Karnataka High Court
Karnataka High Court 
ಸುದ್ದಿಗಳು

ಕೋವಿಡ್: ಆನ್‌ಲೈನ್ ಪರೀಕ್ಷೆಗಳು ಅಸಮಂಜಸವಲ್ಲ, ವಿದ್ಯಾರ್ಥಿಗಳ ಹಿತದೃಷ್ಟಿಗೆ ವಿರುದ್ಧವಲ್ಲ ಎಂದ ಹೈಕೋರ್ಟ್

Bar & Bench

ಕೋವಿಡ್ ಹಿನ್ನೆಲೆಯಲ್ಲಿ ಭೌತಿಕ ಪರೀಕ್ಷೆಯ ಬದಲಾಗಿ ಆನ್‌ಲೈನ್ ಪರೀಕ್ಷೆ ನಡೆಸುವುದು ಅಸಮಂಜಸ ಅಥವಾ ವಿದ್ಯಾರ್ಥಿಗಳ ಹಿತಾಸಕ್ತಿಗೆ ವಿರುದ್ಧ ಎಂಬುದು ಸಲ್ಲ ಎಂದು ಕರ್ನಾಟಕ ಹೈಕೊರ್ಟ್‌ ಹೇಳಿದೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಸೆಪ್ಟೆಂಬರ್ 2ರಿಂದ 18ರ ವರೆಗೆ ಸೆಮಿಸ್ಟರ್ ಪರೀಕ್ಷೆ ನಡೆಸಲು ಉದ್ದೇಶಿಸಿರುವುದನ್ನು ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ರವಿ ವಿ ಹೊಸಮನಿ ನೇತೃತ್ವದ ವಿಭಾಗೀಯ ಪೀಠವು ಮೇಲಿನ ಆದೇಶ ಹೊರಡಿಸಿತು.

ತನ್ನ ಆದೇಶದಲ್ಲಿ ನ್ಯಾಯಪೀಠವು ಹೀಗೆ ಹೇಳಿದೆ,

"ವಿದ್ಯಾರ್ಥಿಗಳು ವಿಶ್ವವಿದ್ಯಾಲಯದೊಳಗೆ ಭೌತಿಕವಾಗಿ ಪರೀಕ್ಷೆಯಲ್ಲಿ ಪಾಲ್ಗೊಂಡರೆ ಜಮಾವಣೆಯಿಂದ ಉದ್ಭವಿಸುವಂತಹ ಅಪಾಯಗಳು ಹೆಚ್ಚಿರುತ್ತವೆ. ಅತಿಹೆಚ್ಚಿನ ರಕ್ಷಣಾ ಕ್ರಮಗಳನ್ನು ಕೈಗೊಂಡರೂ ಸಹ ಕೆಲವು ಸಂದರ್ಭಗಳಲ್ಲಿ ಪರೀಕ್ಷೆಗಳನ್ನು ನಡೆಸುವಾಗ ಅಂತಹ ರಕ್ಷಣಾ ಕ್ರಮಗಳನ್ನು ಅಳವಡಿಸುವುದಾಗಲಿ, ಪಾಲಿಸುವುದಾಗಲಿ ಅನೇಕ ಸಾರಿ ವಿದ್ಯಾರ್ಥಿಗಳಿಂದಲೇ ಸಾಧ್ಯವಾಗದೆ ಹೋಗುವುದನ್ನು ಗಮನಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳೂ ಸೇರಿದಂತೆ ಎಲ್ಲ ಪಾಲುದಾರರೂ ರೋಗದ ಅಪಾಯಕ್ಕೆ ಈಡಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ, ಈ ಸೆಮಿಸ್ಪರ್‌ಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸುವ ಸಾಮಾನ್ಯ ವಿಧಿ, ವಿಧಾನಗಳಿಂದ ದೂರಾಗುವುದು ಲೋಪ ಎಂದಾಗಲಿ, ಅಸಮಂಜಸ ಎಂದಾಗಲಿ, ವಿದ್ಯಾರ್ಥಿಗಳ ಮತ್ತು ಇತರೆ ಭಾಗೀದಾರರ ಹಿತಾಸಕ್ತಿಗೆ ವಿರುದ್ಧ ಎಂದಾಗಲಿ ನಮಗೆ ಅನಿಸುವುದಿಲ್ಲ."
ಕರ್ನಾಟಕ ಹೈಕೋರ್ಟ್

ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು, “ಪರೀಕ್ಷಾ ನಿಯಮಾವಳಿಗಳಿಗೆ ವಿರುದ್ಧವಾಗಿ ಪರೀಕ್ಷೆ ನಡೆಸುವ ವಿಧಾನ ಮತ್ತು ರೀತಿಯನ್ನು ಬದಲಾಯಿಸಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಲಿದೆ. ಆನ್ ಲೈನ್ ಪರೀಕ್ಷೆಯಲ್ಲಿ ಭಾಗವಹಿಸಲು ಅವರಿಗೆ ತಾಂತ್ರಿಕ ಸೌಲಭ್ಯಗಳಿಲ್ಲ. ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಯಿದ್ದು, ವಿದ್ಯುತ್ ವ್ಯತ್ಯಯವಾದರೆ ಅಂಥ ವಿದ್ಯಾರ್ಥಿ ಪರೀಕ್ಷೆ ಬರೆಯಲಾಗದು” ಎಂದು ವಾದಿಸಿದರು.

ಇದನ್ನು ವಿರೋಧಿಸಿದ ವಿಶ್ವವಿದ್ಯಾಲಯದ ಪರ ವಕೀಲ ಆರ್ ಶ್ರೀನಿವಾಸ ಗೌಡ ಅವರು, “ಭಾರತೀಯ ಕೃಷಿ ಸಂಶೋಧನಾ ಒಕ್ಕೂಟ (ಐಸಿಎಆರ್‌) ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲು ಒಪ್ಪಿಗೆ ನೀಡಿದೆ. ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ಬಳಕೆ ತಿಳಿದಿದೆ. ವೈದ್ಯಕೀಯ ಕಾರಣಗಳಿಂದ ಪರೀಕ್ಷೆ ಬರೆಯಲಾಗದ ವಿದ್ಯಾರ್ಥಿಗಳಿಗೆ ರಕ್ಷಣೆ ಒದಗಿಸಲಾಗುವುದು. ಕೋವಿಡ್ ಹಿನ್ನೆಲೆಯಲ್ಲಿ ಇದೊಂದು ಬಾರಿಗೆ ಈ ಸೆಮಿಸ್ಟರ್‌ನಲ್ಲಿ ಕಡಿಮೆ ಅಂಕಗಳಿಸಿದರೂ ಅವರನ್ನು ಮುಂದಿನ ಸೆಮಿಸ್ಟರ್‌ಗೆ ಉತ್ತೀರ್ಣಗೊಳಿಸಲಾಗುವುದು” ಎಂದರು.

ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಲಯದ ಆದೇಶ ಇಂತಿದೆ,

“ಇಂದಿನ ಸಂದರ್ಭದಲ್ಲಿ ಪ್ರತಿವಾದಿಯಾದ ವಿಶ್ವವಿದ್ಯಾಲಯವು ಪರೀಕ್ಷಾ ಸ್ವರೂಪವನ್ನು ಬದಲಿಸಿ ಆನ್‌ಲೈನ್ ಪರೀಕ್ಷೆ ನಿಗದಿಗೊಳಿಸಿದ್ದು, ಸದರಿ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವ ರಾಜ್ಯದ ವಿಭಿನ್ನ ಪ್ರದೇಶಗಳ ವಿದ್ಯಾರ್ಥಿಗಳು ತಮಗೆ ಅನುಕೂಲಕರವಾದ ಮನೆ ಅಥವಾ ತಾಂತ್ರಿಕ ಸೌಲಭ್ಯ ಇರುವ ಪ್ರದೇಶದಲ್ಲಿ ಕುಳಿತು ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು”.
ಕರ್ನಾಟಕ ಹೈಕೋರ್ಟ್‌

ವಿದ್ಯುತ್ ಪೂರೈಕೆ ಅತಂತ್ರತೆಯ ಬಗ್ಗೆ ಅರ್ಜಿದಾರರು ಗಮನಸೆಳೆದಿದ್ದಕ್ಕೆ ನ್ಯಾಯಾಲಯವು ಹೀಗೆ ಹೇಳಿತು,

“... ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸದಿಂದ ಆನ್ ಲೈನ್ ಪರೀಕ್ಷೆಯಲ್ಲಿ ಭಾಗವಹಿಸಲಾಗದಿರುವುದು ಸೇರಿದಂತೆ ನೈಜ ಕಾರಣಗಳಿಂದ ಅಥವಾ ನಾವು ಈಗ ಉಲ್ಲೇಖಿಸದ ನೈಜ ಕಾರಣಗಳಿಂದ ಪರೀಕ್ಷೆಯಲ್ಲಿ ಭಾಗವಹಿಸಲಾಗದಿದ್ದರೆ ವಿದ್ಯಾರ್ಥಿಗಳು ಸಂಬಂಧಿತ ದಾಖಲೆಗಳೊಂದಿಗೆ ವಿಶ್ವವಿದ್ಯಾಲಯದ ಗಮನಸೆಳೆಯಬಹುದು. ಆಗ ಸೂಕ್ತವೆನಿಸಿದ ಪ್ರಕರಣಗಳಲ್ಲಿ ಪರೀಕ್ಷೆ ಬರೆಯುವುದರಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಮುಂದೆ ಆ ಪರೀಕ್ಷೆ ನಡೆಯುವಾಗ ಅವಕಾಶ ಕಲ್ಪಿಸಬಹುದು.”

ಇದರ ಜೊತೆಗೆ ಪರೀಕ್ಷೆ ಬರೆಯಲು ವಿಫಲವಾದ ವಿದ್ಯಾರ್ಥಿಗಳಿಗೆ ಸಕಾರಣ ಕಂಡು ಬಂದಲ್ಲಿ ಮುಂದಿನ ಸೆಮಿಸ್ಟರ್ ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು. ಆನ್‌ಲೈನ್ ಪರೀಕ್ಷೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿ ಅಂಕ ಸುಧಾರಣೆ ಬಯಸಿದಲ್ಲಿ ಅವರಿಗೆ ಮತ್ತೊಂದು ಅವಕಾಶ ಕಲ್ಪಿಸಬೇಕು ಎಂದು ನ್ಯಾಯಪೀಠ ಹೇಳಿತು.

ರಿಟ್ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸುವ ಕುರಿತಾಗಿ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯವು “ಪಿಐಎಲ್ ದಾಖಲಿಸುವವರೂ ಸಾರ್ವಜನಿಕ ಹಿತಾಸಕ್ತಿಯಿಂದ ನ್ಯಾಯಾಲಯ ನೀಡುವ ಆದೇಶಗಳ ಫಲಾನುಭವಿಗಳಾಗಿರುತ್ತಾರೆ. ಆಗ ಅದನ್ನು ಪಿಐಎಲ್ ಎನ್ನಲಾಗದು. ಆದರೆ, ಅದನ್ನು ವೈಯಕ್ತಿಕ ಹಿತಾಸಕ್ತಿ ಹೊಂದಿದ ಅರ್ಜಿ ಎನ್ನಬಹುದು” ಎಂದಿತು. ಪ್ರಸಕ್ತ ಪ್ರಕರಣದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ದಿಷ್ಟ ವಿಷಯವನ್ನು ಪಕ್ಕಕ್ಕೆ ಸರಿಸಲಾಗಿದೆ. ಆದರೆ, ಈ ಆದೇಶವನ್ನು ನಿದರ್ಶನವನ್ನಾಗಿ ಪರಿಗಣಿಸಬಾರದು ಎಂದಿತು.