Shailesh Kumar and Karnataka HC
Shailesh Kumar and Karnataka HC 
ಸುದ್ದಿಗಳು

ವಿದೇಶದಲ್ಲಿ ಬಂಧನ: "ಸೌದಿಯಲ್ಲಿ ಶೈಲೇಶ್‌ ತನ್ನಿಚ್ಛೆಯ ವಕೀಲರ ನೇಮಿಸಿಕೊಳ್ಳಬಹುದೇ?" ಕೇಂದ್ರಕ್ಕೆ ಹೈಕೋರ್ಟ್‌ ಪ್ರಶ್ನೆ

Bar & Bench

“ಸೌದಿ ಅರೇಬಿಯಾದಲ್ಲಿ ಶಿಕ್ಷೆಗೆ ಗುರಿಯಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್‌ ಅವರು ಮೇಲ್ಮನವಿಯ ವಿಚಾರಣೆಯ ವೇಳೆ ತನ್ನ ಇಚ್ಛೆಯ ವಕೀಲರನ್ನು ನೇಮಿಸಿಕೊಳ್ಳಬಹುದೇ? ಹೌದಾದರೆ ಭಾರತ ಸರ್ಕಾರವು ಅವರಿಗೆ ವಕೀಲರ ನೆರವು ಒದಗಿಸಲಿದೆಯೇ?” ಎಂಬುದು ಸೇರಿದಂತೆ ಮೂರು ಪ್ರಶ್ನೆಗಳಿಗೆ ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಸೌದಿ ಅರೇಬಿಯಾದ ದೊರೆ ಹಾಗೂ ಇಸ್ಲಾಂ ಕುರಿತು ಆಕ್ಷೇಪಾರ್ಹ ಮಾಹಿತಿ ಪೋಸ್ಟ್‌ ಮಾಡಿದ್ದ ಆರೋಪದ ಮೇಲೆ ಸೌದಿಯಲ್ಲಿ ಬಂಧಿತನಾಗಿರುವ ಮಂಗಳೂರಿನ ಶೈಲೇಶ್‌ ಕುಮಾರ್‌ ಪತ್ನಿ ಕವಿತಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ಪೀಠವು “ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು ಕೆಲವು ದಾಖಲೆಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ ಜುಲೈ 1ರಂದು ತನಿಖಾಧಿಕಾರಿಯು ರಿಯಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಕಳುಹಿಸಿರುವ ಪತ್ರವಿದ್ದು, ಭಾರತೀಯ ರಾಯಭಾರ ಕಚೇರಿಯು ಜುಲೈ 6ರಂದು ಸೌದಿ ಅರೇಬಿಯಾದ ವಿದೇಶಾಂಗ ಇಲಾಖೆಗೆ ಬರೆದಿರುವ ಪತ್ರಗಳೂ ಸೇರಿವೆ. ಎಲ್ಲಾ ನಿರ್ಬಂಧಗಳ ನಡುವೆಯೂ ಅತ್ಯಂತ ಗಂಭೀರವಾಗಿ ರಾಜತಾಂತ್ರಿಕ ಮಟ್ಟದಲ್ಲಿ ಪ್ರಕರಣವನ್ನು ಪರಿಗಣಿಸಲಾಗಿದೆ” ಎಂಬ ಅಂಶಗಳನ್ನು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.

ಇದರ ಜೊತೆಗೆ ಪೀಠವು ಮೂರು ಪ್ರಶ್ನೆಗಳಿಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಸರ್ಕಾರದ ವಕೀಲರಿಗೆ ನಿರ್ದೇಶಿಸಿದೆ. ಆ ಮೂರು ಪ್ರಶ್ನೆಗಳು ಹೀಗಿವೆ:

1. ಶಿಕ್ಷೆಗೆ ಒಳಗಾಗಿರುವ ವ್ಯಕ್ತಿಯು ಮೇಲ್ಮನವಿಯ ವಿಚಾರಣೆಯ ವೇಳೆ ತನ್ನ ಇಚ್ಛೆಯ ವಕೀಲರನ್ನು ನೇಮಿಸಿಕೊಳ್ಳಬಹುದೇ? ಹೌದಾದರೆ, ಭಾರತ ಸರ್ಕಾರವು ಅವರಿಗೆ ವಕೀಲರ ನೆರವು ಒದಗಿಸಲಿದೆಯೇ?

2. ಸೌದಿ ಅರೇಬಿಯಾದ ಸ್ಥಳೀಯ ಕಾನೂನಿನ ಅಡಿ ಶಿಕ್ಷೆ ಕಾಯಂಗೊಳಿಸುವ ಪ್ರಕ್ರಿಯೆಯ ವ್ಯಾಪ್ತಿ ಏನು? ತನಿಖೆಯಲ್ಲಿ ಕಂಡುಬರುವ ಮಾಹಿತಿಯನ್ನು ಅಲ್ಲಿನ ನ್ಯಾಯಾಲಯದ ಮುಂದೆ ಇಡಬಹುದೇ?

3. ಭಾರತದಲ್ಲಿ ಪೊಲೀಸ್‌ ವಿಚಾರಣೆ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುವವರೆಗೆ ವಿಚಾರಣೆಯನ್ನು ಮುಂದೂಡುವಂತೆ ಭಾರತೀಯ ರಾಯಭಾರ ಕಚೇರಿಯನ್ನು ಕೋರಬಹುದೇ?

ಈ ಪ್ರಶ್ನೆಗಳಿಗೆ ಉತ್ತರಿಸಲು ಅದು ಕೇಂದ್ರಕ್ಕೆ ನಿರ್ದೇಶಿಸಿದೆ.

ಅಲ್ಲದೇ, “ರಾಜ್ಯ ಸರ್ಕಾರದ ಪರ ವಕೀಲರು ಜುಲೈ 17ರಂದು ಮೆಮೊ ಸಲ್ಲಿಸಿದ್ದು, ಇದರ ಜೊತೆಗೆ 12 ದಾಖಲೆಗಳನ್ನು ಸಲ್ಲಿಸಿದ್ದಾರೆ. ಸರಿಯಾದ ರೀತಿಯಲ್ಲಿ ಕೆಲವು ಬೆಳವಣಿಗೆಗಳು ಆಗುತ್ತಿವೆ. ಆದರೆ, ಅದರ ತೀವ್ರತೆ ಸಮಾಧಾನಕರವಾಗಿಲ್ಲ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದ್ದು, “ಕೇಂದ್ರ ಸರ್ಕಾರದ ಪಾತ್ರದ ಬಗ್ಗೆ ತನಿಖಾಧಿಕಾರಿ ಸಲ್ಲಿಸಿರುವ ದಾಖಲೆಗಳನ್ನು ಕೇಂದ್ರದ ಸಂಬಂಧಿತ ಅಧಿಕಾರಿ ಪರಿಶೀಲಿಸಬೇಕು” ಎಂದೂ ನ್ಯಾಯಾಲಯ ಒತ್ತಿ ಹೇಳಿದೆ. ವಿಚಾರಣೆಯನ್ನು ಆಗಸ್ಟ್‌ 8ಕ್ಕೆ ಮುಂದೂಡಿದೆ.

ಇದಕ್ಕೂ ಮುನ್ನ ಪೀಠವು ಪ್ರಕರಣದ ಸ್ಥಿತಿಗತಿ ಬಗ್ಗೆ ಕೇಂದ್ರ ಸರ್ಕಾರದ ವಕೀಲರ ಮಧುಕರ್‌ ದೇಶಪಾಂಡೆ ಅವರನ್ನು ಪ್ರಶ್ನಿಸಿತು. ಇದಕ್ಕೆ ಅವರು “ಕೆಲ ಮಾಹಿತಿ ಕೋರಿ ತನಿಖಾ ಸಂಸ್ಥೆಯು ಭಾರತದ ರಾಯಭಾರ ಕಚೇರಿಗೆ ಪತ್ರ ಬರೆದಿದ್ದು, ರಿಯಾದ್‌ನಿಂದ ಕೆಲ ಮಾಹಿತಿ ಕೋರಲಾಗಿದೆ. ಆ ಮಾಹಿತಿಯನ್ನು ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿಗೆ ಕಳುಹಿಸಿಕೊಡಲಾಗಿದೆ. ಅಲ್ಲಿಂದ ಬಂದಿರುವ ಮಾಹಿತಿ ಪಡೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಅದನ್ನು ತನಿಖಾ ಸಂಸ್ಥೆಯೊಂದಿಗೆ ಹಂಚಿಕೊಳ್ಳಲಾಗುವುದು” ಎಂದು ಮೌಖಿಕವಾಗಿ ಉತ್ತರಿಸಿದರು.

ಇದಕ್ಕೆ ಪೀಠವು “ಏನೆಲ್ಲಾ ಮಾಹಿತಿಯನ್ನು ಸೌದಿ ಅರೇಬಿಯಾದಿಂದ ಕೋರಿದ್ದೀರಿ? ಶಿಕ್ಷೆ ಕಾಯಂ ಆದೇಶದ ಕುರಿತಾದ ಮೇಲ್ಮನವಿಯ ವಿಚಾರಣೆ ಪೂರ್ಣಗೊಂಡಿದೆಯೇ? ಅಥವಾ ಬಾಕಿ ಇದೆಯೇ?” ಎಂದು ಪ್ರಶ್ನಿಸಿತು. ಇದಕ್ಕೆ ಮಧುಕರ್‌ ಅವರು “ಮೇಲ್ಮನವಿಯ ವಿಚಾರಣೆ ಬಾಕಿ ಇದೆ” ಎಂದರು. ಆಗ ನ್ಯಾಯಮೂರ್ತಿಗಳು “ಪ್ರಕರಣವನ್ನು ಬಾಕಿ ಉಳಿಸುವಂತೆ ಕೋರಲಾಗಿದೆಯೇ?” ಎಂದದ್ದಕ್ಕೆ “ಆ ಕೋರಿಕೆಯನ್ನು ನಾವು ಮಾಡಬೇಕಿದೆ” ಎಂದು ಉತ್ತರಿಸಿದರು.

ಮುಂದುವರಿದು ಪೀಠವು “ಯಾವಾಗ ಕೋರಿಕೆಯನ್ನು ಮಾಡುತ್ತೀರಿ?” ಎಂದು ಪ್ರಶ್ನಿಸಿತು. ಇದಕ್ಕೆ ಮಧುಕರ್‌ ಅವರು “ನೀವು ಆದೇಶ ಮಾಡಿರುವುದನ್ನೂ ಸಂಬಂಧಿತರ ಗಮನಕ್ಕೆ ತರಲಾಗಿದೆ. ರಿಯಾದ್‌ನ ತನಿಖಾಧಿಕಾರಿಯು ತನಿಖೆಯ ಪ್ರಗತಿ ಉಲ್ಲೇಖಿಸಿ ಪತ್ರ ಬರೆದಿದ್ದು, ಎರಡು ಐಪಿ ಅಡ್ರೆಸ್‌ಗಳಿಗೆ ಸಂಬಂಧಿಸಿದಂತೆ ಮಾಹಿತಿ ಕೋರಿದ್ದಾರೆ. ಈ ಮಾಹಿತಿಯನ್ನು ನಾವು ರವಾನಿಸಿದ್ದೇವೆ. ಮೇಲ್ಮನವಿಯ ಆದೇಶ ಖಚಿತವಾದರೆ ಅದೇ ಅಂತಿಮವಾಗುತ್ತದೆ. ಹೀಗಾಗಿ, ಅದನ್ನು ಬಾಕಿ ಉಳಿಸುವುದಕ್ಕೆ ಕೋರುವ ಪ್ರಕ್ರಿಯೆ ಚಾಲ್ತಿಯಲ್ಲಿದೆ” ಎಂದು ವಿವರಣೆ ನೀಡಿದರು.

ಆಗ ಪೀಠವು “ಶಿಕ್ಷೆ ಕಾಯಂ ಆದರೆ ಇಡೀ ಪ್ರಕ್ರಿಯೆ ವಿಫಲವಾಗುತ್ತದೆ. ಅಷ್ಟರೊಳಗೆ (ಶೈಲೇಶ್‌ರನ್ನು) ನೇಣಿಗೇರಿಸಿದರೆ ಏನು ಮಾಡಬೇಕು? ಅಲ್ಲಿ ಏನು ಬೇಕಾದರೂ ಆಗಬಹುದು. ಸೌದಿ ಅರೇಬಿಯಾದಲ್ಲಿ ಆದೇಶವನ್ನು ಅಧಿಕೃತಗೊಳಿಸಿದ ಮೇಲೆ ಅದನ್ನು ಪುನರ್‌ ಪರಿಶೀಲಿಸಲು ಸಾಧ್ಯವಿದೆಯೇ ಎಂಬುದನ್ನು ಪರಿಶೀಲಿಸಬೇಕು” ಎಂದರು.

“ರಿಯಾದ್‌ನಲ್ಲಿ ಸೂಕ್ತ ಪ್ರಾಧಿಕಾರವನ್ನು ಸಂಪರ್ಕಿಸುವುದು ಸೇರಿದಂತೆ ಬೇರೆಲ್ಲಾ ವಿಚಾರಗಳು ಸರ್ಕಾರದ ಸಾರ್ವಭೌಮತ್ವದ ಕೆಲಸಗಳು. ರಾಜತಾಂತ್ರಿಕ ವಿಚಾರಗಳಲ್ಲಿ ನ್ಯಾಯಾಲಯಕ್ಕೆ ಪರಿಶೀಲಿಸಲು ಸೀಮಿತ ಅಧಿಕಾರವಿದೆ. ನಿಮ್ಮ ವ್ಯಾಪ್ತಿಯಲ್ಲಿ ಏನೆಲ್ಲಾ ಕೆಲಸವಾಗಿದೆ ಎಂದು ತೋರಿಸಬೇಕು. ಸಾರ್ವಭೌಮತ್ವದ ವಿಚಾರ ಎಂದು ನ್ಯಾಯಾಲಯ ಮೂಕ ಪ್ರೇಕ್ಷಕವಾಗಿರಬೇಕು ಎಂಬ ವಾದವನ್ನು ನಾನು ಮನ್ನಿಸುವುದಿಲ್ಲ. ಅದು ಸಾರ್ವಭೌಮ ಕರ್ತವ್ಯವಾಗಿದ್ದರೂ ಪ್ರಕರಣದ ವಿಚಾರದಲ್ಲಿ ನೀವು ಏನೆಲ್ಲಾ ಮಾಡುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ” ಎಂದು ಪೀಠ ಹೇಳಿತು.

“ಕುಲಭೂಷಣ್‌ ವಿಚಾರದಲ್ಲಿ ನೀವು ತೋರಿಸಿದ ಆಸಕ್ತಿಯ ಬೇರೆ. ಹೌದು, ಅಲ್ಲಿನ ವಿಚಾರಗಳು ಬೇರೆ ಇದ್ದವೂ ಎಂಬುದನ್ನು ನಾನು ಒಪ್ಪುತ್ತೇನೆ. ಪಾಕಿಸ್ತಾನವು ಅತ್ಯುತ್ತಮ ಸ್ನೇಹಿ ರಾಷ್ಟ್ರವಾಗಿರಲಿಲ್ಲ. ಆದರೆ, ಸೌದಿ ಅರೇಬಿಯಾ ಅತ್ಯುತ್ತಮ ಸ್ನೇಹಿ ರಾಷ್ಟ್ರ. ನಿಮ್ಮ ಮಿತಿಗಳು ಅರ್ಥವಾಗುತ್ತವೆ. ಆದರೆ, ನೀವು ಹೇಗಾದರೂ ಮಾಡಿ ಆ ನಿರ್ಬಂಧಗಳನ್ನು ಮೀರಬೇಕು” ಎಂದಿತು.

ಆಗ ಮಧುಕರ್‌ ಅವರು “ಮೇಲ್ಮನವಿ ಹಂತದಲ್ಲಿರುವ ಪ್ರಕರಣವನ್ನು ಬಾಕಿ ಉಳಿಸುವ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬೇಕಿದ್ದು, ಸೂಕ್ತ ವೇದಿಕೆಯ ಮೂಲಕ ಅದನ್ನು ನಾವು ಸೌದಿಗೆ ತಲುಪಿಸಬೇಕಿದೆ” ಎಂದರು. ಇದನ್ನು ಆಲಿಸಿದ ಪೀಠವು ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಹಾಕಿದೆ.