ಉದಾರೀಕರಣದ ನಂತರ ಮಹತ್ವದ ವಿದ್ಯಾರ್ಥಿ ನಾಯಕ ರೂಪುಗೊಂಡಿಲ್ಲ: ಸಿಜೆಐ ಎನ್‌ ವಿ ರಮಣ ಅಭಿಮತ

ಸಂವಿಧಾನದ ರಕ್ಷಣೆ ಮತ್ತು ಅದನ್ನು ಎತ್ತಿ ಹಿಡಿಯುವುದು ಮಹತ್ವದ ಕೆಲಸ ಎಂಬುದನ್ನು ಅರಿಯುವಂತೆ ಯುವ ಪದವೀಧರರಿಗೆ ಸಿಜೆಐ ನೆನಪಿಸಿದ್ದಾರೆ.
Justice NV Ramana
Justice NV Ramana

ದೇಶದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಾಸ್ತವಗಳಿಗೆ ಅಪರಿಚಿತರಂತೆ ಯುವ ವಕೀಲರು ವರ್ತಿಸಲಾಗದು. ಹೀಗಾಗಿ, ಅನುಕೂಲಕರ ಬದುಕಿಗೆ ಬದಲಾಗಿ ದೇಶದ ಭವಿಷ್ಯದ ದೃಷ್ಟಿಯಿಂದ ಸೇವಾ ಮನೋಭಾವದ ಬದುಕು ಆಯ್ಕೆ ಮಾಡಿಕೊಳ್ಳುವಂತೆ ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ಯುವ ವಕೀಲರಿಗೆ ಕರೆ ನೀಡಿದರು.

ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

“ಕಳೆದ ಕೆಲವು ದಶಕಗಳಲ್ಲಿ ವಿದ್ಯಾರ್ಥಿ ಸಮುದಾಯದಿಂದ ಯಾವುದೇ ಮಹತ್ವದ ನಾಯಕ ಹೊರಹೊಮ್ಮಿಲ್ಲ ಎಂಬುದನ್ನು ದೇಶದ ಸಾಮಾಜಿಕ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯಾರಾದರೂ ಗುರುತಿಸಬಲ್ಲರು. ಉದಾರೀಕರಣೋತ್ತರ ಕಾಲಘಟ್ಟದಲ್ಲಿ ಸಾಮಾಜಿಕ ವಿಚಾರಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸದೇ ಇರುವುದಕ್ಕೂ ಇದಕ್ಕೂ ಸಂಬಂಧ ಇರಬಹುದು ಎಂದೆನಿಸುತ್ತದೆ. ಆಧುನಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಮಹತ್ವವನ್ನು ಕುಗ್ಗಿಸಲಾಗದು” ಎಂದು ಹೇಳಿದ್ದಾರೆ.

“ಸಮಕಾಲೀನ ಚರ್ಚೆಯಲ್ಲಿ ಯುವಕರು ಭಾಗವಹಿಸುವುದು ಅಗತ್ಯ. ನಿಮಗೆ ಸ್ಪಷ್ಟವಾದ ದೃಷ್ಟಿಕೋನ ಇರಬೇಕು. ತಿಳಿವಳಿಕೆ ಹೊಂದಿರುವ, ಭವಿಷ್ಯದ ಬಗ್ಗೆ ಕನಸುಗಳಿರುವ, ಸಮರ್ಥವಾಗಿರುವ ನಿಮ್ಮಂಥ ವಿದ್ಯಾರ್ಥಿಗಳು ಸಾರ್ವಜನಿಕ ಬದುಕಿಗೆ ಪ್ರವೇಶಿಸಬೇಕು. ಆ ಮೂಲಕ ನಾಯಕರಾಗಿ ರೂಪುಗೊಳ್ಳಬೇಕು. ಸಂವಿಧಾನದಲ್ಲಿ ವಿವರಿಸಿರುವಂತೆ ರಾಜಕೀಯ ಪ್ರಜ್ಞೆ ಮತ್ತು ಅತ್ಯುತ್ತಮ ಚರ್ಚೆಗಳು ರಾಷ್ಟ್ರವನ್ನು ವೈಭೋವೋಪೇತವಾದ ಭವಿಷ್ಯದತ್ತ ಕೊಂಡೊಯ್ಯುತ್ತವೆ” ಎಂದರು.

“ಕಾನೂನು ವೃತ್ತಿಯ ಅತ್ಯುತ್ತಮ ಆಯ್ಕೆಯಾಗಿದ್ದು, ತಿಳಿವಳಿಕೆಯುಳ್ಳ ಗೌರವಯುತವಾದ ವೃತ್ತಿಯಾಗಿದೆ. ಇದು ವೃತ್ತಿಯಾಗಿದ್ದು, ವ್ಯಾಪಾರ ಅಥವಾ ಉದ್ಯಮವಲ್ಲ. ಇವೆರಡರ ನಡುವಿನ ವ್ಯತ್ಯಾಸವು ಆಳ ಮತ್ತು ಮೂಲಭೂತವಾಗಿದೆ. ಉದ್ಯಮದಲ್ಲಿ ನಿಮ್ಮ ಏಕೈಕ ಉದ್ದೇಶ ಹಣ ಮಾಡುವುದಾಗಿದೆ. ಕಾನೂನು ವೃತ್ತಿಯಲ್ಲಿ ಹಣ ಮಾಡುವುದು ಆಕಸ್ಮಿಕವಾಗಿದೆ” ಎಂದರು.

“ಹೆಚ್ಚು ವೇತನ ದೊರೆಯುವ ಮತ್ತು ಲಾಭದಾಯಕ ಉದ್ಯೋಗವಕಾಶ ಪಡೆಯುವ ಒತ್ತಡದ ಹಿನ್ನೆಲೆಯಲ್ಲಿ ಮಕ್ಕಳನ್ನು ಖಾಸಗಿಯವರು ನಡೆಸುವ ವಸತಿ ಶಾಲೆಗಳು ಮತ್ತು ಕೋಚಿಂಗ್‌ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ. ಉದಯೋನ್ಮಖ ಪ್ರತಿಭೆಗಳ ಆರಂಭಿಕ ವರ್ಷಗಳನ್ನು ಉಸಿರುಗಟ್ಟಿಸುವ ಜೈಲಿಗೆ ಸಮನಾದ ವಾತಾವರಣದಲ್ಲಿ ಕಳೆಯುವಂತೆ ಮಾಡುವುದು ದುರದೃಷ್ಟಕರ” ಎಂದು ಬೇಸರ ವ್ಯಕ್ತಪಡಿಸಿದರು.

Also Read
[ಸಂವಿಧಾನ ದಿನ] ದುರುದ್ದೇಶಪೂರಿತ ದಾಳಿಗಳಿಂದ ನ್ಯಾಯಾಂಗವನ್ನು ರಕ್ಷಿಸಿ: ವಕೀಲರಿಗೆ ಸಿಜೆಐ ರಮಣ ಕರೆ

“ಕಾನೂನು ಸಂಸ್ಥೆಗಳು ದೇಶದ ಕಾನೂನು ಕ್ಷೇತ್ರದ ಪ್ರಮುಖ ಭಾಗವಾದರೂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯಗಳಲ್ಲಿ ಕಲಿತು ಬಂದವರು ಕಾನೂನು ಸಂಸ್ಥೆಗಳಿಗೆ ಸೇರ್ಪಡೆಯಾಗುತ್ತಾರೆ ವಿನಾ ಪ್ರತ್ಯೇಕವಾಗಿ ವಕೀಲರಾಗಿ ಕೆಲಸ ಮಾಡುವವರ ಸಂಖ್ಯೆ ವಿರಳ. ಈ ಕಾರಣಕ್ಕಾಗಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳು ಮೇಲ್ಪದರಕ್ಕೆ ಸೀಮಿತವಾದ ಮತ್ತು ಸಾಮಾಜಿಕ ವಾಸ್ತವಗಳಿಂದ ದೂರ ಇವೆ ಎಂದು ಭಾವಿಸಲಾಗುತ್ತದೆ” ಎಂದು ವಿಶ್ಲೇಷಿಸಿದರು.

“ಸಮಾಜವನ್ನು ಶ್ರೀಮಂತಗೊಳಿಸುವ ಮತ್ತು ಸುಧಾರಣೆ ಮಾಡುವ ನಿಟ್ಟಿನಲ್ಲಿ ನಿಮ್ಮ ಪಾತ್ರದ ಬಗ್ಗೆ ನೀವು ಪರಿಭಾವಿಸಿಕೊಳ್ಳಬೇಕು. ಇಂಥ ಆತ್ಮಾವಲೋಕನದಿಂದ ಮಾತ್ರ ಅಗತ್ಯ ಗುಣಶಕ್ತಿ ವೃದ್ಧಿ ಮತ್ತು ನಂಬಿಕೆಗೆ ಬದ್ಧವಾಗಿರಲು ಸಾಧ್ಯ” ಎಂದು ಸಿಜೆಐ ರಮಣ ಹೇಳಿದರು.

Kannada Bar & Bench
kannada.barandbench.com