ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪೆನಿಗಳು ಕಲ್ಪಿಸಿರುವ ಆಟೋರಿಕ್ಷಾ ಸೇವೆಗೆ ನ್ಯಾಯಯುತ ದರ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸೇವೆ ನೀಡುತ್ತಿರುವ ಕಂಪೆನಿಗಳ ಜೊತೆ ಸಭೆ ನಡೆಸಿ, ಒಮ್ಮತ ಸಾಧಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಓಲಾ ಮತ್ತು ಉಬರ್ ಇನ್ನು ಮುಂದೆ ತಮ್ಮ ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ನೀಡುವಂತಿಲ್ಲ. ತಕ್ಷಣ ಈ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಈಚೆಗೆ ನಿರ್ದೇಶಿಸಿರುವ ಆಕ್ಷೇಪಾರ್ಹ ಆದೇಶ ವಜಾ ಮಾಡುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಜಿ ಎಸ್ ಕಮಲ್ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಅಪ್ಲಿಕೇಶನ್ ಆಧಾರಿತ ಆಟೋರಿಕ್ಷಾ ಸೇವೆ ನೀಡುವುದಕ್ಕೆ ಪರವನಾಗಿ ಅಗತ್ಯವಿಲ್ಲ ಎಂದು ವಾದಿಸಲಾಗಿರುವ ಪ್ರಕರಣವು ವಿಭಾಗೀಯ ಪೀಠದ ಮುಂಚೆ ವಿಚಾರಣೆಗೆ ಬಾಕಿ ಇದೆ. ಓಲಾ ಮತ್ತು ಉಬರ್ ಆ್ಯಪ್ ಮೂಲಕ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಿರುವುದಕ್ಕೆ ರಾಜ್ಯ ಸರ್ಕಾರವು ಸಮಂಜಸವಾದ ಕಾರಣಗಳನ್ನು ನೀಡಿಲ್ಲ. ದರ ನಿಗದಿ ಮಾಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನಿಯಮ ರೂಪಿಸಿಲ್ಲ. ಹೀಗಿರುವಾಗ ಇಷ್ಟೇ ದರ ನಿಗದಿಪಡಿಸಬೇಕು ಎಂದು ಸರ್ಕಾರವು ಹೇಗೆ ಸೂಚಿಸುತ್ತದೆ” ಎಂದು ಆಕ್ಷೇಪಿಸಿದರು.
ಇದಕ್ಕೆ ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು “ಆಟೋರಿಕ್ಷಾ ಸೇವೆಯು ಟ್ಯಾಕ್ಸಿ ಸೇವೆಯಲ್ಲಿ ಬರುವುದಿಲ್ಲ. ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳು 2016ರ ನಿಯಮ 4ರ ಅಡಿ ಉಬರ್ ಮತ್ತು ಓಲಾ ಪರವಾನಗಿ ಪಡೆದಿಲ್ಲ. ಉಳಿದ ಆಟೋರಿಕ್ಷಾ ಸೇವೆಗೆ ರಾಜ್ಯ ಸರ್ಕಾರವು ನಿರ್ದಿಷ್ಟ ದರ ನಿಗದಿಪಡಿಸಿದೆ. ಆದರೆ, ಅಪ್ಲಿಕೇಶನ್ ಆಧಾರಿತ ಆಟೋರಿಕ್ಷಾ ಸೇವೆ ನೀಡುತ್ತಿರುವ ಕಂಪೆನಿಗಳು ಅದನ್ನು ಪಾಲಿಸುತ್ತಿಲ್ಲ” ಎಂದು ವಾದಿಸಿದರು.
“ಅರ್ಜಿದಾರರೊಂದಿಗೆ ಮತ್ತೊಮ್ಮೆ ಸಭೆ ನಡೆಸಿ, ಪರಿಹಾರ ಕ್ರಮಗಳನ್ನು ಬಗ್ಗೆ ಚರ್ಚಿಸಿ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗುವುದು” ಎಂದರು.
ಇದಕ್ಕೆ ಪೀಠವು “ಆಟೋರಿಕ್ಷಾ ಸೇವೆ ಬೆರಳು ತುದಿಯಲ್ಲಿ ಲಭ್ಯವಾಗುತ್ತಿದ್ದು, ಆರಾಮದಾಯಕವೂ ಆಗಿದೆ. ಆದರೆ, ಒಮ್ಮೆ ಬುಕ್ ಮಾಡಿ ರದ್ದು ಮಾಡಿದಲ್ಲಿ ಅದಕ್ಕೆ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದು ವಾಸ್ತವವಾಗಿದ್ದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ದರ ವಿಧಿಸುವ ವಿಚಾರದಲ್ಲಿ ಒಮ್ಮತದ ಅಭಿಪ್ರಾಯಕ್ಕೆ ಬರಬೇಕು” ಎಂದಿತು.
“ಸೇವೆ ಸ್ಥಗಿತಗೊಳಿಸುವುದರಿಂದ ಅಂತಿಮವಾಗಿ ಸಾರ್ವಜನಿಕರಿಗೆ ಅನನುಕೂಲವಾಗುತ್ತದೆ. ಅಂತೆಯೇ, ಪರವಾನಗಿ ಪಡೆಯದೆ ಆಟೋರಿಕ್ಷಾ ಸೇವೆ ಒದಗಿಸುವುದಕ್ಕೆ ಅವಕಾಶ ಇಲ್ಲ. ಹೆಚ್ಚಿನ ಪ್ರಯಾಣ ದರ ಪಡೆಯುವುದಕ್ಕೂ ಅವಕಾಶ ಇಲ್ಲ. ಈ ವಿಚಾರದಲ್ಲಿ ಪರಿಹಾರ ಕಂಡುಕೊಳ್ಳಬೇಕಿದೆ” ಎಂದು ಪೀಠವು ಮೌಖಿಕವಾಗಿ ಹೇಳಿತು.
ಅಪ್ಲಿಕೇಶನ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಕಂಪೆನಿಗಳು ಆಟೋರಿಕ್ಷಾ ಸೇವೆ ಒದಗಿಸುವುದು ಕಾನೂನುಬಾಹಿರ. ಕರ್ನಾಟಕ ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ಸ್ ನಿಯಮಗಳ ಅಡಿ ಟ್ಯಾಕ್ಸಿ ಸೇವೆ ಒದಗಿಸಲು ಕಂಪೆನಿಗಳಿಗೆ ಪರವಾನಗಿ ನೀಡಲಾಗಿದೆ. ಟ್ಯಾಕ್ಸಿ ಚಾಲಕ ಸೇರಿ ಏಳು ಮಂದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುವ ವಾಹನ ಆಗಿರಬಾರದು ಎಂಬ ಷರತ್ತು ವಿಧಿಸಲಾಗಿದೆ ಎಂದು ಸಾರಿಗೆ ಇಲಾಖೆ ನೋಟಿಸ್‌ನಲ್ಲಿ ತಿಳಿಸಿತ್ತು.