ಮೂವತ್ತು ವರ್ಷಗಳ ಹಿಂದೆ ಕಾಡುಗಳ್ಳ ವೀರಪ್ಪನ್ ನಡೆಸಿದ್ದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರ ಮಗನಿಗೆ ಸಾಕಷ್ಟು ಭರವಸೆಗಳ ಹೊರತಾಗಿಯೂ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ಕಲ್ಪಿಸದ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಕೊಳ್ಳೇಗಾಲದ ರಾಮಾಪುರ ಪೊಲೀಸ್ ಠಾಣೆಯ ಮೇಲೆ 1992ರಲ್ಲಿ ಕಾಡುಗಳ್ಳ ವೀರಪ್ಪನ್ ದಾಳಿ ನಡೆಸಿದ್ದ ಸಂದರ್ಭದಲ್ಲಿ ಕಾನ್‌ಸ್ಟೆಬಲ್ ರಾಚಪ್ಪ ಸೇರಿ ಐವರು ಪೊಲೀಸರು ಮೃತಪಟ್ಟಿದ್ದರು. ರಾಚಪ್ಪ ಅವರ ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವುದಾಗಿ ಪೊಲೀಸ್ ಇಲಾಖೆ ಭರವಸೆ ನೀಡಿತ್ತಾದರೂ, ಈವರೆಗೂ ಉದ್ಯೋಗ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಚಪ್ಪ ಪುತ್ರ ಆರ್ ನಂದೀಶ್ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾ. ಎಚ್ ಟಿ ನರೇಂದ್ರ ಪ್ರಸಾದ್ ಅವರಿದ್ದ ಪೀಠವು ನಡೆಸಿತು.
ಪ್ರಕರಣದಲ್ಲಿ ಪ್ರತಿವಾದಿಗಳಾದ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದ್ದು, ಎರಡು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿದೆ.
ಮೈಸೂರಿನಲ್ಲಿ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಆಗಿ 1989ರಲ್ಲಿ ಇಲಾಖೆಗೆ ಸೇರಿದ್ದ ರಾಚಪ್ಪ ಅವರು ತರಬೇತಿಯ ಬಳಿಕ 1991ರ ಡಿಸೆಂಬರ್‌ನಲ್ಲಿ ಕೊಳ್ಳೇಗಾಲದ ರಾಮಾಪುರ ಪೊಲೀಸ್ ಠಾಣೆಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಆ ಸಂದರ್ಭದಲ್ಲಿ ಕಾಡುಗಳ್ಳ ವೀರಪ್ಪನ್‌ನ ಉಪಟಳ ಹೆಚ್ಚಾಗಿತ್ತು. ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವೀರಪ್ಪನ್ ಬಂಧನಕ್ಕಾಗಿ ವಿಶೇಷ ಕಾರ್ಯಪಡೆಗಳನ್ನು ರಚಿಸಿದ್ದವು.
ಅದಾಗಲೇ ವೀರಪ್ಪನ್ ಅನೇಕ ಜೀವಗಳನ್ನು ಬಲಿ ಪಡೆದಿದ್ದ. ಆತನ ಕಾರ್ಯಚಟುವಟಿಕೆ ಹೆಚ್ಚಾಗಿದ್ದ ಕೊಳ್ಳೇಗಾಲ ಹಾಗೂ ಆಸುಪಾಸಿನ ಭಾಗಗಳಲ್ಲಿ ಸರ್ಕಾರ ರೆಡ್ ಅಲರ್ಟ್ ಘೋಷಿಸಿತ್ತು. ವೀರಪ್ಪನ್ ಅಕ್ರಮ ಚಟುವಟಿಗೆ ತಡೆಯಲು ಪೊಲೀಸ್ ಇಲಾಖೆ ರಚಿಸಿದ್ದ ವಿಶೇಷ ಕಾರ್ಯಪಡೆಗೆ ರಾಚಪ್ಪ ಸೇರಿ ಐವರು ಜಿಲ್ಲಾ ಸಶಸ್ತ್ರ ಪಡೆಯ (ಡಿಎಆರ್) ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿತ್ತು.
1992ರ ಮೇ 20ರ ನಡುರಾತ್ರಿ 1 ಗಂಟೆ ಸಮಯದಲ್ಲಿ ರಾಮಾಪುರ ಪೊಲೀಸ್ ಠಾಣೆಯ ಮೇಲೆ 20ರಿಂದ 30 ಸಹಚರರೊಂದಿಗೆ ದಾಳಿ ನಡೆಸಿದ್ದ ವೀರಪ್ಪನ್, ರಾಚಪ್ಪ ಸೇರಿ ಐವರು ಪೊಲೀಸರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ. ಈ ಸಂಬಂಧ ರಾಮಾಪುರ ಠಾಣೆಯ ಎಎಸ್‌ಐ ಆಗಿದ್ದ ಸುಬ್ಬಣ್ಣ ಅವರು ನೀಡಿದ್ದ ದೂರಿನ ಆಧಾರದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ರಾಚಪ್ಪ ಮೃತಪಟ್ಟ ನಂತರ ಅವರ ಪತ್ನಿ 1993ರ ಮೇ 3ರಂದು ಮೈಸೂರು ಎಸ್‌ಪಿಗೆ ಮನವಿ ಸಲ್ಲಿಸಿ, ಮಗನಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕೋರಿದ್ದರು. ಆದರೆ, ಮಗ ಅಪ್ರಾಪ್ತನಾಗಿದ್ದ ಕಾರಣ, ಪ್ರೌಢಾವಸ್ಥೆ ತಲುಪಿದ 5 ವರ್ಷಗಳ ಒಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿ ಎಸ್‌ಪಿ ಹಿಂಬರಹ ನೀಡಿದ್ದರು. ಇದಾದ ನಂತರ ಹಲವು ಬಾರಿ ಮನವಿಗಳನ್ನು ಸಲ್ಲಿಸಿದ ಹೊರತಾಗಿಯೂ ಉದ್ಯೋಗದ ಭರವಸೆ ಈಡೇರಿಸಿರಲಿಲ್ಲ.
ಈ ಮಧ್ಯೆ, ವೀರಪ್ಪನ್ ವಿರುದ್ಧದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ರಾಚಪ್ಪ ಅವರ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ, ಅವರ ಪುತ್ರ ನಂದೀಶ್‌ಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಮಂಜೂರು ಮಾಡುವಂತೆ ಕೋರಿ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದಲೇ 2020ರ ಜೂನ್ 25ರಂದು ಪತ್ರ ಬರೆದಿದ್ದರೂ ರಾಜ್ಯ ಸರ್ಕಾರ ಈವರೆಗೂ ಅದನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ನಂದೀಶ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.