Orissa HC and CJI Bobde 
ಸುದ್ದಿಗಳು

ರಥಯಾತ್ರೆಗೆ ನಿರಾಕರಣೆ: ನಿವೃತ್ತ ಸಿಜೆಐ ಬೊಬ್ಡೆ ಮೇಲೆ ದಾಳಿಗೆ ಪ್ರಚೋದಿಸಿದ ಆರೋಪಿಗೆ ಒಡಿಶಾ ಹೈಕೋರ್ಟ್‌ನಿಂದ ಜಾಮೀನು

ನಿವೃತ್ತ ಸಿಜೆಐ ಎಸ್‌ ಎ ಬೊಬ್ಡೆ ಅವರನ್ನು ನಕ್ಸಲ್‌ ಮತ್ತು ಕ್ರಿಶ್ಚಿಯನ್‌ ಭಯೋತ್ಪಾದಕ ಎಂಬ ರೀತಿಯಲ್ಲಿ ತಮ್ಮ ಸಂದೇಶದಲ್ಲಿ ಅರ್ಜಿದಾರ ಬಿಂಬಿಸಿದ್ದರು.

Bar & Bench

ಕಳೆದ ವರ್ಷ ರಥಯಾತ್ರೆ ನಡೆಸಲು ಅನುಮತಿ ನಿರಾಕರಿಸಿದ್ದ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿಗೆ ಬೂಟಿನಲ್ಲಿ ಥಳಿಸಲು ನೆರವಾಗುವಂತೆ ವಾಟ್ಸಾಪ್‌ ಸಂದೇಶದ ಮೂಲಕ ಜನರಿಗೆ ಮನವಿ ಮಾಡಿದ್ದ ಆರೋಪಿಗೆ ಒಡಿಶಾ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ.

ಆರೋಪಿಯ ಬಂಧನದ ಅವಧಿ ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಅವರನ್ನು ಬಂಧನ ಮುಕ್ತಗೊಳಿಸಲು ನ್ಯಾಯಾಲಯ ಆದೇಶಿಸಿರುವುದನ್ನು ನ್ಯಾಯಮೂರ್ತಿ ಎಸ್‌ ಕೆ ಪಾಣಿಗ್ರಹಿ ನೇತೃತ್ವದ ಏಕಸದಸ್ಯ ಪೀಠವು ಗಣನೆಗೆ ತೆಗೆದುಕೊಂಡು ಆದೇಶ ಮಾಡಿದೆ.

ತನಿಖಾಧಿಕಾರಿ ವಿಚಾರಣೆಗೆ ಕರೆದಾಗ ಹಾಜರಾಗಬೇಕು ಹಾಗೂ ಸಹಕರಿಸಬೇಕು. ಭವಿಷ್ಯದಲ್ಲಿ ಯಾವುದೇ ತೆರನಾದ ಕ್ರಿಮಿನಲ್‌ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಾರದು. ಆರೋಪಿಗೆ ನೀಡಲಾಗಿರುವ ಸ್ವಾತಂತ್ರ್ಯವನ್ನು ಅವರು ದುರ್ಬಳಕೆ ಮಾಡಿಕೊಳ್ಳಬಾರದು. ಪ್ರಕರಣ ಇತ್ಯರ್ಥವಾಗುವವರೆಗೂ ಆರೋಪಿಯು ವಿಚಾರಣಾಧೀನ ನ್ಯಾಯಾಲಯದಲ್ಲಿ, ವಿಚಾರಣೆಯಲ್ಲಿ ಖುದ್ದು ಹಾಜರಿರಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಗಲಭೆಗೆ ಪ್ರಚೋದನೆ, ಧರ್ಮ ಮತ್ತು ಭಾಷೆ ಇತ್ಯಾದಿ ವಿಚಾರಗಳ ಆಧಾರದಲ್ಲಿ ಎರಡು ಗುಂಪುಗಳ ನಡುವೆ ದ್ವೇಷ ಹರಡುವುದು, ಪೂರ್ವಾಗ್ರಹಪೀಡಿತವಾಗಿ ರಾಷ್ಟ್ರೀಯ ಐಕ್ಯತೆ, ಆಪಾದನೆ ಮಾಡುವುದು ಧಾರ್ಮಿಕ ಭಾವನೆ ಕೆರಳಿಸುವುದು, ಶಾಂತಿಗೆ ಭಂಗ ಉಂಟು ಮಾಡುವುದು, ಸಾರ್ವಜನಿಕರಿಗೆ ಕೇಡುಂಟು ಮಾಡುವುದು ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್‌ 66ಎಫ್‌ ಅಡಿ (ಸೈಬರ್‌ ಭಯೋತ್ಪಾದನೆ) ದೂರು ದಾಖಲಿಸಲಾಗಿದೆ.

ಕಳೆದ ವರ್ಷ ರಥಯಾತ್ರೆ ನಡೆಸಲು ನಿವೃತ್ತ ಸಿಜೆಐ ಬೊಬ್ಡೆ ನೇತೃತ್ವದ ಪೀಠವು ಅನುಮತಿ ನಿರಾಕರಿಸಿದ್ದಕ್ಕೆ ಧರ್ಮ ರಕ್ಷ್ಯಕ್‌ ಶ್ರೀ ದಾರಾ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಅರ್ಜಿದಾರ ಆಕ್ಷೇಪಿಸಿದ್ದರು. ರಥಯಾತ್ರೆ ನಿರ್ಬಂಧಿಸುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವುದಕ್ಕೆ ನಿವೃತ್ತ ಸಿಜೆಐ ಕಾರಣ ಎಂದು ಅರ್ಜಿದಾರರು ಆಪಾದಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಬೊಬ್ಡೆ ಅವರ ಮೇಲೆ ಬೂಟಿನ ದಾಳಿ ನಡೆಸಲು ತಮಗೆ ಬೆಂಬಲ ನೀಡುವಂತೆ ಕೋರಿದ್ದ ಸಂದೇಶವನ್ನು ವಾಟ್ಸಾಪ್‌ ಗುಂಪುಗಳಲ್ಲಿ ಹಂಚಿಕೊಂಡಿದ್ದರು. ಇದೇ ಸಂದೇಶದಲ್ಲಿ ನಿವೃತ್ತ ಸಿಜೆಐ ಬೊಬ್ಡೆ ಅವರನ್ನು ನಕ್ಸಲ್‌ ಮತ್ತು ಕ್ರಿಶ್ಚಿಯನ್‌ ಭಯೋತ್ಪಾದಕ ಎಂದು ಬಿಂಬಿಸಿದ್ದರು.

ವಾಟ್ಸಾಪ್‌ ಸಂದೇಶ ಆಧರಿಸಿ ಅರ್ಜಿದಾರರ ವಿರುದ್ಧ ದೇಶದ ವಿಭಿನ್ನ ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗಿದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಮತ್ತೊಂದು ಪ್ರಕರಣದಲ್ಲಿ ಒಡಿಶಾ ಹೈಕೋರ್ಟ್‌ ಆರೋಪಿಗೆ ಜಾಮೀನು ನೀಡಿದೆ. ಹೀಗಾಗಿ, ಈ ಪ್ರಕರಣದಲ್ಲೂ ಜಾಮೀನು ನೀಡಬೇಕು ಎಂದು ಕೋರಿದರು. ಇದಕ್ಕೆ ನ್ಯಾಯಾಲಯ ಅನುಮತಿಸಿತು.