Navin Sinha Rohinton Nariman and Indira Banerjee
Navin Sinha Rohinton Nariman and Indira Banerjee 
ಸುದ್ದಿಗಳು

ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್ 53ರ ಅಡಿ ಅಧಿಕಾರಿಗಳನ್ನು ಪೊಲೀಸರು ಎಂದು ಗುರುತಿಸಿ ಬಹುಮತದ ತೀರ್ಪು ನೀಡಿದ ಸುಪ್ರೀಂ

Bar & Bench

ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ (ಎನ್‌ಡಿಪಿಎಸ್‌) ಕಾಯಿದೆ – 1985ರ ಸೆಕ್ಷನ್‌ 53ರ ಅಡಿ ಅಧಿಕಾರಿಗಳನ್ನು ಪೊಲೀಸರು ಎಂದು ಸುಪ್ರೀಂ ಕೋರ್ಟ್‌ 2:1ರ ಬಹುಮತದ ತೀರ್ಪು ಪ್ರಕಟಿಸಿದೆ. (ತೊಫಾನ್‌ ಸಿಂಗ್‌ ವರ್ಸಸ್‌ ತಮಿಳುನಾಡು ರಾಜ್ಯ).

ತೀರ್ಪಿನ ಪರಿಣಾಮವಾಗಿ ಸಾಕ್ಷ್ಯ ಕಾಯಿದೆಯ ಸೆಕ್ಷನ್‌ 25ರ ಅಡಿ ಈ ಅಧಿಕಾರಿಗಳ ಮುಂದೆ ನೀಡುವ ತಪ್ಪೊಪ್ಪಿಗೆ ಹೇಳಿಕೆಗಳನ್ನು ನಿರ್ಬಂಧಿಸಲಾಗಿದ್ದು, ಎನ್‌ಡಿಪಿಎಸ್‌ ಕಾಯಿದೆಯಡಿ ಆರೋಪಿ ಎಂದು ಘೋಷಿಸಲು ಇದನ್ನು ಪರಿಗಣಿಸಲಾಗದು ಎಂದು ಪೀಠ ಹೇಳಿದೆ.

ಮುಂದುವರೆದು, ಎನ್‌ಡಿಪಿಎಸ್‌ ಕಾಯಿದೆಯ ಸೆಕ್ಷನ್‌ 67ರ ಅಡಿಯೂ ಸಹ ಈ ಅಧಿಕಾರಿಗಳ ಮುಂದೆ ನೀಡಲಾಗುವ ತಪ್ಪೊಪ್ಪಿಗೆ ಹೇಳಿಕೆಗಳನ್ನು ಸಾಕ್ಷಿ ಎಂದು ಪರಿಗಣಿಸಲಾಗದು ಎಂದೂ ನ್ಯಾಯಾಲಯ ಹೇಳಿದೆ.

ನ್ಯಾಯಮೂರ್ತಿಗಳಾದ ರೋಹಿಂಗ್ಟನ್‌ ಫಾಲಿ ನಾರಿಮನ್‌, ನವೀನ್‌ ಸಿನ್ಹಾ ಮತ್ತು ಇಂದಿರಾ ಬ್ಯಾನರ್ಜಿ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು 2013ರಲ್ಲಿ ವಿಭಾಗೀಯ ಪೀಠವು ಕೆಳಗಿನ ಎರಡು ವಿಚಾರಗಳಲ್ಲಿ ಮಾಡಿದ್ದ ಉಲ್ಲೇಖಕ್ಕೆ ಉತ್ತರಿಸುತ್ತಾ ಮೇಲಿನ ಅಂಶಗಳನ್ನು ವಿಷದಪಡಿಸಿತು. ವಿಭಾಗೀಯ ಪೀಠವು ಎತ್ತಿದ್ದ ಪ್ರಶ್ನೆಗಳು ಹೀಗಿವೆ:

  1. ಎನ್‌ಡಿಪಿಎಸ್‌ ಕಾಯಿದೆ ಅಡಿ ಪ್ರಕರಣದ ತನಿಖೆ ನಡೆಸುವ ಅಧಿಕಾರಿಯು ಪೊಲೀಸ್‌ ಅಧಿಕಾರಿಯ ಅರ್ಹತೆ ಹೊಂದಿರುತ್ತಾರೆಯೋ ಇಲ್ಲವೋ?

  2. ಕಾಯಿದೆಯ ಸೆಕ್ಷನ್‌ 67ರ ಅನ್ವಯ ಒಂದೊಮ್ಮೆ ಅಧಿಕಾರಿಯನ್ನು ಪೊಲೀಸ್‌ ಅಧಿಕಾರಿ ಎಂದು ಪರಿಗಣಿಸದಿದ್ದರೆ ಆಗ ತನಿಖಾಧಿಕಾರಿ ದಾಖಲಿಸಿಕೊಳ್ಳುವ ಹೇಳಿಕೆಯನ್ನು ತಪ್ಪೊಪ್ಪಿಗೆ ಹೇಳಿಕೆಯಾಗಿ ಅಥವಾ ಅಲ್ಲವಾಗಿ ಪರಿಗಣಿಸಲಾಗುವುದೇ?

ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ, ಎನ್‌ಡಿಪಿಎಸ್‌ ಕಾಯಿದೆ ಅಡಿ ದಾಖಲಿಸಿದ ಅಪರಾಧದ ವಿಚಾರಣೆಯಲ್ಲಿ ಕಾಯಿದೆಯ ಸೆಕ್ಷನ್‌ 67 ರ ಅಡಿ ದಾಖಲಿಸಲಾಗುವ ಹೇಳಿಕೆಯನ್ನು ತಪ್ಪೊಪ್ಪಿಗೆ ಹೇಳಿಕೆ ಎಂದು ಪರಿಗಣಿಸಲಾಗದು ಎಂದು ನ್ಯಾಯಮೂರ್ತಿಗಳಾದ ನಾರಿಮನ್‌ ಮತ್ತು ಸಿನ್ಹಾ ಹೇಳಿದರು. ಕಾಯಿದೆಯ ಸೆಕ್ಷನ್‌ 67 ಅನ್ನು ಕ್ರಿಮಿನಲ್‌ ಅಪರಾಧ ಸಂಹಿತೆ ಸೆಕ್ಷನ್‌ 163 (1)ಕ್ಕೆ ಹೋಲಿಕೆ ಮಾಡಲಾಗದು ಎಂದೂ ನ್ಯಾಯಾಲಯ ಹೇಳಿತು.

ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿ ಅವರು ತಮ್ಮ ಭಿನ್ನಾಭಿಪ್ರಾಯದ ತೀರ್ಪಿನಲ್ಲಿ “ಎನ್‌ಡಿಪಿಎಸ್‌ ಕಾಯಿದೆ ಸೆಕ್ಷನ್ 53 ರ ಅಡಿಯಲ್ಲಿ ತನಿಖಾಧಿಕಾರಿಗೆ ದೊರೆತಿರುವ ಅಧಿಕಾರದಿಂದ ಸಾಕ್ಷಿ ಕಾಯಿದೆಯ ಸೆಕ್ಷನ್‌ 25ರ ವ್ಯಾಖ್ಯಾನದಡಿ ಅಥವಾ ಸಾಕ್ಷಿ ಕಾಯಿದೆ 1872ರ ರೀತ್ಯಾ ಅವರನ್ನು ಪೊಲೀಸ್‌ ಅಧಿಕಾರಿಗಳೆಂದೂ ಹಾಗೂ ಸೆಕ್ಷನ್‌ 25 ಅಥವಾ 26ರ ಅಡಿ ಆ ಅಧಿಕಾರಿಗಳಿಗೆ ನೀಡಲಾಗುವ ತಪ್ಪೊಪ್ಪಿಗೆ ಹೇಳಿಕೆಯನ್ನು ನಿರ್ಬಂಧಿಸಲಾಗುತ್ತದೆ” ಎನ್ನುವ ಅಂಶವನ್ನು ಒಪ್ಪಲು ತಮಗೆ ಸಾಧ್ಯವಾಗಿಲ್ಲ ಎಂದಿದ್ದಾರೆ.

ನಿಷ್ಪಕ್ಷಪಾತ ನ್ಯಾಯಾಲಯ ಅಥವಾ ನ್ಯಾಯಾಧಿಕರಣದ ಅಡಿ ನ್ಯಾಯಯುತ ವಿಚಾರಣೆಯು ಯುಡಿಹೆಚ್ಆರ್ ಮಾನವ ಹಕ್ಕಾಗಿದೆ. ಮೂಲಭೂತ ಹಕ್ಕುಗಳು ಅಗತ್ಯವಾಗಿದೆ. ಅದೇ ಸಮಯದಲ್ಲಿ, ವಿಚಾರಣೆಯ ನ್ಯಾಯಸಮ್ಮತತೆಯನ್ನು ಆರೋಪಿಯ ದೃಷ್ಟಿಯಲ್ಲಿ ಮಾತ್ರವಲ್ಲ, ಸಮಾಜದಲ್ಲಿ ಸಂತ್ರಸ್ತರ ಸ್ಥಾನದಲ್ಲಿರುವವರ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ ಎಂದು ನ್ಯಾ. ಇಂದಿರಾ ಬ್ಯಾನರ್ಜಿ ಹೇಳಿದ್ದಾರೆ.

ಹೀಗೆ ಹೇಳುವ ಮೂಲಕ ಈ ಸಂಬಂಧದ ಅರ್ಜಿಗಳನ್ನು ಮತ್ತು ವಿಶೇಷ ಮನವಿಗಳನ್ನು ಅರ್ಹತೆಯ ಆಧಾರದಲಿ ವಿಲೇವಾರಿ ಮಾಡುವಂತೆ ವಿಭಾಗೀಯ ಪೀಠಗಳಿಗೆ ಸುಪ್ರೀಂ ಕೋರ್ಟ್‌ ಮರಳಿಸಿತು.

ಹಿರಿಯ ವಕೀಲರಾದ ಸುಶೀಲ್‌ ಕುಮಾರ್‌ ಜೈನ್‌, ಆನಂದ್‌ ಗ್ರೋವರ್‌ ಮತ್ತು ಎಸ್‌ ನಾಗಮುತ್ತು ಅವರು ವಿವಿಧ ಅರ್ಜಿದಾರರನ್ನು ಪ್ರತಿನಿಧಿಸಿದ್ದರು. ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅಮನ್‌ ಲೇಖಿ ಅವರು ಭಾರತ ಸರ್ಕಾರದ ಪರ ವಾದಿಸಿದರು.