Karnataka HC and Verappan 
ಸುದ್ದಿಗಳು

[ವೀರಪ್ಪನ್‌ ಕಾರ್ಯಾಚರಣೆ] ಜೆಎಸ್‌ಟಿಎಫ್‌ ಕಿರುಕುಳಕ್ಕೆ ಒಳಗಾದ ಸಂತ್ರಸ್ತರಿಗೆ ಪರಿಹಾರ: ಸರ್ಕಾರಕ್ಕೆ ನೋಟಿಸ್‌

ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆ ವೇಳೆ ಜೆಎಸ್‌ಟಿಎಫ್‌ ಕಿರುಕುಳದಿಂದ ಸಂತ್ರಸ್ತರಾದ 89 ಮಂದಿಗೆ ಎನ್‌ಎಚ್‌ಆರ್‌ಸಿಯು ತಲಾ ₹5 ಕೋಟಿಯಂತೆ ₹10 ಕೋಟಿ ಪರಿಹಾರ ನೀಡಲು ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ಆದೇಶಿಸಿತ್ತು.

Bar & Bench

ಕಾಡುಗಳ್ಳ ವೀರಪ್ಪನ್ ಸೆರೆಹಿಡಿಯವ ಕಾರ್ಯಾಚರಣೆ ವೇಳೆ ಕರ್ನಾಟಕ-ತಮಿಳುನಾಡು ಜಂಟಿ ವಿಶೇಷ ಕಾರ್ಯಪಡೆಯ (ಜೆಎಸ್‌ಟಿಎಫ್‌) ಕಿರುಕುಳಕ್ಕೆ ಒಳಗಾದ 89 ಸಂತ್ರಸ್ತರಿಗೆ ಬಾಕಿ ಪರಿಹಾರ ಮೊತ್ತವನ್ನು ಬಿಡುಗಡೆಗೊಳಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಸಂತ್ರಸ್ತರ ನ್ಯಾಯಾಕ್ಕಾಗಿ ಹೋರಾಟ ಮಾಡುತ್ತಿರುವ ತಮಿಳುನಾಡು ಮೂಲದ ವಿಡಿಯಾಳ್ ಪೀಪಲ್ ವೆಲ್‌ಫೇರ್‌ ಫೌಂಡೇಷನ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠವು ಅರ್ಜಿ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿ ವಿಚಾರಣೆಯನ್ನು ಫೆಬ್ರವರಿ 11ಕ್ಕೆ ಮುಂದೂಡಿದೆ.

ವೀರಪ್ಪನ್‌ ವಿರುದ್ಧ ಕಾರ್ಯಾಚರಣೆ ವೇಳೆ ವಿಶೇಷ ಕಾರ್ಯಾಪಡೆಯ ಕಿರುಕುಳ, ಅಮಾನವೀಯ ವರ್ತನೆಯಿಂದಾಗಿ ಸಂತ್ರಸ್ತರಾದ 89 ಮಂದಿಯನ್ನು ಗುರುತಿಸಿದ್ದ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಕ್ಕೆ ತಲಾ ₹5 ಕೋಟಿಯಂತೆ ₹10 ಕೋಟಿ ಪರಿಹಾರ ನೀಡಲು ಆದೇಶಿಸಿತ್ತು. ಎರಡೂ ಸರ್ಕಾರಗಳು ಸೇರಿ ಇಲ್ಲಿವರೆಗೆ ಕೇವಲ ₹2.80 ಕೋಟಿ ಮಾತ್ರ ಬಿಡುಗಡೆ ಮಾಡಿವೆ. ಬಾಕಿ ಹಣ ಬಿಡುಗಡೆ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿದಾರರ ಮನವಿಯವನ್ನು ಪರಿಗಣಿಸುವಂತೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ. ಆದರೆ, ಕರ್ನಾಟಕ ಸರ್ಕಾರ ಬಾಕಿ ಪರಿಹಾರ ನೀಡಲು ನಿರಾಕರಿಸಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.