Delhi High Court 
ಸುದ್ದಿಗಳು

ಯಾವಾಗಲಾದರೊಮ್ಮೆ ನಡೆಸುವ ವ್ಯಭಿಚಾರವು ಮಹಿಳೆಯನ್ನು ಜೀವನಾಂಶ ಪಡೆಯವುದರಿಂದ ಅನರ್ಹವಾಗಿಸದು: ದೆಹಲಿ ಹೈಕೋರ್ಟ್‌

ನಿರಂತರವಾಗಿ ಪದೇಪದೇ ನಡೆಸುವ ವ್ಯಭಿಚಾರ ಅಥವಾ ವ್ಯಭಿಚಾರಕ್ಕಾಗಿ ಒಟ್ಟಾಗಿ ಜೀವಿಸುವುದಕ್ಕೆ ಕಠಿಣವಾದ ಸಿಆರ್‌ಪಿಸಿ ಸೆಕ್ಷನ್‌ 125 (4) ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

Bar & Bench

ಯಾವಾಗಲಾದರೊಮ್ಮೆ ಏಕಾಂತದಲ್ಲಿ ನಡೆಸುವ ವ್ಯಭಿಚಾರವು ವ್ಯಭಿಚಾರಕ್ಕಾಗಿಯೇ ಒಟ್ಟಿಗೆ ಜೀವಿಸುವುದು (ಲಿವಿಂಗ್‌ ಇನ್ ಅಡಲ್ಟ್ರಿ) ಎಂದು ಪರಿಗಣಿತವಾಗುವುದಿಲ್ಲ. ಹೀಗಾಗಿ, ಇದು ವಿಚ್ಛೇದನದ ಬಳಿಕ ಮಹಿಳೆಯನ್ನು ಜೀವನಾಂಶ ಪಡೆಯವುದರಿಂದ ನಿರ್ಬಂಧಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ (ಪ್ರದೀಪ್‌ ಕುಮಾರ್‌ ಶರ್ಮಾ ವರ್ಸಸ್‌ ದೀಪಿಕಾ ಶರ್ಮಾ).

ವಿಚ್ಛೇದನದ ಬಳಿಕ ಸಿಆರ್‌ಪಿಸಿ ಸೆಕ್ಷನ್‌ 125ರ ಅಡಿ ಪತ್ನಿಗೆ ಜೀವನಾಂಶ ನೀಡುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಬದಿಗೆ ಸರಿಸುವಂತೆ ಕೋರಿ ಪತಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಚಂದ್ರ ಧಾರಿ ಸಿಂಗ್‌ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

“ನಿರಂತರವಾಗಿ ನಡೆಸುವ ವ್ಯಭಿಚಾರ ಅಥವಾ ವ್ಯಭಿಚಾರಕ್ಕಾಗಿಯೇ ಒಟ್ಟಾಗಿ ಇರುವುದಕ್ಕೆ ಕಠಿಣ ಸಿಆರ್‌ಪಿಸಿ ಸೆಕ್ಷನ್‌ 125 (4) ಅನ್ವಯಿಸುತ್ತದೆ ಎಂದು ಹಲವು ಹೈಕೋರ್ಟ್‌ಗಳು ಹೇಳಿವೆ” ಎಂದು ನ್ಯಾಯಾಲಯ ಹೇಳಿದೆ.

"ವ್ಯಭಿಚಾರಕ್ಕೆ ಸಂಬಂಧಿಸಿದಂತೆ ಭಿನ್ನ ಹೈಕೋರ್ಟ್‌ಗಳುತೀರ್ಪುಗಳನ್ನು ನೀಡಿದ್ದು, ಪತ್ನಿಗೆ ಜೀವನಾಂಶ ನೀಡುವುದಕ್ಕೆ ಸಂಬಂಧಿಸಿದಂತೆ ವಿಚಾರವನ್ನು ಪರಿಹರಿಸಿವೆ. ಸಿಆರ್‌ಪಿಸಿ ಸೆಕ್ಷನ್‌ 125(4) ಅನ್ನು ಅನ್ವಯಿಸಲು ಪತಿಯು ಪತ್ನಿ ಲಿವಿಂಗ್‌ ಇನ್‌ ವ್ಯಭಿಚಾರದಲ್ಲಿ ಭಾಗಿಯಾಗಿದ್ದಾಳೆ ಎಂಬುದನ್ನು ಖಚಿತ ಸಾಕ್ಷಿಯಿಂದ ಸಾಬೀತುಪಡಿಸಬೇಕು. ಹೀಗಾಗಿ, ಯಾವಾಗಲಾದರೊಮ್ಮೆ ಏಕಾಂತದಲ್ಲಿ ನಡೆಸಿದ ವ್ಯಭಿಚಾರವು ಲಿವಿಂಗ್‌ ಇನ್‌ ವ್ಯಭಿಚಾರವಲ್ಲ” ಎಂದು ನ್ಯಾಯಾಲಯ ಹೇಳಿದೆ.

ಸಿಆರ್‌ಪಿಸಿ ಸೆಕ್ಷನ್‌ 125 ಪತ್ನಿ, ಮಕ್ಕಳು ಮತ್ತು ಪೋಷಕರಿಗೆ ಜೀವನಾಂಶ ಪಡೆಯಲು ಅವಕಾಶ ಮಾಡಿಕೊಡುತ್ತದೆ. ಅದಾಗ್ಯೂ, ಪತ್ನಿಯು ಲಿವಿಂಗ್‌ ಇನ್ ವ್ಯಭಿಚಾರದಲ್ಲಿದ್ದರೆ, ಪ್ರತ್ಯೇಕವಾಗಿದ್ದರೆ ಅಥವಾ ಸಕಾರಣವಿಲ್ಲದೇ ತನ್ನ ಪತಿಯ ಜೊತೆ ನೆಲೆಸಲು ಪತ್ನಿ ನಿರಾಕರಿಸಿದರೆ ಆಗ ಆಕೆಯು ಪತಿಯಿಂದ ಜೀವನಾಂಶ ಕೋರಲು ಅರ್ಹವಾಗಿರುವುದಿಲ್ಲ.