Rajasthan High court 
ಸುದ್ದಿಗಳು

ರಾಜ್ಯಪಾಲರ ಕಚೇರಿ ಮತ್ತು ಸಚಿವಾಲಯ ರಾಜ್ಯ ಸರ್ಕಾರದ ಭಾಗ: ರಾಜಸ್ಥಾನ ಹೈಕೋರ್ಟ್

ನಮ್ಮ ಸಾಂವಿಧಾನಿಕ ಮಾದರಿ ಗಮನಿಸಿದರೆ, ರಾಜ್ಯಪಾಲರ ಹುದ್ದೆ ರಾಜ್ಯ ಸರ್ಕಾರದ ಭಾಗವಾಗಿದ್ದು, ಅದರ ಅನ್ವಯ ಸ್ವಾಭಾವಿಕವಾಗಿಯೇ ರಾಜ್ಯಪಾಲರ ಸಚಿವಾಲಯವೂ ಸರ್ಕಾರದ ಭಾಗವಾಗಿದೆ ಎಂದ ನ್ಯಾಯಾಲಯ.

Bar & Bench

ರಾಜ್ಯಪಾಲರ ಕಚೇರಿ ಮತ್ತು ಅವರ ಸಚಿವಾಲಯ ಎರಡೂ ರಾಜ್ಯ ಸರ್ಕಾರದ ಭಾಗವಾಗಿದೆ ಎಂದು ರಾಜಸ್ಥಾನ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ರಜನಿಕಾಂತ್ ರಘುವರ್ ಸಹಾಯ್ ಮತ್ತಿತರರು ಹಾಗೂ ರಾಜಸ್ಥಾನ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ನಮ್ಮ ಸಾಂವಿಧಾನಿಕ ಮಾದರಿ ಗಮನಿಸಿದರೆ, ರಾಜ್ಯಪಾಲರ ಹುದ್ದೆ ರಾಜ್ಯ ಸರ್ಕಾರದ ಭಾಗವಾಗಿದ್ದು, ಅದರ ಅನ್ವಯ ಸಹಜವಾಗಿಯೇ ರಾಜ್ಯಪಾಲರ ಸಚಿವಾಲಯವೂ ಸರ್ಕಾರದ ಭಾಗವಾಗಿದೆ ಎಂಬುದಾಗಿ ನ್ಯಾಯಮೂರ್ತಿ ಮಹೇಂದರ್ ಕುಮಾರ್ ಗೋಯಲ್ ಅವರಿದ್ದ ಪೀಠ ಹೇಳಿದೆ.

"...ನಮ್ಮ ಸಾಂವಿಧಾನಿಕ ಸ್ವರೂಪದಡಿ, ರಾಜ್ಯಪಾಲರು ರಾಜ್ಯದ ಕಾರ್ಯಾಂಗದ ಮುಖ್ಯಸ್ಥರಾಗಿದ್ದು ರಾಜ್ಯ ಸರ್ಕಾರದ ಎಲ್ಲಾ ವ್ಯವಹಾರಗಳನ್ನು ಅವರ ಅಧಿಕಾರ ಮತ್ತು ಹೆಸರಿನ ಅಡಿಯಲ್ಲಿ ನಡೆಸಲಾಗುತ್ತದೆ. ಹೀಗಾಗಿ, ರಾಜ್ಯಪಾಲರ ಕಚೇರಿ ರಾಜ್ಯ ಸರ್ಕಾರದ ಅವಿಭಾಜ್ಯ ಅಂಗ ಎಂಬುದು ಮೂಲತತ್ವವಾಗಿದೆ... ಒಮ್ಮೆ ರಾಜ್ಯಪಾಲರು ರಾಜ್ಯ ಸರ್ಕಾರದ ಭಾಗವಾದರೆ, ಸ್ವಾಭಾವಿಕವಾಗಿಯೇ ಅವರ ಸಚಿವಾಲಯ ಕೂಡ ರಾಜ್ಯ ಸರ್ಕಾರದ ಭಾಗವಾಗುತ್ತದೆ" ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ರಾಜಸ್ಥಾನದ ರಾಜ್ಯಪಾಲರ ಕಚೇರಿಯಲ್ಲಿ ಉದ್ಯೋಗಿಗಳ ಬಡ್ತಿಗಾಗಿ ಮೀಸಲಾತಿ ಸಡಿಲಿಸಿ ಸಚಿವಾಲಯವು 2013ರಲ್ಲಿ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಇದನ್ನು ರದ್ದುಗೊಳಿಸಿ ರಾಜ್ಯಪಾಲರು 2020ರಲ್ಲಿ ನೀಡಿದ್ದ ಆದೇಶವನ್ನು ಬಡ್ತಿಯಿಂದ ವಂಚಿತರಾಗುವ ಭೀತಿಯಲ್ಲಿದ್ದ ಅರ್ಜಿದಾರರು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.  2020 ರ ಆದೇಶದ ಸಿಂಧುತ್ವ ಕುರಿತಂತೆ ತಕರಾರು ಎತ್ತಿದ್ದ ಅವರು ಅದನ್ನು ರದ್ದುಗೊಳಿಸುವಂತೆ ಕೋರಿದ್ದರು.

ಅಂತಿಮವಾಗಿ 2013 ರ ಮಾರ್ಗಸೂಚಿಗಳನ್ನು ರದ್ದುಗೊಳಿಸಿದ ನ್ಯಾಯಾಲಯ 2020 ರ ಆದೇಶವನ್ನು ಎತ್ತಿಹಿಡಿಯಿತು. ಆ ಪ್ರಕಾರ ಅರ್ಜಿದಾರರಿಗೆ ನೀಡಲಾಗಿದ್ದ ಪ್ರಥಮ ದರ್ಜೆ ಗುಮಾಸ್ತ ಹುದ್ದೆಯನ್ನು ನ್ಯಾಯಾಲಯ ರದ್ದುಗೊಳಿಸಿತು. ಆದರೆ ಅರ್ಜಿದಾರರಿಗೆ ಈಗಾಗಲೇ ನೀಡಲಾದ ಮತ್ತು ಅವರಿಂದ ಸ್ವೀಕರಿಸಲ್ಪಟ್ಟ ವಿತ್ತೀಯ ಪ್ರಯೋಜನಗಳನ್ನು ಮರಳಿ ಕೇಳುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.