Jagdeep Dhankar and CJI DY Chandrachud
Jagdeep Dhankar and CJI DY Chandrachud  
ಸುದ್ದಿಗಳು

ಸಿಜೆಐ ಡಿ ವೈ ಚಂದ್ರಚೂಡ್ ಅವರದ್ದು ಅತ್ಯಂತ ಪ್ರಬುದ್ಧ ವ್ಯಕ್ತಿತ್ವ: ಉಪರಾಷ್ಟ್ರಪತಿ ಜಗದೀಪ್ ಧನಕರ್ ಶ್ಲಾಘನೆ

Bar & Bench

ಭಾರತೀಯ ನ್ಯಾಯಾಂಗ ವಿಶೇಷವಾಗಿ ಸುಪ್ರೀಂ ಕೋರ್ಟ್‌ ಹಾಲಿ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್‌ ಅವರನ್ನು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಶ್ಲಾಘಿಸಿದ್ದಾರೆ.

ಲಂಡನ್‌ನಲ್ಲಿರುವ ಭಾರತೀಯರನ್ನುದ್ದೇಶಿಸಿ ಶನಿವಾರ ಅವರು ಮಾತನಾಡಿದರು. ಸಾಮಾನ್ಯ ವ್ಯಕ್ತಿಯ ಸಮಸ್ಯೆಗಳಿಗೆ ಅತ್ಯಂತ ಸಂವೇದನಾಶೀಲವಾಗಿ ಭಾರತದ ನ್ಯಾಯಾಲಯಗಳು ಸ್ಪಂದಿಸುತ್ತವೆ ಮತ್ತು ಪ್ರತಿಭಾನ್ವಿತ ಗಣ್ಯರು ನ್ಯಾಯಾಂಗದ ಚುಕ್ಕಾಣಿ ಹಿಡಿದಿದ್ದಾರೆ ಎಂದು ಅವರು ಹೇಳಿದರು.

“ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವಂತಹ ನ್ಯಾಯಾಂಗವನ್ನು ನೀವು ಇನ್ನೆಲ್ಲಿ ಕಾಣಲು ಸಾಧ್ಯ? ಪ್ರಸ್ತುತ ನಾವು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅತ್ಯಂತ ಪ್ರಬುದ್ಧ ವ್ಯಕ್ತಿತ್ವ ಹೊಂದಿರುವವರೊಬ್ಬರನ್ನು ಕಾಣಬಹುದು. ಅಪಾರ ಅನುಭವ, ಬದ್ಧತೆ, ಉತ್ಸಾಹ, ಧ್ಯೇಯವನ್ನು ಕಾರ್ಯಗತಗೊಳಿಸುವಂತಹವರು ಅವರು. ಅಗಾಧ ಪ್ರತಿಭಾವಂತ. ಅವರ ಆದೇಶಗಳನ್ನು ನೋಡಿದರೆ ಸಾಮಾನ್ಯರಿಗೆ ನ್ಯಾಯ ಒದಗಿಸಲು ಅವರು ಹಿಂದು-ಮುಂದು ನೋಡುವುದೇ ಇಲ್ಲ ಎಂದು ತಿಳಿಯುತ್ತದೆ” ಎಂಬುದಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಭಾರತದ ನ್ಯಾಯಾಂಗ ಅಪ್ರತಿಮ ವ್ಯಾಪ್ತಿಯನ್ನು ಹೊಂದಿದ ಬಲಿಷ್ಠ ಅಂಗ ಎಂದ ಅವರು ದೇಶದಲ್ಲಿ ದೃಢ ವ್ಯವಸ್ಥೆ ಹೊಂದಿರುವ ನ್ಯಾಯಾಂಗ ಪ್ರಸ್ತುತ ದೃಢ ಸಂಕಲ್ಪದಿಂದ ಕೂಡಿದ, ನೈತಿಕತೆಯುಳ್ಳ ಹಾಗೂ ಶಿಷ್ಟತೆಯಿಂದ ಕೂಡಿದ ವ್ಯಕ್ತಿಯ ನೇತೃತ್ವದಲ್ಲಿ ಸಾಗುತ್ತಿದೆ ಎಂದು ಅವರು ಹೇಳಿದರು.  

ಕುತೂಹಲದ ಸಂಗತಿ ಎಂದರೆ ಸಂವಿಧಾನ ಮೂಲರಚನೆಯ ಸಿದ್ಧಾಂತದ ವಿರುದ್ಧದ ಟೀಕೆಗಾಗಿ ಹಾಗೂ 2015ರಲ್ಲಿ ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗದ ಕಾಯಿದೆಯನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿದ್ದನ್ನು ವಿರೋಧಿಸಿದ್ದಕ್ಕೆ ಸಂಬಂಧಿಸಿದಂತೆ ಉಪರಾಷ್ಟ್ರಪತಿ ಇತ್ತೀಚೆಗೆ ಸುದ್ದಿಯಲ್ಲಿದ್ದರು.

ಆ ಸಂದರ್ಭದಲ್ಲಿ ಸಿಜೆಐ ಚಂದ್ರಚೂಡ್‌ ಅವರು ಸಂವಿಧಾನದ ಮೂಲರಚನಾ ಸಿದ್ಧಾಂತ ನ್ಯಾಯಾಧೀಶರ ಪಾಲಿನ ಧ್ರುವತಾರೆ ಇದ್ದಂತೆ ಎಂದು ಪರೋಕ್ಷವಾಗಿ ಪ್ರತಿಕ್ರಿಯಿಸಿದ್ದರು.