಸ್‌ ರಿಜಿಸ್ಟ್ರಾರ್‌ ಕಚೇರಿಯ ಎನ್‌ ಸುರೇಶ್‌ ಅವರು ನೀಡಿದ ದೂರಿನ ಅನ್ವಯ ಅನಾಮಿಕರ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ ಸೆಕ್ಷನ್‌ಗಳಾದ 67 ಮತ್ತು 67(ಎ) ಅಡಿ ಕೇಂದ್ರೀಯ ಸೈಬರ್ ಅಪರಾಧ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೂರಿನ ಸಾರಾಂಶ: ಕರ್ನಾಟಕ ಹೈಕೋರ್ಟ್‌ನ 6, 12, 18, 23, 24, 26 ಮತ್ತು ಇತರೆ ಹಾಲ್‌ಗಳಲ್ಲಿ ನ್ಯಾಯಮೂರ್ತಿಗಳು ಕಲಾಪ ನಡೆಸುತ್ತಿದ್ದಾಗ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾದ ಅಪರಿಚಿತರು ಅಶ್ಲೀಲ ಚಿತ್ರಗಳನ್ನು ಪ್ರದರ್ಶಿಸಿ, ನ್ಯಾಯಾಲಯದ ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ. ಅಪರಿಚಿತ ಅಸಾಮಿಗಳ ಐಪಿ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿ ಪಡೆದು ಕ್ರಮಕೈಗೊಳ್ಳಬೇಕು ಎಂದು ಕೋರಲಾಗಿದೆ.

ಈ ಮಧ್ಯೆ, ಘಟನೆಯ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿನ ಕೋರ್ಟ್‌ಗಳ ವಿಡಿಯೊ ಕಾನ್ಫರೆನ್ಸ್‌ ಮತ್ತು ಲೈವ್‌ ಸ್ಟ್ರೀಮಿಂಗ್‌ ಅನ್ನು ನಿರ್ಬಂಧಿಸಿದೆ.