ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2023ರಲ್ಲಿ ಬಂಧನಕ್ಕೊಳಗಾಗಿದ್ದ ಡಿಎಂಕೆ ನಾಯಕ ಮತ್ತು ತಮಿಳುನಾಡು ಮಾಜಿ ಸಚಿವ ವಿ ಸೆಂಥಿಲ್ ಬಾಲಾಜಿ ಅವರಿಗೆ ಸುಪ್ರೀಂ ಕೋರ್ಟ್ ಗುರುವಾರ ಜಾಮೀನು ನೀಡಿದೆ.
ವಿಚಾರಣೆ ವಿಳಂಬವಾಗುತ್ತದೆ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರಿದ್ದ ಪೀಠ ಕಠಿಣ ಷರತ್ತುಗಳನ್ನು ವಿಧಿಸಿ ಜಾಮೀನು ಆದೇಶ ಪ್ರಕಟಿಸಿತು.
ಬಾಲಾಜಿ ವಿರುದ್ಧದ ವಿಚಾರಣೆ ಇನ್ನಾದರೂ ಆರಂಭವಾಗುವ ಸಾಧ್ಯತೆ ಇದೆಯೇ ಎಂದು ಇದೇ ವೇಳೆ ಪೀಠ ಜಾರಿ ನಿರ್ದೇಶನಾಲಯವನ್ನು ತರಾಟೆಗೆ ತೆಗೆದುಕೊಂಡಿತು.
ಬಾಲಾಜಿ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟ್ಗಿ ಮತ್ತು ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರು . ಸಾಲಿಸಿಟರ್ ಜನರಲ್ (ಎಸ್‌ಜಿ) ತುಷಾರ್ ಮೆಹ್ತಾ ಮತ್ತು ವಿಶೇಷ ವಕೀಲ ಜೊಹೆಬ್ ಹೊಸೈನ್ ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದರು.
ಜಾಮೀನು ಕೋರಿ ತಾನು ಸಲ್ಲಿಸಿದ್ದ ಅರ್ಜಿಯನ್ನು ಫೆಬ್ರವರಿ 28 ರಂದು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ ನಂತರ ಬಾಲಾಜಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ಡಿಎಂಕೆ ನಾಯಕರಾದ ಬಾಲಾಜಿ ಅವರನ್ನು ಜೂನ್ 14, 2023 ರಂದು ಇಡಿ ಬಂಧಿಸಿತ್ತು. 2011ರಿಂದ 2015 ರವರೆಗೆ ಎಐಎಡಿಎಂಕೆ ಸರ್ಕಾರದಲ್ಲಿ ಬಾಲಾಜಿ ಸಚಿವರಾಗಿದ್ದಾಗ ತಮಿಳುನಾಡು ಸಾರಿಗೆ ಇಲಾಖೆಯ ಬಸ್ ನಿರ್ವಾಹಕರು, ಚಾಲಕರು ಮತ್ತು ಕಿರಿಯ ಇಂಜಿನಿಯರ್‌ಗಳ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದೆ ಎಂದು ದೂರಲಾಗಿತ್ತು. ಡಿಎಂಕೆ ಪಕ್ಷ ಸೇರಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾಗ ಅವರನ್ನು ಬಂಧಿಸಲಾಗಿತ್ತು.
ಈ ಹಿಂದೆ ಮೂರು ಬಾರಿ ಅವರ ಜಾಮೀನು ಅರ್ಜಿಯನ್ನು ಚೆನ್ನೈನ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತ್ತು. ನಂತರ ವೈದ್ಯಕೀಯ ನೆಲೆಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹೈಕೋರ್ಟ್ ತಿರಸ್ಕರಿಸಿತ್ತು. ಬಳಿಕ ಈ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.