ರ‍್ಯಾಪಿಡೊ ಬೈಕ್‌ ಟ್ಯಾಕ್ಸಿ ವಶ: ಅಫಿಡವಿಟ್‌ ಸಲ್ಲಿಸಲು ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

2021ರ ಆಗಸ್ಟ್‌ 11ರಂದು ಕಂಪೆನಿಯ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಸಾರಿಗೆ ಇಲಾಖೆಗೆ ನಿರ್ದೇಶಿಸಿ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಮಾಡಿತ್ತು.
Karnataka High Court
Karnataka High Court
Published on

ರ‍್ಯಾಪಿಡೊ ಬೈಕ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಸಾರಿಗೆ ಇಲಾಖೆ ಉಲ್ಲಂಘಿಸಿದೆ ಎಂದು ಆಕ್ಷೇಪಿಸಿ ರೊಪ್ಪೆನ್‌ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್‌ ಲಿಮಿಟೆಡ್‌ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಮನವಿಗೆ ಸಂಬಂಧಿಸಿದಂತೆ ಅಫಿಡವಿಟ್‌ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠವು ನ್ಯಾಯಾಂಗ ನಿಂದನೆ ಮನವಿಗೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಅಫಿಡವಿಟ್‌ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಬಲವಂತದ ಕ್ರಮಕೈಗೊಳ್ಳಬಾರದು ಎಂದು ಸಾರಿಗೆ ಇಲಾಖೆಗೆ 2021ರ ಆಗಸ್ಟ್‌ 11ರಂದು ನಿರ್ದೇಶಿಸಿ ನ್ಯಾಯಾಲಯವು ಮಧ್ಯಂತರ ಆದೇಶ ಮಾಡಿದೆ. ಪೀಠದ ಆದೇಶ ಹೊರತಾಗಿಯೂ ಸಾರಿಗೆ ಇಲಾಖೆ ಹಲವು ವಾಹನಗಳನ್ನು ವಶಪಡಿಸಿಕೊಂಡಿದೆ” ಎಂದರು.

ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು “ನ್ಯಾಯಾಲಯದ ಮಧ್ಯಂತರ ಆದೇಶದ ಅನ್ವಯ ದೂರುದಾರ ಕಂಪೆನಿಯು ಕಾರ್ಯ ನಿರ್ವಹಿಸುತ್ತಿದೆ. ಇಂಧನ ಬಳಸಿದ ದ್ವಿಚಕ್ರ ವಾಹನವನ್ನು ಟ್ಯಾಕ್ಸಿ ರೂಪದಲ್ಲಿ ಓಡಿಸಲು ಅವಕಾಶ ಮಾಡಿಕೊಡುವ ಯಾವುದೇ ನಿಯಮಗಳು ಇಲ್ಲ. ಎಲೆಕ್ಟ್ರಿಕ್‌ ವಾಹನಗಳಿಗೆ ನಿಯಮ ಅನ್ವಯಿಸುತ್ತದೆ” ಎಂದರು.

“ದೂರುದಾರ ಕಂಪೆನಿಗೆ ಸೇರಿದ ಯಾವುದೇ ವಾಹನವನ್ನು ವಶಪಡಿಸಿಕೊಂಡಿಲ್ಲ ಎಂದು ಉಲ್ಲೇಖಿಸಿ ಅಫಿಡವಿಟ್‌ ಸಲ್ಲಿಸಲಾಗುವುದು. ಮಧ್ಯಂತರ ಆದೇಶದಲ್ಲಿ ಮಾರ್ಪಾಡು ಕೋರಿ ಏಕಸದಸ್ಯ ಪೀಠದ ಮುಂದೆ ಅರ್ಜಿ ಸಲ್ಲಿಸಲಾಗುವುದು” ಎಂದು ಪೀಠಕ್ಕೆ ತಿಳಿಸಿದರು.

ಪ್ರಕರಣದ ಹಿನ್ನೆಲೆ: ದ್ವಿಚಕ್ರ ಟ್ಯಾಕ್ಸಿ ಸೇವೆ ನೀಡುವುದಕ್ಕೆ ಅನುಮತಿ ನೀಡುವಂತೆ ಕೋರಿ ಕಂಪೆನಿಯು ಸಾರಿಗೆ ಇಲಾಖೆಗೆ ಅರ್ಜಿ ಸಲ್ಲಿಸಿತ್ತು. ಆದರೆ ಸಾರಿಗೆ ಇಲಾಖೆಯು ಕರ್ನಾಟಕ ಎಲೆಕ್ಟ್ರಿಸಿಟಿ ಬೈಕ್‌ ಟ್ಯಾಕ್ಸಿ ಯೋಜನೆ 2021ರಲ್ಲಿ ಉಲ್ಲೇಖಿಸಿರುವ ಪ್ರಾಧಿಕಾರದ ಮುಂದೆ ಅಗ್ರಿಗೇಟರ್‌ ಪರವಾನಗಿ ಕೋರಿ ಅರ್ಜಿ ಸಲ್ಲಿಸಬೇಕು ಎಂದು ಅರ್ಜಿದಾರರಿಗೆ ಪ್ರತ್ಯುತ್ತರ ನೀಡಿತ್ತು.

Also Read
ಓಲಾ ಬೈಕ್ ಟ್ಯಾಕ್ಸಿ ಸೇವೆಗೆ ಅನುಮತಿ; ದುರುದ್ದೇಶಪೂರಿತ ಕ್ರಮಕೈಗೊಳ್ಳದಂತೆ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ

ಸಂಬಂಧಿತ ಪ್ರಾಧಿಕಾರವು ಕಂಪೆನಿಯ ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅಗ್ರಿಗೇಟರ್‌ ಪರವಾನಗಿ ನೀಡಲು ಸಂಬಂಧಪಟ್ಟವರಿಗೆ ನಿರ್ದೇಶಿಸುವಂತೆ ಕೋರಿ ಏಕಸದಸ್ಯ ಪೀಠದ ಮುಂದೆ ಕಂಪೆನಿಯು ಅರ್ಜಿ ಸಲ್ಲಿಸಿತ್ತು.

ತಾನು ಸಾಮಾನ್ಯ ಬೈಕ್‌ ಟ್ಯಾಕ್ಸಿಗೆ ಅನುಮತಿ ಕೋರಿ ಮನವಿ ಸಲ್ಲಿಸಿದ್ದು, ಸಂಬಂಧಪಟ್ಟ ಪ್ರಾಧಿಕಾರವು ಕರ್ನಾಟಕ ಎಲೆಕ್ಟ್ರಿಸಿಟಿ ಬೈಕ್‌ ಟ್ಯಾಕ್ಸಿ ಯೋಜನೆ 2020-21 ಉಲ್ಲೇಖಿಸಿದ್ದು ವಿವೇಚನಾಯುತವಾಗಿ ತೀರ್ಮಾನ ಕೈಗೊಂಡಿಲ್ಲ ಎಂದು ಮನವಿಯಲ್ಲಿ ವಿವರಿಸಿತ್ತು. ಈ ಸಂಬಂಧ 2021ರ ಆಗಸ್ಟ್‌ 11ರಂದು ಕಂಪೆನಿಯ ವಿರುದ್ಧ ಯಾವುದೇ ಬಲವಂತದ ಕ್ರಮಕೈಗೊಳ್ಳದಂತೆ ಸಾರಿಗೆ ಇಲಾಖೆಗೆ ನಿರ್ದೇಶಿಸಿ ಏಕಸದಸ್ಯ ಪೀಠವು ಮಧ್ಯಂತರ ಆದೇಶ ಮಾಡಿತ್ತು.

Kannada Bar & Bench
kannada.barandbench.com