Marriage


 
ಸುದ್ದಿಗಳು

ಒಮಿಕ್ರಾನ್ ಪಿಡುಗು: ಆನ್‌ಲೈನ್‌ ವಿವಾಹಕ್ಕೆ ಅನುವು ಮಾಡಿಕೊಟ್ಟ ಕೇರಳ ಹೈಕೋರ್ಟ್

“ಇತರ ಪಕ್ಷಕಾರರಿಗೆ ನೀಡಲಾಗಿರುವ ಪ್ರಯೋಜನವನ್ನು ಅರ್ಜಿದಾರೆ ಮತ್ತು ಆಕೆ ಕೈಹಿಡಿಯುತ್ತಿರುವ ವರನಿಗೆ ನಿರಾಕರಿಸಲು ನನಗೆ ಯಾವುದೇ ಕಾರಣ ಇಲ್ಲ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

Bar & Bench

ಒಮಿಕ್ರಾನ್ ಸಾಂಕ್ರಾಮಿಕ ರೋಗದಿಂದಾಗಿ ವಿವಾಹವಾಗಲು ತೊಂದರೆ ಅನುಭವಿಸುತ್ತಿದ್ದ ದಂಪತಿಯ ನೆರವಿಗೆ ಕೇರಳ ಹೈಕೋರ್ಟ್ ಧಾವಿಸಿದೆ.

ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‌ಗೆ ತೆರಳಿದ್ದ ವಕೀಲ ಅನಂತ ಕೃಷ್ಣನ್‌ ಹರಿಕುಮಾರನ್‌ ನಾಯರ್‌ ಹಾಗೂ ಕೋಯಿಕ್ಕೋಡ್‌ ನಿವಾಸಿಯಾದ ವಕೀಲೆ ರಿಂಟು ಥಾಮಸ್‌ ಇದೇ ಡಿ. 23ರಂದು ವಿವಾಹವಾಗಬೇಕಿತ್ತು. ಈ ಹಿನ್ನೆಲೆಯಲ್ಲಿ ಅನಂತ ಕೃಷ್ಣನ್‌ ಅವರು ಡಿ. 22ರಂದು ವಿಮಾನದ ಟಿಕೆಟ್‌ ಬುಕ್‌ ಮಾಡಿದ್ದರು. ಆದರೆ ಒಮಿಕ್ರಾನ್‌ ಹಾವಳಿಯಿಂದಾಗಿ ಅವರು ಭಾರತಕ್ಕೆ ಮರಳಲು ಸಾಧ್ಯವಾಗಿರಲಿಲ್ಲ.

ರಿಂಟು ಅವರು ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಆನ್‌ಲೈನ್‌ ಮೂಲಕ ವಿವಾಹ ನೋಂದಣಿಗಾಗಿ ತಿರುವನಂತಪುರದ ಮಲಯಿನ್‌ಕೀಳು ಸಬ್‌ ರಿಜಿಸ್ಟ್ರಾರ್‌ ಕಚೇರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರೂ ಉದ್ದೇಶಿತ ಮದುವೆಯ ನೋಟಿಸ್‌ ಸಲ್ಲಿಸಿದ್ದರು.

ಮನವಿಯನ್ನು ಪುರಸ್ಕರಿಸಿದ ನ್ಯಾ. ಎನ್‌ ನಗರೇಶ್‌ ಅವರಿದ್ದ ಪೀಠ ಪಕ್ಷಕಾರರು ಭೌತಿಕವಾಗಿ ಮದುವೆಯಾಗಲು ಸಾಧ್ಯವಿಲ್ಲದಿದ್ದಾಗ ಆನ್‌ಲೈನ್‌ ಮದುವೆಗೆ ಅವಕಾಶ ನೀಡಬೇಕು ಎಂಬ ಹೈಕೋರ್ಟ್‌ನ ಈ ಹಿಂದಿನ ಆದೇಶವನ್ನು ಉಲ್ಲೇಖಿಸಿತು. ಈ ಹಿನ್ನೆಲೆಯಲ್ಲಿ ವಿಶೇಷ ವಿವಾಹ ಕಾಯಿದೆಯಡಿ ಮದುವೆಯನ್ನು ಆನ್‌ಲೈನ್‌ ವಿಧಾನದಲ್ಲಿ ಶಾಸ್ತ್ರೋಕ್ತವಾಗಿ ಆಚರಿಸಲು ಅಥವಾ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡುವಂತೆ ವಿವಾಹ ಅಧಿಕಾರಿಗೆ ಸೂಚಿಸಿತು.

“ಇತರ ಪಕ್ಷಕಾರರಿಗೆ ನೀಡಲಾಗಿರುವ ಪ್ರಯೋಜನವನ್ನು ಅರ್ಜಿದಾರೆ ಮತ್ತು ಆಕೆ ಕೈಹಿಡಿಯುತ್ತಿರುವ ವರನಿಗೆ ನಿರಾಕರಿಸಲು ನನಗೆ ಯಾವುದೇ ಕಾರಣ ಇಲ್ಲ” ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಆನ್‌ಲೈನ್‌ ಮೂಲಕ ಜೋಡಿ ವಿವಾಹವಾಗುವಾಗ ಸಾಕ್ಷಿಗಳು ಭೌತಿಕವಾಗಿ ಅಧಿಕಾರಿಗಳ ಎದುರು ಹಾಜರಿದ್ದು ಮದುವೆಯಾಗುತ್ತಿರುವವರನ್ನು ಗುರುತಿಸಬೇಕು. ವಿವಾಹಾಧಿಕಾರಿ ಮದುವೆಯ ದಿನಾಂಕ ಮತ್ತು ಸಮಯವನ್ನು ನಿಗದಿಪಡಿಸಿ ಆನ್‌ಲೈನ್‌ ವೇದಿಕೆ ಕಲ್ಪಿಸಬೇಕು. ಇದನ್ನು ಪಕ್ಷಕಾರರಿಗೆ ಮುಂಚಿತವಾಗಿ ತಿಳಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೆ ಶಾಸನಬದ್ಧ ಔಪಚಾರಿಕತೆಗಳನ್ನು ಪೂರ್ಣಗೊಳಿಸುವ ಸಂಬಂಧ ಸಾಧ್ಯವಾದಷ್ಟು ತ್ವರಿತವಾಗಿ ತನ್ನ ನಿರ್ದೇಶನಗಳನ್ನು ಅನುಸರಿಸುವಂತೆ ನ್ಯಾಯಾಲಯವು ವಿವಾಹ ಅಧಿಕಾರಿಗೆ ನಿರ್ದೇಶಿಸಿತು.