ಮಾನಸಿಕ ಆರೋಗ್ಯ ಸೌಲಭ್ಯದ ಕುರಿತಾದ ಜಿಲ್ಲಾವಾರು ವರೆಗಿನ ದೇಶಾದ್ಯಂತ ಲಭ್ಯವಿರುವ ನಿಜಕಾಲೀನ (ರಿಯಲ್ ಟೈಮ್) ಮಾಹಿತಿ ನೀಡುವ ಆನ್‌ಲೈನ್ ಪೋರ್ಟಲ್ ಸ್ಥಾಪಿಸಲು ಟೆಂಡರ್ ಕರೆಯಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಮಾನಸಿಕ ಆರೋಗ್ಯ ಸೌಲಭ್ಯಗಳ ಬಗ್ಗೆ ನಿಜಕಾಲೀನ ಮಾಹಿತಿಯನ್ನು ಒದಗಿಸಲು ಪೋರ್ಟಲ್‌ನಲ್ಲಿ ಡ್ಯಾಶ್‌ಬೋರ್ಡ್ ಇರಲಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಮಾಧವಿ ದಿವಾನ್ ಅವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠಕ್ಕೆ ತಿಳಿಸಿದರು.
ಈ ಸಂಬಂಧ ಇನ್ನು 15 ದಿನಗಳಲ್ಲಿ ಪ್ರಾತ್ಯಕ್ಷಿಕೆ ನಡೆಯಲಿದ್ದು ಎಲ್ಲಾ ರಾಜ್ಯ ಸರ್ಕಾರಗಳಿಗೆ ಆಹ್ವಾನ ನೀಡಲಾಗಿದೆ. ಒಂದು ತಿಂಗಳಲ್ಲಿ ಪೋರ್ಟಲ್ ಕಾರ್ಯಾರಂಭ ಮಾಡಲಿದೆ ಎಂದು ಎಎಸ್‌ಜಿ ತಿಳಿಸಿದರು.
ಬಳಿಕ ಸುಪ್ರೀಂ ಕೋರ್ಟ್ ಪೋರ್ಟಲ್ ಕಾರ್ಯಾರಂಭ ಮಾಡಿದ್ದಕ್ಕೆ ಸಂಬಂಧಿಸಿದ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತು.
ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಹುಸೇನ್ ಟೆಕ್ರಿ ದೇಗುಲದ ಬಳಿ ಇರುವ ಮಾನಸಿಕ ಆರೋಗ್ಯ ಕೇಂದ್ರದಲ್ಲಿನ ಅಸ್ವಸ್ಥರಿಗೆ ಹಾಕಲಾಗಿರುವ ಸರಪಳಿಗಳನ್ನು ತೆಗೆದುಹಾಕಲು ನಿರ್ದೇಶನ ನೀಡಲು ಕೋರಿ ವಕೀಲ ಗೌರವ್ ಕುಮಾರ್ ಬನ್ಸಾಲ್ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಮಾನಸಿಕ ಆರೋಗ್ಯ ಕಾಯಿದೆ- 2017ರ ಸೆಕ್ಷನ್ 95ರ ಅಡಿಯಲ್ಲಿ ಮಾನಸಿಕ ಅಸ್ವಸ್ಥರನ್ನು ಕಟ್ಟಿಹಾಕುವುದನ್ನು ನಿಷೇಧಿಸಲಾಗಿದೆ. ಹೀಗೆ ಮಾಡುವುದನ್ನು "ದುಷ್ಕೃತ್ಯ" ಮತ್ತು "ಅಮಾನವೀಯ" ಎಂದು ಸುಪ್ರೀಂ ಕೋರ್ಟ್ 2019ರಲ್ಲಿ ಹೇಳಿತ್ತು.
ಪ್ರಸ್ತಾವಿತ ಪೋರ್ಟಲ್‌ನ ಕರಡಿನ ಪ್ರಕಾರ, ಇದು ಮಾನಸಿಕ ಆರೋಗ್ಯ ಸಂಸ್ಥೆಗಳಲ್ಲಿನ ಹಾಸಿಗೆಗಳ ಲಭ್ಯತೆ, ಒದಗಿಸಲಾಗುವ ಸೌಲಭ್ಯ, ವ್ಯಾಪ್ತಿ, ಸಾಮರ್ಥ್ಯ, ಪುನರ್‌ವಸತಿ ಕೇಂದ್ರಗಳ ಪ್ರದೇಶವಾರು ಹಂಚಿಕೆಯ ವಿವರಗಳನ್ನು ಒಳಗೊಂಡಿರುತ್ತದೆ. ಪುನರ್‌ವಸತಿ ಕೇಂದ್ರದ ಲಭ್ಯತೆಯ ಮಾಹಿತಿಯನ್ನು ಆನ್‌ಲೈನ್ ಡ್ಯಾಶ್‌ಬೋರ್ಡ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.