Soli Sorabjee and Ashok Desai  
ಸುದ್ದಿಗಳು

ಅಗಲಿದ ಹಿರಿಯ ವಕೀಲರಾದ ಸೋಲಿ ಸೊರಾಬ್ಜಿ, ಅಶೋಕ್‌ ದೇಸಾಯಿ ಅವರಿಗೆ ನಮನದ ಮಹಾಪೂರ

ಹಿರಿಯ ವಕೀಲರಾದ ಸೋಲಿ ಸೊರಾಬ್ಜಿ ಮತ್ತು ಅಶೋಕ್‌ ದೇಸಾಯಿ ಸ್ಮರಣಾರ್ಥ ಆಯೋಜಿಸಿದ್ದ ಪೂರ್ಣ ನ್ಯಾಯಾಲಯ ಕಾರ್ಯಕ್ರಮದಲ್ಲಿ ಸಿಜೆಐ ಎನ್‌ ವಿ ರಮಣ, ಎಜಿ ಕೆ ಕೆ ವೇಣುಗೋಪಾಲ್‌ ಮಾತನಾಡಿದರು.

Bar & Bench

ಅಗಲಿದ ಹಿರಿಯ ವಕೀಲರಾದ ಸೋಲಿ ಸೊರಾಬ್ಜಿ ಮತ್ತು ಅಶೋಕ್‌ ದೇಸಾಯಿ ಸ್ಮರಣಾರ್ಥ ಶುಕ್ರವಾರ ಆಯೋಜಿಸಲಾಗಿದ್ದ ಸುಪ್ರೀಂ ಕೋರ್ಟ್‌ ಪೂರ್ಣ ನ್ಯಾಯಾಲಯ ಕಾರ್ಯಕ್ರಮದಲ್ಲಿ (ಫುಲ್‌ ಕೋರ್ಟ್‌ ರೆಫರೆನ್ಸ್‌) ಮರೆಯಾದ ಕಾನೂನು ಕ್ಷೇತ್ರದ ದಿಗ್ಗಜರನ್ನು ಭಾವಪೂರ್ಣವಾಗಿ ನೆನೆಯಲಾಯಿತು.

ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಅಗಲಿದ ಧೀಮಂತ ಚೇತನಗಳಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ, “ಇಬ್ಬರು ಕಾನೂನು ಪಂಡಿತರ ಸಂಪೂರ್ಣ ಬದುಕನ್ನು ಸಂಕ್ಷಿಪ್ತವಾಗಿ ಕಟ್ಟಿಕೊಡುವುದು ಅತ್ಯಂತ ಕಷ್ಟ” ಎಂದು ಅವರ ಬದುಕಿನ ವಿಶಾಲ ಹರವಿನ ಬಗ್ಗೆ ಬೆಳಕು ಚೆಲ್ಲಿದರು.

ಮೇನಕಾ ಗಾಂಧಿ ಪ್ರಕರಣ ನಡೆಸುತ್ತಿದ್ದ ಖ್ಯಾತ ವಕೀಲ ನಾನಿ ಪಾಲ್ಖಿವಾಲಾ ಅವರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸೊರಾಬ್ಜಿ ಅವರ ಅಂದಿನ ದಿನಗಳನ್ನು ಸಿಜೆಐ ರಮಣ ನೆನಪಿಸಿಕೊಂಡರು. “ಆಗಲೇ ಸೊರಾಬ್ಜಿ ಅವರು ನ್ಯಾಯಶಾಸ್ತ್ರದ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು” ಎಂದರು.

“ವಕೀಲನಾಗಿ ಕೆಲವು ಬಾರಿ ಸೊರಾಬ್ಜಿ ಅವರಿಗೆ ನಾನು ಪ್ರಕರಣಗಳ ಬಗ್ಗೆ ವಿವರ ನೀಡಿದ್ದೇನೆ. 1988ರಲ್ಲಿ ಮೊದಲ ಬಾರಿಗೆ ನಾನು ಅವರಿಗೆ ಪ್ರಕರಣವೊಂದರ ಕುರಿತು ಮಾಹಿತಿ ನೀಡಿದ್ದೆ. ಅವರಿಗೆ ಪ್ರಕರಣದ ಕುರಿತಾದ ಎಲ್ಲಾ ಮಾಹಿತಿಯೂ ಇರುತ್ತಿತ್ತು. ವಿಚಾರಣೆಯ ಸಂದರ್ಭದಲ್ಲಿ ಪೀಠ ಕೇಳಿದ ಪ್ರಶ್ನೆಗಳನ್ನೇ ಅವರು ನನಗೆ ಹಾಕಿದ್ದರು. ಅವರ ಅನುಭವಕ್ಕೆ ಸರಿಸಾಟಿ ಇರಲಿಲ್ಲ” ಎಂದು ಸಿಜೆಐ ರಮಣ ನೆನಪಿಸಿಕೊಂಡರು.

ಅಶೋಕ್‌ ದೇಸಾಯಿ ಅವರನ್ನು ನೆನೆಯುತ್ತಾ ಸಿಜೆಐ ಅವರು, “ಅಶೋಕ್‌ ದೇಸಾಯಿ ಅವರು ಪತ್ರಕರ್ತ, ಶಿಕ್ಷಕ, ಅಡ್ವೊಕೇಟ್‌ ಜನರಲ್‌ ಮತ್ತು ಸಾಲಿಸಿಟರ್‌ ಜನರಲ್‌ ಆಗಿ ಕೆಲಸ ಮಾಡಿದವರು. ಹಲವು ಗೌರವಗಳು ಅವರಿಗೆ ಸಂದಿವೆ. ದೇಸಾಯಿ ಅವರು ನೈತಿಕತೆಯನ್ನು ಆಳವಾಗಿ ಗೌರವಿಸುತ್ತಿದ್ದರು. ಗುರಿಯಷ್ಟೇ ಅದನ್ನು ತಲುಪುವ ಹಾದಿಯ ಬಗ್ಗೆಯೂ ಅವರು ಗಮನವಿರಿಸುತ್ತಿದ್ದರು” ಎಂದರು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಹಿನ್ನೆಲೆಯಲ್ಲಿ ನಡೆದ 1984ರ ಸಿಖ್‌ ಹತ್ಯಾಕಾಂಡದ ಸಂತ್ರಸ್ತರ ಕುಟುಂಬಗಳಿಗೆ ಹಿರಿಯ ವಕೀಲ ಹಾಗೂ ಮಾಜಿ ಅಟಾರ್ನಿ ಜನರಲ್‌ ಸೋಲಿ ಸೊರಾಬ್ಜಿ ಅವರು ಹೇಗೆ ನೆರವಾದರು ಎಂಬುದನ್ನು ವಿವರಿಸುವ ಮೂಲಕ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಸೊರಾಬ್ಜಿಯವರನ್ನು ಸ್ಮರಿಸಿದರು.

“ಮತಾಂಧ ಗುಂಪುಗಳ ದಂಡನೆಯ ವರ್ತನೆಗಳಿಂದ ಭಿನ್ನಮತೀಯರನ್ನು ರಕ್ಷಿಸಬೇಕು. ಸಹಿಷ್ಣುತೆಯ ಗುಣ ಎಲ್ಲಾ ನಾಗರಿಕರ ಮೂಲಭೂತ ಕರ್ತವ್ಯವಾಗಬೇಕು ಎಂಬುದು ಸೊರಾಬ್ಜಿ ಅವರ ನಿಲುವಾಗಿತ್ತು” ಎಂದರು.

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದ ಸೊರಾಬ್ಜಿ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. “ಸೊರಾಬ್ಜಿ ಅವರನ್ನು ಮೆಚ್ಚಲು ಹಲವು ವಿಚಾರಗಳಿವೆ. ನ್ಯಾಯದಾನದೆಡೆಗೆ ಅವರಿಗೆ ಅಪಾರವಾದ ತುಡಿತವಿತ್ತು.” ಎಂದು ವೇಣುಗೋಪಾಲ್‌ ಸ್ಮರಿಸಿದರು.

ಹಿರಿಯ ವಕೀಲ ಮತ್ತು ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್‌ ಅಧ್ಯಕ್ಷ ವಿಕಾಸ್‌ ಸಿಂಗ್‌ ಮಾತನಾಡಿ, “ಅಶೋಕ್‌ ದೇಸಾಯಿ ಅವರು ನಮಗೆ ಅಶೋಕ್‌ ಭಾಯ್‌ ಆಗಿದ್ದರು. ಸಾರ್ವಜನಿಕ ಜೀವನದಲ್ಲಿ ಹೊಣೆಗಾರಿಕೆಗೆ ಸಂಬಂಧಿಸಿದ ಹಲವು ಪ್ರಕರಣಗಳನ್ನು ಅವರು ನಡೆಸಿದ್ದರು. ಅಪಾಯಕಾರಿ ಸೆನ್ಸಾರ್‌ಶಿಪ್‌ ವಿರುದ್ಧ ನ್ಯಾಯಾಲಯಗಳು ಸೆಟೆದು ನಿಲ್ಲುವಂತೆ ಮಾಡಿದ್ದರು” ಎಂದು ನೆನೆಪಿಸಿಕೊಂಡರು.

“ಸೊರಾಬ್ಜಿ ಅವರು ಮಾನವೀಯತೆಯ ಪರ ನಿಂತ ಮಹಾನ್‌ ಹೋರಾಟಗಾರ. ತಮ್ಮ ಅಂತಿಮ ದಿನಗಳವರೆಗೂ ವಕೀಲಿಕೆ ಮಾಡಿದರು. ಸಾಂವಿಧಾನಿಕ ನ್ಯಾಯಶಾಸ್ತ್ರದ ಬೆಳವಣಿಗೆಗೆ ಅವರ ಕೊಡುಗೆ ಅಪಾರ. ಯಶಸ್ವಿ ಉದ್ಯಮದ ಕುಟುಂಬದ ಹಿನ್ನೆಲೆ ಇದ್ದರೂ ಸೊರಾಬ್ಜಿ ಅವರು ಲಾಭ ಮಾಡುವೆಡೆಗೆ ಚಿತ್ತಹರಿಸಲಿಲ್ಲ. ಹಲವು ರಾಜಕೀಯ ಕೈದಿಗಳಿಗೆ ಅವರು ಸಹಾಯ ಮಾಡಿದ್ದಾರೆ. ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುವುದರ ವಿರುದ್ಧ ಅವರು ಹೋರಾಟ ನಡೆಸಿದ್ದರು. ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ಎತ್ತಿ ಹಿಡಿದ ಪ್ರಕರಣದಲ್ಲಿ ಅವರೂ ಇದ್ದರು” ಎಂದು ಸ್ಮರಿಸಿದರು.

ಕಾನೂನು ಕ್ಷೇತ್ರದ ಈ ನಿರ್ಗಮಿತ ದಂತಕತೆಗಳಿಗೆ ಪೂರ್ಣ ನ್ಯಾಯಾಲಯವು ಎರಡು ನಿಮಿಷಗಳ ಮೌನ ಅಚರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿತು.