ಆನ್‌ಲೈನ್-ಆಫ್‌ಲೈನ್ ಅಕ್ರಮ ಬೆಟ್ಟಿಂಗ್ ಆರೋಪದಲ್ಲಿ ಜಾರಿ ನಿರ್ದೇಶನಾಲಯದ ಬಂಧನಕ್ಕೆ ಒಳಗಾಗಿರುವ ಶಾಸಕ ಕೆ ಸಿ ವೀರೇಂದ್ರಗೆ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ಅನುಮತಿಸಿದೆ.
ವೀರೇಂದ್ರ ಪಪ್ಪಿ ಅವರ ಬಂಧನ ಅಕ್ರಮ ಎಂದು ಘೋಷಿಸುವಂತೆ ಕೋರಿ ಪತ್ನಿ ಆರ್ ಡಿ ಚೈತ್ರಾ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ಐ ಅರುಣ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಪಕ್ಷಕಾರರ ವಾದ-ಪ್ರತಿವಾದ ಆಲಿಕೆ ಪೂರ್ಣಗೊಳಿಸಿದ್ದು, ಅಕ್ಟೋಬರ್ 9ರಂದು ತೀರ್ಪು ಪ್ರಕಟಿಸಲಿದೆ.
ಅರ್ಜಿದಾರರ ಪರ ಹಿರಿಯ ವಕೀಲ ಕಿರಣ್ ಜವಳಿ ಅವರು “ದಸರಾ ಹಬ್ಬದ ಹಿನ್ನೆಲೆಯಲ್ಲಿ ಎರಡು ದಿನ ಮಧ್ಯಂತರ ಜಾಮೀನು ನೀಡುವಂತೆ ಕಳೆದ ವಿಚಾರಣೆ ವೇಳೆ ಪೀಠವನ್ನು ಕೋರಲಾಗಿತ್ತು. ನ್ಯಾಯಾಲಯವು ಕೇಂದ್ರ ಸರ್ಕಾರದ ವಕೀಲರಿಗೆ ಆ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿತ್ತು” ಎಂದರು.
ಅದಕ್ಕೆ ಕೇಂದ್ರ ಸರ್ಕಾರದ ವಕೀಲರು, “ಅರ್ಜಿದಾರರ ಪತಿಗೆ ಜಾಮೀನು ಅಗತ್ಯವಿದ್ದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಏಕಾಏಕಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗದು ಮತ್ತು ಮಧ್ಯಂತರ ಜಾಮೀನು ಮಂಜೂರು ಮಾಡಬಾರದು” ಎಂದಿತು.
ಆಗ ಕಿರಣ್ ಜವಳಿ ಅವರು “ಹಾಗಿದ್ದರೆ ವಿಚಾರಣಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ನೀಡಬೇಕು” ಎಂದು ಕೋರಿದರು. ಅದಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
ಕಳೆದ ವಿಚಾರಣೆಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ವೀರೇಂದ್ರ ಬಂಧನ ಕಾನೂನು ಬದ್ಧವಾಗಿಯೇ ಇದೆ. ಅರ್ಜಿದಾರರ ಪತಿ ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ. ಆರೋಪ ಸಂಬಂಧ ಆರು ಎಫ್‌ಐಆರ್ ದಾಖಲಾಗಿದ್ದು, ಆರೋಪ ಪಟ್ಟಿ ಸಲ್ಲಿಸಲಾಗಿದೆ. ಅವರ ಪತಿಯಿಂದ ವಶಪಡಿಸಿಕೊಂಡಿರುವ ಮೊಬೈಲ್ ಫೋನ್‌ನಲ್ಲಿ ಹಣ ಕಳೆದುಕೊಂಡಿರುವವರ ನೋವಿನ ಮಾತುಗಳಿವೆ. ನಾವು ಹಣ ಕಳೆದುಕೊಂಡಿದ್ದೇವೆ. ನಮಗೆ ಬದುಕುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೇವೆ ಎಂಬ ಸಂದೇಶಗಳಿವೆ. ಇದು ವಂಚನೆ ಮಾಡಿರುವ ಅಂಶಗಳನ್ನು ವಿವರಿಸಲಿದೆ” ಎಂದಿದ್ದರು.
“ವೀರೇಂದ್ರ ಅವರು ನಡೆಸಿರುವ ಅಪರಾಧ ಕೃತ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಆದಾಯ ಗಳಿಸಿದ್ದಾರೆ. ಅವರು ಗೋವಾ ಮತ್ತು ದುಬೈನಲ್ಲಿ ಮನೆಗಳನ್ನು ಮಾಡಿಕೊಂಡಿರುವುದು ವಿಚಾರಣೆ ವೇಳೆ ಗೊತ್ತಾಗಿದ್ದು, ಅದಕ್ಕೆ ಸಾಕ್ಷ್ಯಾಧಾರಗಳಿವೆ. ಅಲ್ಲದೇ, ವೀರೇಂದ್ರ ಅವರನ್ನು ನ್ಯಾಯಾಲಯದ ಮೂಲಕ ರಿಮ್ಯಾಂಡ್ ಆದೇಶ ಪಡೆದು ಬಂಧನಕ್ಕೊಳಪಡಿಸಲಾಗಿದೆ. ಅಲ್ಲದೆ, ಕಾನೂನು ಪ್ರಕಾರವೇ ಬಂಧನ ಮಾಡಲಾಗಿದೆ. ಹೀಗಾಗಿ, ಅಕ್ರಮ ಬಂಧನ” ಎನ್ನಲಾಗದು ಎಂದು ಸಮರ್ಥನೆ ನೀಡಿದ್ದರು.