High Court of Karnataka
High Court of Karnataka 
ಸುದ್ದಿಗಳು

5 ವರ್ಷದ ಎಲ್‌ಎಲ್‌ಬಿ ಕೋರ್ಸ್‌ ಭೌತಿಕ ಪರೀಕ್ಷೆ ರದ್ದುಗೊಳಿಸಿದ್ದ ಆದೇಶ 3 ವರ್ಷದ ಕೋರ್ಸ್‌ಗೂ ಅನ್ವಯ: ಹೈಕೋರ್ಟ್

Bar & Bench

ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ಸೆಮಿಸ್ಟರ್ ಅಂತ್ಯದ ಭೌತಿಕ ಪರೀಕ್ಷೆ ನಡೆಸುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ (ಕೆಎಸ್‌ಎಲ್‌ಯು) ಸುತ್ತೋಲೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ (ಬಿಸಿಐ) ನಿರ್ಧಾರವನ್ನು ರದ್ದುಪಡಿಸಿರುವ ಹಿಂದಿನ ತನ್ನ ಆದೇಶವು ಹಾಗೂ 3 ವರ್ಷದ ಎಲ್‌ಎಲ್‌ಬಿ ಕೋರ್ಸ್‌ ಹಾಗೂ 5 ವರ್ಷದ ಎಲ್‌ಎಲ್‌ಬಿ (ಆನರ್ಸ್) ಕೋರ್ಸ್‌ಗೂ ಅನ್ವಯವಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಕೆಎಸ್‌ಎಲ್‌ಯು ಪ್ರಸಕ್ತ ವರ್ಷದಲ್ಲಿ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಕಾನೂನು ವಿದ್ಯಾರ್ಥಿಗಳಿಗೆ ಅಂತಿಮ ಸೆಮಿಸ್ಟರ್‌ ಪರೀಕ್ಷೆ ನಡೆಸುವುದನ್ನು ಪ್ರಶ್ನಿಸಿ ಸಲಿಸಲಾಗಿದ್ದ ವಿವಿಧ ಮನವಿಗಳ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರಿದ್ದ ಪೀಠವು ಈ ವಿಷಯವನ್ನು ಸ್ಪಷ್ಟಪಡಿಸಿತು.

ಫೆಬ್ರವರಿ 2 ರಂದು ಕರ್ನಾಟಕ ಹೈಕೋರ್ಟ್ ಬಿಸಿಐ ಸುತ್ತೋಲೆ ಮತ್ತು ಕೆಎಸ್‌ಎಲ್‌ಯು ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ರದ್ದುಪಡಿಸಿ, ಕೆಎಸ್‌ಎಲ್‌ಯು ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಆಫ್‌ಲೈನ್ ಪರೀಕ್ಷೆಗಳನ್ನು ನಡೆಸುವಂತೆ ಆದೇಶಿಸಿತ್ತು.

ಏಕ ಸದಸ್ಯ ಪೀಠವು ಈ ಕೆಳಗಿನ ಸ್ಪಷ್ಟೀಕರಣಗಳನ್ನು ಸಹ ನೀಡಿದೆ:

  1. ಹೈಕೋರ್ಟ್ ನೀಡಿದ ನಿರ್ದೇಶನಗಳು ಕೋವಿಡ್‌ನಿಂದ ಸಮಸ್ಯೆಯಾದ ಸೆಮಿಸ್ಟರ್‌ಗಳಿಗೆ ಅನ್ವಯವಾಗುತ್ತವೆಯೇ ವಿನಾ ಎಲ್ಲಾ ಕಾಲಕ್ಕೂ ಅನ್ವಯವಾಗುವುದಿಲ್ಲ.

  2. ಕೆಎಸ್‌ಎಲ್‌ಯು ಸದರಿ ರಿಟ್‌ ಪ್ರಕ್ರಿಯೆಯಲ್ಲಿ ಪ್ರತಿವಾದಿಯಾಗಿರುವುದರಿಂದ ಕೆಎಸ್‌ಎಲ್‌ಯು ವಿದ್ಯಾರ್ಥಿಗಳಿಗೆ ನೀಡಿರುವ ಅಂಕಪಟ್ಟಿಯ ಒಪ್ಪಿಕೊಳ್ಳುವ ಕುರಿತು ನಿರ್ದಿಷ್ಟ ನಿರ್ದೇಶಗಳನ್ನು ಬಿಸಿಐ ನೀಡುವ ಅಗತ್ಯವಿಲ್ಲ.

ಈ ವಿಚಾರಗಳನ್ನು ಪ್ರಸ್ತಾಪಿಸಿ ಪೀಠವು ಮನವಿಯನ್ನು ವಿಲೇವಾರಿ ಮಾಡಿದೆ.

ಫೆಬ್ರವರಿ 15ರಂದು ವಿಶ್ವವಿದ್ಯಾಲಯದ ಉನ್ನತಾಧಿಕಾರ ಸಮಿತಿಯು ಸಭೆ ನಡೆಸಿತ್ತು. ಸಭೆಯಲ್ಲಿ ಸಮಿತಿಯು ಮೇಲಿನ ವಿಚಾರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಸ್ಪಷ್ಟತೆ ಕೋರಿತ್ತು. ಕೆಎಸ್‌ಎಲ್‌ಯು ಪರ ವಕೀಲರು ಈ ವಿಷಯವನ್ನು ಪೀಠಕ್ಕೆ ತಿಳಿಸಿದ ಬಳಿಕ ನ್ಯಾಯಾಲಯವು ಸ್ಪಷ್ಟೀಕರಣ ನೀಡಿದೆ. ಒಂದರಿಂದ ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸುವ ಸಂಬಂಧ ವೇಳಾಪಟ್ಟಿ ಹೊರಡಿಸಿದ್ದನ್ನು ಫೆಬ್ರವರಿ 2ರಂದು ನ್ಯಾಯಾಲಯ ವಜಾಗೊಳಿಸಿತ್ತು.