ಸರ್ಕಾರಿ ಹುದ್ದೆಗಳ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದ ಮರುದಿನವೇ ಡಿಎಂಕೆ ನಾಯಕ ಸೆಂಥಿಲ್ ಬಾಲಜಿ ಅವರಿಗೆ ತಮಿಳು ನಾಡು ಸರ್ಕಾರದಲ್ಲಿ ಮತ್ತೆ ಸಚಿವ ಸ್ಥಾನ ನೀಡಿರುವುದನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿದೆ.
ಬಾಲಾಜಿ ಅವರಿಗೆ ಮರಳಿ ಸಚಿವ ಸ್ಥಾನ ನೀಡಿದ್ದು, ಇದು ಅವರ ವಿರುದ್ಧ ಇನ್ನೂ ಬಾಕಿ ಇರುವ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸಾಕ್ಷಿಗಳನ್ನು ಬೆದರಿಸಲಿದೆಯೇ ಎಂದು ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಎ ಜಿ ಮಸೀಹ್ ಅವರಿದ್ದ ಪೀಠ ಕಳವಳ ಪಡಿಸಿತು.
"ನ್ಯಾಯಾಲಯ ಜಾಮೀನು ನೀಡುತ್ತದೆ; ನೀವು ಸಚಿವರಾಗಿಬಿಡುತ್ತೀರಾ? ನೀವು ಸಾಕ್ಷಿಗಳ ಮೇಲೆ ಒತ್ತಡ ಹೇರುತ್ತೀರಿ ಎಂದು ಯಾರಿಗೆ ಬೇಕಾದರೂ ಅನಿಸಬಹುದು. ಏನು ನಡೆಯುತ್ತಿದೆ ಇಲ್ಲಿ?" ಎಂದು ಅದು ಕಿಡಿಕಾರಿತು.
ನ್ಯಾಯಾಲಯ ಜಾಮೀನು ನೀಡಿದೆ, ಮರುದಿನವೇ ನೀವು ಸಚಿವರಾಗಿದ್ದೀರಿ! ಏನು ನಡೆಯುತ್ತಿದೆ ಇಲ್ಲಿ?ಸುಪ್ರೀಂ ಕೋರ್ಟ್
ಆದರೆ, ಇದೇ ವೇಳೆ ಸೆಂಥಿಲ್ ಅವರಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ನೀಡಲಾದ ಜಾಮೀನು ಹಿಂಪಡೆಯುವಂತೆ ಮಾಡಿದ್ದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.
ರಾಜ್ಯ ಸಂಪುಟ ಸಚಿವರಾಗಿರುವ ಸೆಂಥಿಲ್ ಅವರ ವಿರದ್ಧ ಯಾವುದೇ ಒತ್ತಡವಿಲ್ಲದೆ ಸಾಕ್ಷ್ಯ ನುಡಿಯಲು ಸಾಕ್ಷಿಗಳು ಸಿದ್ಧರೇ ಎಂಬುದನ್ನು ತಾನು ಪರಿಶೀಲಿಸುವುದಾಗಿ ನ್ಯಾಯಾಲಯ ಹೇಳಿತು. ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಅದು ತಮಿಳುನಾಡು ಸರ್ಕಾರಕ್ಕೆ ಸೂಚಿಸಿತು.
ಸೆಂಥಿಲ್ ಅವರನ್ನು ಜೂನ್ 14, 2023 ರಂದು ಬಂಧಿಸಲಾಗಿತ್ತು. ತಮಿಳುನಾಡು ಸಾರಿಗೆ ಇಲಾಖೆಯಲ್ಲಿ ಬಸ್ ನಿರ್ವಾಹಕರು, ಚಾಲಕರು ಹಾಗೂ ಕಿರಿಯ ಇಂಜಿನಿಯರ್‌ಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎನ್ನಲಾದ ಪ್ರಕರಣ ಇದಾಗಿದೆ. 2011 ರಿಂದ 2015 ರವರೆಗೆ ಎಐಎಡಿಎಂಕೆ ಸರ್ಕಾರದ ಅವಧಿಯಲ್ಲಿ ಸಾರಿಗೆ ಸಚಿವರಾಗಿದ್ದ ವೇಳೆ ಅವರ ವಿರುದ್ಧ ಅಕ್ರಮ ಹಣ ವರ್ಗಾವಣೆಯ ದೂರುಗಳು ಕೇಳಿಬಂದಿದ್ದವು.